ಖಾಸಗಿ ಹಕ್ಕಿನ ಉಲ್ಲಂಘನೆ: ಮೊಬೈಲ್‌ ಟವರ್‌ ಸ್ಥಳದ ಮಾಹಿತಿ ನೀಡಲು ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು

“ಪ್ರತಿಯೊಬ್ಬ ನಾಗರಿಕನಿಗೂ ಖಾಸಗಿತನ ಕಾಪಾಡಿಕೊಳ್ಳುವ ಹಕ್ಕಿದೆ, ಕೌಟುಂಬಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಮೂಲಭೂತ ಹಕ್ಕು ಉಲ್ಲಂಘಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Karnataka High Court
Karnataka High Court
Published on

ವೈವಾಹಿಕ ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಯ ಮೊಬೈಲ್ ಟವರ್ ಸ್ಥಳ ಹಾಗೂ ಕರೆಗಳ ಮಾಹಿತಿ ನೀಡಲು ಆದೇಶಿಸಲಾಗದು. ಏಕೆಂದರೆ ಅದು ಪ್ರಕರಣದಲ್ಲಿ ಪಕ್ಷಕಾರರಾಗಿರದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಲಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ಮಾಡಿದೆ.

ತಮ್ಮ ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೂರನೇ ವ್ಯಕ್ತಿ (ಪ್ರಿಯಕರ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಮೊಬೈಲ್ ಟವರ್ ಮಾಹಿತಿ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

“ಪ್ರತಿಯೊಬ್ಬ ನಾಗರಿಕನಿಗೂ ಖಾಸಗಿತನ ಕಾಪಾಡಿಕೊಳ್ಳುವ ಹಕ್ಕಿದೆ, ಕೌಟುಂಬಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಯ ವಿವರ ನೀಡುವಂತೆ ಆದೇಶಿಸುವ ಮೂಲಕ ಮೂಲಭೂತ ಹಕ್ಕು ಉಲ್ಲಂಘಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘‘ಭಾರತೀಯ ಸಂವಿಧಾನದ 21ನೇ ವಿಧಿಯಡಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿದೆ. ಇದರಲ್ಲಿ ಖಾಸಗಿತನದ ಹಕ್ಕೂ ಸಹ ಸೇರಿದೆ. ಇದನ್ನು ಯಾರೊಬ್ಬರೂ ಮೊಟಕುಗೊಳಿಸಲಾಗದು’’ ಎಂದು ನ್ಯಾಯಾಲಯ ವಿವರಿಸಿದೆ.

“ಹಾಲಿ ಪ್ರಕರಣದಲ್ಲಿ ಅರ್ಜಿದಾರರ ಮೊಬೈಲ್ ಟವರ್ ವಿವರ ಮತ್ತು ಕರೆಗಳ ವಿವರಗಳನ್ನು ನೀಡುವಂತೆ ಆದೇಶಿಸಲಾಗಿದೆ. ಇದೇ ಮೊದಲ ಬಾರಿಗೆ, ಅದೂ ಅನೈತಿಕ ಸಂಬಂಧದ ಕಾರಣಕ್ಕೆ ಅರ್ಜಿದಾರರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಈ ವಿಚಾರಣೆಯಲ್ಲಿ ಆತ ಮೂರನೇ ವ್ಯಕ್ತಿಯಾಗಿದ್ದಾರೆ. ಪತಿ ತನ್ನ ಪತ್ನಿ, ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಅನುಮಾನವನ್ನು ಸಾಬೀತುಪಡಿಸುವ ಸಲುವಾಗಿ ಆತನ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ. ಅದಕ್ಕೆ ಕಾನೂನಿನ ಮನ್ನಣೆ ಇಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಪ್ರತಿಯೊಬ್ಬ ಪ್ರಜೆಗೂ ತನ್ನ, ತನ್ನ ಕುಟುಂಬ, ವಿವಾಹ ಮತ್ತು ಇತರೆ ಸಂಬಂಧಗಳ ವಿಚಾರದಲ್ಲಿ ತನ್ನ ಖಾಸಗಿತನವನ್ನು ಕಾಯ್ದುಕೊಳ್ಳುವ ಹಕ್ಕಿದೆ. ಮೊಬೈಲ್ ಮಾಹಿತಿಯೂ ಸಹ ಖಾಸಗಿತನದ ಭಾಗವಾಗಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ಊರ್ಜಿತವಾಗುವುದಿಲ್ಲ. ಖಾಸಗಿತನಕ್ಕೆ ಧಕ್ಕೆ ತರಲಾಗದು” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಯುವ ದಂಪತಿ ನಡುವೆ ಕೌಟುಂಬಿಕ ವ್ಯಾಜ್ಯವಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ಅವರು ಪರಸ್ಪರ ದಾವೆಗಳನ್ನು ಹೂಡಿದ್ದಾರೆ. ತನ್ನ ಪತ್ನಿ ಮೂರನೇ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅದನ್ನು ಸಾಬೀತುಪಡಿಸಲು ಮೂರನೇ ವ್ಯಕ್ತಿಯ ಮೊಬೈಲ್ ಕರೆ ಮತ್ತು ಟವರ್ ವಿವರಗಳನ್ನು ನೀಡುವಂತೆ ಮೊಬೈಲ್ ಕಂಪೆನಿಗೆ ನಿರ್ದೇಶನ ನೀಡುವಂತೆ ಪತಿ ಕೋರಿದ್ದರು. ಇದನ್ನು ಮಾನ್ಯ ಮಾಡಿದ್ದ ಕೌಟುಂಬಿಕ ನ್ಯಾಯಾಲಯ 2019ರ ಸೆಪ್ಟೆಂಬರ್‌ 23ರಂದು ಪ್ರಿಯಕರನ ಮೊಬೈಲ್‌ ಟವರ್‌ ಇರುವ ಸ್ಥಳದ ಮಾಹಿತಿ ನೀಡುವಂತೆ ಮೊಬೈಲ್ ಕಂಪೆನಿಗೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಪ್ರಿಯಕರ, ವಿಚ್ಚೇದನ ಪ್ರಕರಣದಲ್ಲಿ ತಾನು ಪ್ರತಿವಾದಿಯಲ್ಲದಿದ್ದರೂ ನ್ಯಾಯಾಲಯ ಆದೇಶಿಸಿದೆ.  ತನ್ನ ಮೊಬೈಲ್ ಟವರ್ ಮಾಹಿತಿಯಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಅರ್ಜಿದಾರರನ್ನು ವಕೀಲ ಪಿ ಎನ್‌ ಮನಮೋಹನ್‌, ಪ್ರತಿವಾದಿಗಳನ್ನು ವಕೀಲರಾದ ಎನ್‌ ಗೌತಮ್‌ ರಘುನಾಥ್‌ ಮತ್ತು ಅರುಣ್‌ ಗೋವಿಂದರಾಜ್‌ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com