ಗುತ್ತಿಗೆ ಜಮೀನು ಷರತ್ತು ಉಲ್ಲಂಘನೆ: ಕ್ರಮಕೈಗೊಳ್ಳಲು ತಹಶೀಲ್ದಾರ್‌ಗೆ ಹೈಕೋರ್ಟ್‌ ನಿರ್ದೇಶನ

ಪ್ರತಿ ಎರಡು ವರ್ಷಗಳಿಗೆ ತಹಶೀಲ್ದಾರರು ಹೆಚ್ಚಿಸುವ ಶೇ.10ರಷ್ಟು ಗುತ್ತಿಗೆ ದರವನ್ನು ಪಾವತಿಸಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಈ ಷರತ್ತುಗಳನ್ನು ಅಸೋಸಿಯೇಷನ್ ಉಲ್ಲಂಘಿಸಿದೆ ಎಂದು ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ತುಮಕೂರಿನ ಬೆಳಗುಂಬ ಗ್ರಾಮದ ಸರ್ವೆ ನಂಬರ್ 92ರಲ್ಲಿ ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್‌ಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿರುವ ಎರಡು ಎಕರೆ ಜಮೀನಿನ ಬಳಕೆಗೆ ವಿಧಿಸಲಾಗಿದ್ದ ಗುತ್ತಿಗೆ ಷರತ್ತುಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಬೆಳಗುಂಬ ಗ್ರಾಮದ ನಿವಾಸಿ ಬಿ ಎಸ್ ವೆಂಕಟೇಶ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ  ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ತುಮಕೂರು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಅರ್ಜಿದಾರರು ಆರೋಪಿಸಿರುವಂತೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿರುವ ಎರಡು ಎಕರೆ ಜಮೀನಿನ ಬಳಕೆಯಲ್ಲಿ ತುಮಕೂರಿನ ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದರೆ, ವಾಣಿಜ್ಯ ಉದ್ದೇಶದಿಂದ ಆ ಜಾಗದಲ್ಲಿ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್ 2013ರಲ್ಲಿ ಬೆಳಗುಂಬ ಗ್ರಾಮದ ಸರ್ವೆ ನಂಬರ್ 92ರಲ್ಲಿ 30 ವರ್ಷದ ಗುತ್ತಿಗೆ ಅವಧಿಗೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು. ಈ ವೇಳೆ ಜಮೀನನ್ನು ಯಾವ ಉದ್ದೇಶಕ್ಕೆ ಪಡೆದುಕೊಳ್ಳಲಾಗಿದೆ, ಅದಕ್ಕೆ ಮಾತ್ರ ಬಳಕೆ ಮಾಡಬೇಕು. ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಪ್ರತಿ ಎರಡು ವರ್ಷಗಳಿಗೆ ತಹಶೀಲ್ದಾರರು ಹೆಚ್ಚಿಸುವ ಶೇ.10ರಷ್ಟು ಗುತ್ತಿಗೆ ದರವನ್ನು ಪಾವತಿಸಬೇಕು ಎಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ, ಈ ಷರತ್ತುಗಳನ್ನು ಅಸೋಸಿಯೇಷನ್ ಉಲ್ಲಂಘಿಸಿದೆ. ಇಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಬದಲಿಗೆ ವಾಣಿಜ್ಯ ಉದ್ದೇಶದ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Kannada Bar & Bench
kannada.barandbench.com