ವೈಲ್ಡ್‌ ಕರ್ನಾಟಕ ಚಿತ್ರ ತಯಾಕರಿಂದ ಆದೇಶ ಉಲ್ಲಂಘನೆ: ಆರೋಪ ನಿಗದಿಗೆ ನಿರ್ಧರಿಸಿದ ಹೈಕೋರ್ಟ್‌

ಪಿಐಎಲ್‌ ವಿಚಾರಣೆ ನಡೆಸಿದ್ದ ಹೈಕೋರ್ಟ್‌ 2021ರ ಜೂ.29ರಂದು ಚಿತ್ರದ ಯಾವುದೇ ಭಾಗವನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶ ಮಾಡಿತ್ತು. ಇದನ್ನು ಉಲ್ಲಂಘಿಸಿ 2021ರ ಜುಲೈನಲ್ಲಿ ಸಿನಿಮಾದ ತುಣುಕುಗಳನ್ನು ಡಿಸ್ಕವರಿ ಚಾನೆಲ್‌ ಪ್ರಸಾರ ಮಾಡಿತ್ತು.
Wild Karnataka and Karnataka HC
Wild Karnataka and Karnataka HC

ನ್ಯಾಯಾಲಯವು 2021ರಲ್ಲಿ ಮಾಡಿರುವ ಆದೇಶ ಉಲ್ಲಂಘಿಸಿರುವ ಆರೋಪದ ಮೇಲೆ “ವೈಲ್ಡ್‌ ಕರ್ನಾಟಕ” ಚಿತ್ರ/ಕ್ಲಿಪಿಂಗ್‌ ಪ್ರಸಾರ ಮಾಡಿದ್ದಕ್ಕಾಗಿ ಚಿತ್ರ ತಯಾರಕರಾದ ಶರತ್‌ ಚಂಪತಿ, ಕಲ್ಯಾಣ್‌ ವರ್ಮಾ ಮತ್ತು ಜೆ ಎಸ್‌ ಅಮೋಘವರ್ಷ ಹಾಗೂ ಡಿಸ್ಕವರಿ ಇಂಡಿಯಾ ಮತ್ತು ಬಿಬಿಸಿ ಯುನೈಟೆಡ್‌ ಕಿಂಗ್‌ಡಮ್‌ ಚಾನೆಲ್‌ಗಳ ಪ್ರತಿನಿಧಿಗಳು ಹಾಗೂ ನೆಟ್‌ಫ್ಲಿಕ್ಸ್‌ ವಿರುದ್ಧ ಆರೋಪ ನಿಗದಿ ಮಾಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ಧರಿಸಿದೆ.

ಯುನೈಟೆಡ್‌ ಕಿಂಗ್‌ಡಮ್‌ನ ಐಕಾನ್‌ ಫಿಲ್ಮ್ಸ್‌ ಲಿಮಿಟೆಡ್‌ ಪ್ರತಿನಿಧಿಗಳು ಹಾಗೂ ಐಟಿವಿ ಗ್ಲೋಬಲ್‌ ಡಿಸ್ಟ್ರಿಬ್ಯೂಷನ್‌ ಲಿಮಿಟೆಡ್‌ ವಿತರಕರ ವಿರುದ್ಧವೂ ಆರೋಪ ನಿಗದಿ ಮಾಡುವುದಾಗಿ ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ರವೀಂದ್ರ ಎನ್‌ ರೆಡ್ಕರ್‌ ಮತ್ತು ಬೆಂಗಳೂರಿನ ಉಲ್ಲಾಸ್‌ ಕುಮಾರ್‌ ಆರ್‌ ಎಸ್‌ ಕೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಪೀಠವು ಈಚೆಗೆ ಮಧ್ಯಂತರ ಆದೇಶ ಮಾಡಿದೆ. ಈ ಹಿಂದೆ ಚಿತ್ರ ಪ್ರಸಾರ ಮಾಡದಂತೆ ಕೋರಿ ರವೀಂದ್ರ ಮತ್ತು ಉಲ್ಲಾಸ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

“ಈ ಹಂತದಲ್ಲಿ, ಆರೋಪ ನಿಗದಿಗೆ ಪ್ರತಿಕ್ರಿಯಿಸುವಂತೆ ಆರೋಪಿಗಳಿಗೆ ನಿರ್ದೇಶಿಸುವ ಸಲುವಾಗಿ ಪ್ರಕರಣವನ್ನು ಪರಿಗಣಿಸುತ್ತಿದ್ದೇವೆ. ಮಧ್ಯಂತರ ಆದೇಶ ಮಾಡಿದ ಹೊರತಾಗಿಯೂ ಚಿತ್ರದ ತುಣುಕುಗಳನ್ನು ಪ್ರಸಾರ ಮಾಡಲಾಗಿದೆ ಎಂದು ದಾಖಲೆಗಳು ತೋರಿಸಿವೆ. ಇದನ್ನು ಯಾರು ಪ್ರಸಾರ ಮಾಡಿದರು ಎಂಬುದು ವಿಚಾರವೇ ಅಲ್ಲ. ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದನ್ನು ದಾಖಲಿಸಲು ವಿಚಾರಣೆ ಅಗತ್ಯವಿದೆ. ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸಲು ಸಾಕಷ್ಟು ಅಂಶಗಳು ಇವೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 2021ರ ಜೂನ್‌ 22ರಂದು ಹೈಕೋರ್ಟ್‌ಗೆ ರವೀಂದ್ರ ಎನ್‌ ರೆಡ್ಕರ್‌ ಮತ್ತು ಉಲ್ಲಾಸ್‌ ಕುಮಾರ್‌ ಅವರು ಪಿಐಎಲ್‌ ಸಲ್ಲಿಸಿದ್ದು, ವೈಲ್ಡ್‌ ಕರ್ನಾಟಕ ಚಿತ್ರವು ಲಾಭದ ಉದ್ದೇಶ ಹೊಂದಿಲ್ಲ. ಸಂರಕ್ಷಣೆ ಆದ್ಯತೆ ನೀಡಲು ಮತ್ತು ಶೈಕ್ಷಣಿಕ ಉದ್ದೇಶದಿಂದ ವೈಲ್ಡ್‌ ಕರ್ನಾಟಕ ಚಿತ್ರ ರೂಪಿಸಲಾಗಿದೆ. ಆದರೆ, ಚಿತ್ರ ನಿರ್ಮಾಪಕರು ಕರ್ನಾಟಕ ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಅಥವಾ ಅದರ ಅನುಮತಿ ಪಡೆಯದೇ ವಾಣಿಜ್ಯ ಉದ್ದೇಶದಿಂದ ಚಿತ್ರ ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂದು ಆಕ್ಷೇಪಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ್ದ ಪೀಠವು 2021ರ ಜೂನ್‌ 29ರಂದು ಚಿತ್ರ ನಿರ್ಮಾಪಕರು, ಬೆಂಗಳೂರು ಮೂಲದ ಮಡ್‌ಸ್ಕಿಪ್ಪರ್‌ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಬೇರೆ ಯಾರೂ ಕರ್ನಾಟಕ ಅರಣ್ಯ ಇಲಾಖೆಯ ಜೊತೆ ಮಾಡಿಕೊಂಡಿರುವ ಒಪ್ಪಂದದ ಭಾಗವಾಗಿ ಸೆರೆ ಹಿಡಿದಿರುವ ಚಿತ್ರದ ಯಾವುದೇ ತುಣುಕಿನ ಬಳಕೆ, ಪ್ರಕಟ, ಪುನರ್‌ ರೂಪಿಸುವುದು, ಪ್ರಸಾರ, ಮಾರ್ಕೆಟಿಂಗ್‌, ಮಾರಾಟ, ವಿತರಣೆ, ಕಚ್ಚಾ ತುಣಕನ್ನೂ ಬಳಕೆ ಮಾಡಬಾರದು ಎಂದು ನಿರ್ಬಂಧಿಸಿತ್ತು.

ಒಪ್ಪಂದದ ನಿಯಮಗಳ ಪ್ರಕಾರ ಹುಲಿ ಸಂರಕ್ಷಣಾ ಫೌಂಡೇಶನ್‌ಗೆ (ಟಿಎಫ್‌ಸಿ) ಯಾವುದೇ ಮೊತ್ತವನ್ನು ಪಾವತಿಸದೆ ವಿಮಾನಯಾನ ಸಂಸ್ಥೆಗಳು, ಪ್ರಸಾರಕರು, ನೆಟ್‌ವರ್ಕ್‌ಗಳು, ಚಾನೆಲ್‌ಗಳು, ಸ್ಟ್ರೀಮಿಂಗ್ ಪಾಲುದಾರರು ಮತ್ತು ಥಿಯೇಟರ್‌ಗಳಿಗೆ ಚಲನಚಿತ್ರವನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ವಿತರಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಪ್ರಧಾನ ಲೆಕ್ಕ ಮಹಾನಿರ್ದೇಶಕರಿಗೆ ವೈಲ್ಡ್‌ ಕರ್ನಾಟಕ ಯೋಜನೆಯ ಆಡಿಟ್‌ ಮಾಡಲು ನಿರ್ದೇಶಿಸಲಾಗಿದೆ ಎಂದು ಸರ್ಕಾರವು 2022ರ ಆಗಸ್ಟ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನ್ಯಾಯಾಂಗ ನಿಂದನೆ: 2021ರ ನವೆಂಬರ್‌ನಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಿ 2021ರ ಜುಲೈನಲ್ಲಿ ಸಿನಿಮಾದ ತುಣುಕುಗಳನ್ನು ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದರು. ಆನಂತರ ಬಿಬಿಸಿ ಮತ್ತು ನೆಟ್‌ಫ್ಲಿಕ್ಸ್‌ ಅನ್ನು ದಾವೆಯಲ್ಲಿ ಪ್ರತಿವಾದಿಗನ್ನಾಗಿಸಲಾಗಿದೆ.

2023ರ ಆರಂಭದಲ್ಲಿ ನೆಟ್‌ಫ್ಲಿಕ್ಸ್‌ ಕೆಲವು ವಿಡಿಯೊ ತುಣುಕುಗಳನ್ನು ಸ್ಟ್ರೀಮ್‌ ಮಾಡಿದೆ. ಯುನೈಟೆಡ್‌ ಕಿಂಗಡಮ್‌ನ ಬಿಬಿಸಿಯ ಭಾಗವಾದ ಬಿಬಿಸಿ ಅಮೆರಿಕಾವು ಮಾರ್ಚ್‌-ಏಪ್ರಿಲ್‌ನಲ್ಲಿ ನ್ಯಾಯಾಲಯದ ಆದೇಶ ಗಮನಕ್ಕೆ ಬಂದಿದೆ ಎಂದು ಹೇಳಿಯೂ ಅದು 2023ರ ಡಿಸೆಂಬರ್‌ ಅಂತ್ಯದವರೆಗೆ ಚಿತ್ರ/ತುಣುಕು ಪ್ರಸಾರ ಮಾಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ವಿಚಾರಣೆಯ ಆರಂಭದಲ್ಲಿ ಐಕಾನ್‌ ಫಿಲ್ಮ್ಸ್‌ ಹುಲಿ ಸಂರಕ್ಷಣಾ ಫೌಂಡೇಶನ್‌ಗೆ (ಟಿಸಿಎಫ್‌) 15,000 ಪೌಂಡ್‌ ಪಾವತಿಸಲು ಮುಂದಾಗಿತ್ತು. ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯವು ಆರೋಪಿತ ಸಂಸ್ಥೆಗಳು ತಮ್ಮ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ದೊಡ್ಡ ಮೊತ್ತವನ್ನು ಟಿಸಿಎಫ್‌ಗೆ ದೇಣಿಗೆ ನೀಡಿದರೆ ಪ್ರಕರಣಕ್ಕೆ ಅಂತ್ಯ ಹಾಡುವುದಾಗಿ ಹೇಳಿತ್ತು. ಬಿಬಿಸಿ ಹೊರತುಪಡಿಸಿ ಇತರೆ ಆರೋಪಿಗಳು ಟಿಸಿಎಫ್‌ಗೆ ಹಣ ದೇಣಿಗೆ ನೀಡುವ ಪ್ರಸ್ತಾವ ಸಲ್ಲಿಸಿದ್ದರು.

ಅದಾಗ್ಯೂ, ನ್ಯಾಯಾಲಯವು ತನ್ನ ಮಧ್ಯಂತರ ಆದೇಶ ಉಲ್ಲಂಘಿಸಿರುವ ವಿಚಾರ ಹಾಗೆ ಉಳಿಯಲಿದೆ ಎಂದಿದ್ದು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಜನವರಿ 8ರಂದು ಹಾಜರಾಗುವಂತೆ ಆರೋಪಿಗಳಿಗೆ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com