ನ್ಯಾ. ಮುರಳೀಧರ್ ವಿರುದ್ಧದ ಹೇಳಿಕೆ: ದೆಹಲಿ ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ ವಿವೇಕ್ ಅಗ್ನಿಹೋತ್ರಿ

ಕ್ಷಮೆ ಯಾಚಿಸುವುದಕ್ಕಾಗಿ ಮುಂದಿನ ವಿಚಾರಣೆ ನಡೆಯಲಿರುವ 2023ರ ಮಾರ್ಚ್ 16 ರಂದು ವಿವೇಕ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿದ್ದಾರೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಲಯ ಪ್ರಕರಣ ಮುಂದೂಡಿತು.
Vivek Agnihotri
Vivek Agnihotri

ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ  ಎಸ್ ಮುರಳೀಧರ್ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದೆಹಲಿ ಹೈಕೋರ್ಟ್‌ಗೆ ಮಂಗಳವಾರ ಬೇಷರತ್ ಕ್ಷಮೆಯಾಚಿಸಿದ್ದಾರೆ.

ನ್ಯಾಯಮೂರ್ತಿಗಳ ವಿರುದ್ಧದ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸುವುದಾಗಿ ಅಗ್ನಿಹೋತ್ರಿ ಅವರು ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ, ಅಗ್ನಿಹೋತ್ರಿ ಅವರು ವಿಚಾರಣೆಗೆ ಖುದ್ದುಹಾಜರಾಗಬೇಕೆಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ಪೀಠ ತಾಕೀತು ಮಾಡಿದೆ.

ಹೀಗಾಗಿ  ಕ್ಷಮೆ ಯಾಚಿಸುವುದಕ್ಕಾಗಿ ಮುಂದಿನ ವಿಚಾರಣೆ ನಡೆಯಲಿರುವ 2023ರ ಮಾರ್ಚ್ 16 ರಂದು ವಿವೇಕ್‌ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲಿದ್ದಾರೆ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಲಯ ಪ್ರಕರಣ ಮುಂದೂಡಿತು.

Also Read
ಸುನಂದಾ ಪುಷ್ಕರ್‌ ಸಾವಿನ ಪ್ರಕರಣ: ಶಶಿ ತರೂರ್‌ ಖುಲಾಸೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ದೆಹಲಿ ಪೊಲೀಸ್‌

“ನ್ಯಾಯಾಂಗ ನಿಂದನೆ ಮಾಡಿರುವ ಅವರು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸುತ್ತಿದ್ದೇವೆ. ಖುದ್ದು ಪಶ್ಚಾತ್ತಾಪ ವ್ಯಕ್ತಪಡಿಸಲು ಅವರಿಗೇನಾದರೂ ತೊಂದರೆಯಿದೆಯೇ? ಪಶ್ಚಾತ್ತಾಪವನ್ನು ಯಾವಾಗಲೂ ಅಫಿಡವಿಟ್‌ ಮೂಲಕ ವ್ಯಕ್ತಪಡಿಸಲಾಗದು” ಎಂದು ನ್ಯಾಯಾಲಯ ಅಸಮಾಧಾನ ಸೂಚಿಸಿತು.

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖಾ ಅವರಿಗೆ ಜಾಮೀನು ನೀಡಿದ ನ್ಯಾ. ಎಸ್‌ ಮುರಳೀಧರ್‌ ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಕಾಶ್ಮೀರ್‌ ಫೈಲ್ಸ್‌ ಚಿತ್ರದ ನಿರ್ದೇಶಕ  ಅಗ್ನಿಹೋತ್ರಿ ಟ್ವೀಟ್‌ ಮಾಡಿದ್ದರು. ಅದನ್ನು ಆಧರಿಸಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು.

ತಾವು ಟ್ವೀಟ್‌ ಅಳಿಸಿ ಹಾಕಿರುವುದಾಗಿ ಅಫಿಡವಿಟ್‌ನಲ್ಲಿ ಅಗ್ನಿಹೋತ್ರಿ ತಿಳಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಪ್ರಕರಣದ  ಅಮಿಕಸ್‌ ಕ್ಯೂರಿ ಹಿರಿಯ ನ್ಯಾಯವಾದಿ ಅರವಿಂದ್‌ ನಿಗಮ್‌ ಅವರು ಟ್ವೀಟನ್ನು ಅಳಿಸಿದ್ದು ವಿವೇಕ್‌ ಅಗ್ನಿಹೋತ್ರಿ ಅವರಲ್ಲ ಬದಲಿಗೆ ಸಾಮಾಜಿಕ ಮಾಧ್ಯಮ ಟ್ವಿಟರ್‌ ಎಂದು ತಿಳಿಸಿದರು. ಈ ಕುರಿತು ಟ್ವಿಟರ್‌ ಅಫಿಡವಿಟ್‌ ಸಲ್ಲಿಸಿರುವುದಾಗಿ ಸ್ಪಷ್ಟಪಡಿಸಿದರು.  

ಈ ಮಧ್ಯೆ ನ್ಯಾಯಾಂಗ ನಿಂದನೆ ಮಾಡಿದ  ಅಗ್ನಿಹೋತ್ರಿ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಅವರ ಪರ ವಕೀಲರು ತಿಳಿಸಿದ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

Kannada Bar & Bench
kannada.barandbench.com