ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ: ಸಚಿವ ಸುರೇಶ್‌ ವಿರುದ್ಧ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಅಗ್ನಿಶಾಮಕ ದಳದ ಅಧಿಕಾರಿಗಳು 2017 ಮತ್ತು 2018ರಲ್ಲಿ ಕಟ್ಟಡವನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ, 2018ರ ಜನವರಿ 31ರ ನಂತರ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದಿರುವ ನ್ಯಾಯಾಲಯ.
Byrathi Suresh and Karnataka HC
Byrathi Suresh and Karnataka HC
Published on

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರ ಒಡೆತನದ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಸುರಕ್ಷತಾ ನಿಯಮ ಉಲ್ಲಂಘಿಸಿದ ಆರೋಪದಡಿ ಸಚಿವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ.

ಸಚಿವ ಬಿ ಎಸ್‌ ಸುರೇಶ್‌ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅಗ್ನಿಶಾಮಕ ದಳದ ಅಧಿಕಾರಿಗಳು 2017 ಮತ್ತು 2018ರಲ್ಲಿ ಕಟ್ಟಡವನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ, 2018ರ ಜನವರಿ 31ರ ನಂತರ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದರೆ, ಸಿಆರ್‌ಪಿಸಿ ಸೆಕ್ಷನ್‌ 468ರ ಪ್ರಕಾರ ಘಟನೆ ನಡೆದ ಬಗ್ಗೆ ಪರಿಶೀಲಿಸಿದ ಆರು ತಿಂಗಳಲ್ಲಿ ದೂರು ದಾಖಲಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ 13 ತಿಂಗಳ ನಂತರ ಅಂದರೆ 2019ರಲ್ಲಿ ದೂರು ದಾಖಲಿಸಲಾಗಿದೆ. ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

2005ರಲ್ಲಿ ನಿರ್ಮಾಣ ಮಾಡಲಾಗಿದ್ದ ವಾಣಿಜ್ಯ ಸಂಕೀರ್ಣವನ್ನು 2014ರಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಭೈರತಿ ಸುರೇಶ್‌ ಖರೀದಿಸಿದ್ದರು. 2017 ಮತ್ತು 2018ರಲ್ಲಿ ಹಲವು ಭಾರಿ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಗ್ನಿ ಶಾಮಕ ದಳದ ಅಧಿಕಾರಿಗಳು, ಕಟ್ಟಡದಲ್ಲಿ ಅಗ್ನಿಶಾಮಕ ಸುರಕ್ಷತಾ ನಿಯಮಗಳು ಪಾಲನೆಯಾಗಿಲ್ಲ ಎಂದು ತಿಳಿಸಿದ್ದರು. ನಂತರ ಅಗ್ನಿಶಾಮಕ ಸುರಕ್ಷತೆ ಕ್ರಮಗಳನ್ನು ಪಾಲಿಸಿಲ್ಲ ಎಂದು 2019ರ ಏಪ್ರಿಲ್‌ 2ರಂದು ದೂರು ದಾಖಲಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ 2019ರ ಅಕ್ಟೋಬರ್‌ 11ರಂದು ಆರೋಪ ಪಟ್ಟಿ ಸಲ್ಲಿಸಿದ್ದರು. 2023ರಲ್ಲಿ ಅಧೀನ ನ್ಯಾಯಾಲಯವು ಸಚಿವ ಭೈರತಿ ಸುರೇಶ್‌ ವಿರುದ್ಧ ಸಮನ್ಸ್‌ ಜಾರಿಗೊಳಿಸಿತ್ತು. ಪ್ರಕರಣ ಕುರಿತು ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಭೈರತಿ ಸುರೇಶ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com