ಅಕ್ರಮ ಹಣ ವರ್ಗಾವಣೆ: ಜಪ್ತಿ ಮಾಡಲಾದ ವಿವೋ ಬ್ಯಾಂಕ್‌ ಖಾತೆಗಳ ಬಗ್ಗೆ ನಿರ್ಧರಿಸಲು ಇ ಡಿ ಗೆ ಹೈಕೋರ್ಟ್‌ ನಿರ್ದೇಶನ

ಜಾರಿ ನಿರ್ದೇಶನಾಲಯವು ಜುಲೈ 5ರಂದು ತನ್ನ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ವಿವೋ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ.
Vivo and Delhi HC
Vivo and Delhi HC

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿರುವ ಚೀನಾ ಮೂಲದ ವಿವೋ ಸ್ಮಾರ್ಟ್‌ಫೋನ್‌ ಕಂಪೆನಿಗೆ ಸೇರಿದ ಬ್ಯಾಂಕ್‌ ಅಕೌಂಟ್‌ಗಳನ್ನು ಮರಳಿ ಕಾರ್ಯನಿರ್ವಹಿಸಲು ನೀಡುವ ಸಂಬಂಧ ಜುಲೈ 13ರೊಳಗೆ ನಿರ್ಧರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. ಈ ಕುರಿತು ವಿವೋ ಸಂಸ್ಥೆಯು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿತ್ತು.

ಜಾರಿ ನಿರ್ದೇಶನಾಲಯವು (ಇ ಡಿ) ಜುಲೈ 5ರಂದು ತನ್ನ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ವಿವೋ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾ. ಯಶಂವತ್‌ ವರ್ಮಾ ಅವರು ಇ ಡಿ ಪರ ವಕೀಲರಾದ ಜೊಹೆಬ್‌ ಹೊಸೈನ್‌ ಅವರಿಗೆ ಈ ಕುರಿತು ಸಂಸ್ಥೆಯಿಂದ ಸೂಚನೆ ಪಡೆದು ತಿಳಿಸುವಂತೆ ನಿರ್ದೇಶಿಸಿದರು.

ವಿವೋ ಪರವಾಗಿ ಹಾಜರಾದ ಹಿರಿಯ ವಕೀಲರಾದ ಸಿದ್ಧಾರ್ಥ್‌ ಲೂತ್ರಾ ಮತ್ತು ಸಿದ್ಧಾರ್ಥ್‌ ಅಗರ್ವಾಲ್ ಅವರು ಸಂಸ್ಥೆಗೆ ಸೇರಿದ ಒಂಭತ್ತು ಬ್ಯಾಂಕ್‌ ಅಕೌಂಟ್‌ಗಳನ್ನು ಜಪ್ತಿ ಮಾಡಲಾಗಿದ್ದು, ಸುಮಾರು ರೂ. 250 ಕೋಟಿ ಹಣವನ್ನು ಈ ಅಕೌಂಟ್‌ಗಳು ಹೊಂದಿವೆ. ಸಂಸ್ಥೆಯು ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸಲು ಮತ್ತು 9 ಸಾವಿರ ನೌಕರರನ್ನು ಸಲಹಲು ಈ ಖಾತೆಗಳು ಅಗತ್ಯವಾಗಿ ಬೇಕಿವೆ ಎಂದು ವಾದಿಸಿದರು.

ಆದರೆ, ಇದನ್ನು ವಿರೋಧಿಸಿದ ಇ ಡಿ ಪರ ವಕೀಲರು ಸಂಸ್ಥೆಯು ಕಳೆದ ಎರಡು ವರ್ಷದ ಅವಧಿಯಲ್ಲಿ ಸುಮಾರು ರೂ. 1.20 ಲಕ್ಷ ಕೋಟಿ ಆದಾಯ ಗಳಿಸಿದ್ದು ಇದರಲ್ಲಿ ಅರ್ಧದಷ್ಟನ್ನು ತೆರಿಗೆಯನ್ನು ವಂಚಿಸುವ ಉದ್ದೇಶದಿಂದ ತನ್ನ ದೇಶಕ್ಕೆ ಅಕ್ರಮವಾಗಿ ಕಳುಹಿಸಿದೆ ಎಂದರು.

ವಿವೋ ಹಾಗೂ ಅದರ ಸಹವರ್ತಿ ಸಂಸ್ಥೆಗಳಾದ ಒಪ್ಪೋ, ಶಿಓಮಿ ಸೇರಿದ ದೇಶಾದ್ಯಂತ ಇರುವ ೪೮ ಸ್ಥಳಗಳಲ್ಲಿ ಇ ಡಿ ದಾಳಿ ನಡೆದಿತ್ತು. ವಿತರಣಾ ಸಂಸ್ಥೆಯ ಶೇರುದಾರರು ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವುದಾಗ ಆಪಾದಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com