ವಿಸ್ಮಯಾ ವರದಕ್ಷಿಣೆ ಸಾವು: ಪತಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ಕೇರಳ ನ್ಯಾಯಾಲಯ

24 ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಜೂನ್ 21, 2021ರಂದು ಗಂಡನ ಮನೆಯಲ್ಲಿ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ವಿಸ್ಮಯಾ ವರದಕ್ಷಿಣೆ ಸಾವು: ಪತಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ಕೇರಳ ನ್ಯಾಯಾಲಯ
A1

ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ವರದಕ್ಷಿಣೆ ಸಾವು ಪ್ರಕರಣದಲ್ಲಿ ಪತಿ ಕಿರಣ್ ಕುಮಾರ್ ದೋಷಿ ಎಂದು ಕೇರಳದ ನ್ಯಾಯಾಲಯವೊಂದು ಸೋಮವಾರ ತೀರ್ಪು ನೀಡಿದೆ. ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿನಿಯು ವರದಕ್ಷಿಣೆ ದೌರ್ಜನ್ಯದ ಹಿನ್ನೆಲೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು.

ಕೊಲ್ಲಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಜಿತ್ ಕೆ.ಎನ್. ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣ ಕುರಿತಂತೆ ನಾಳೆ ವಿಚಾರಣೆ ನಡೆಸಲಿದ್ದಾರೆ.

24 ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಜೂನ್ 21, 2021ರಂದು ಪತಿ ಕುಮಾರ್ ಅವರ ಮನೆಯಲ್ಲಿ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಪ್ರಕರಣವು ಆತ್ಮಹತ್ಯೆ ಎಂದು ಬಿಂಬಿತವಾಗಿತ್ತಾದರೂ ತನಿಖೆಯ ನಂತರ ಇದೊಂದು ಕೊಲೆಯಾಗಿರುವ ದಟ್ಟ ಸಾಧ್ಯತೆ ಮೂಡಿತು.

Also Read
ಹಾಥ್‌ರಸ್ ಮಗಳಿಗೆ ನ್ಯಾಯ ಒದಗಿಸಲು ನನ್ನ ಹೋರಾಟ: ‘ನಿರ್ಭಯಾ’ ವಕೀಲೆ ಸೀಮಾ ಕುಶ್ವಾಹಾ

ಕುಮಾರ್‌ ವಿರುದ್ಧ ಐಪಿಸಿ ಸೆಕ್ಷನ್‌ ಸೆಕ್ಷನ್ 498 ಎ (ವರದಕ್ಷಿಣೆಗಾಗಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 304 ಬಿ (ವರದಕ್ಷಿಣೆ ಸಾವು) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಸಾಯುವ ಕೆಲ ದಿನಗಳ ಮುನ್ನ ವಿಸ್ಮಯ ತಮ್ಮ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವುದನ್ನು ಬಿಂಬಿಸುವ ತನ್ನ ದೇಹದ ಮೇಲಾಗಿದ್ದ ಗಾಯಗಳ ಚಿತ್ರಗಳನ್ನು ಸಂಬಂಧಿಕರಿಗೆ ವಾಟ್ಸಾಪ್‌ ಮಾಡಿದ್ದಳು. ಆಕೆ ಸಾವನ್ನಪ್ಪಿದ ಬಳಿಕ ಈ ಚಿತ್ರಗಳು ಮತ್ತು ಆಕೆಯ ಧ್ವನಿಯನ್ನು ಕುಟುಂಬದವರು ಹಂಚಿಕೊಂಡಿದ್ದರು.

Kannada Bar & Bench
kannada.barandbench.com