ಅಂತಾರಾಷ್ಟ್ರೀಯ ಮಹತ್ವದ ಫ್ಯಾಷನ್ ಪತ್ರಿಕೆ ʼವೋಗ್ʼ ಹಾಗೂ ಅದೇ ಹೆಸರಿನ್ನಿರಿಸಿಕೊಂಡಿರುವ ಬೆಂಗಳೂರಿನ ಫ್ಯಾಷನ್ ಶಿಕ್ಷಣ ಸಂಸ್ಥೆಯ ವ್ಯವಹಾರದ ನಡುವೆ ಹೋಲಿಕೆ ಇಲ್ಲ. ಹೀಗಾಗಿ ವಾಣಿಜ್ಯ ಚಿಹ್ನೆ ನಿಯಮಾವಳಿ ಉಲ್ಲಂಘನೆಯಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ಆ ಮೂಲಕ ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ ಪ್ರಸರಣ ಹೊಂದಿರುವ ಫ್ಯಾಷನ್ ನಿಯತಕಾಲಿಕ ʼವೋಗ್ʼ ಹೆಸರನ್ನು ನಗರದ ರಿಚ್ಮಂಡ್ ಸರ್ಕಲ್‌ನಲ್ಲಿರುವ ವೋಗ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬಳಸಿಕೊಳ್ಳುವಂತಿಲ್ಲ ಎಂದು ಕೆಳ ನ್ಯಾಯಾಲಯವೊಂದು ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಬದಿಗೆ ಸರಿಸಿದೆ. ಜೊತೆಗೆ ಫಿರ್ಯಾದುದಾರರ ದಾವೆಯನ್ನು ಅದು ವಜಾಗೊಳಿಸಿದೆ.
ಬೆಂಗಳೂರಿನ ಶಿಕ್ಷಣ ಸಂಸ್ಥೆಯ ಹೆಸರು ಮತ್ತು ನಿಯತಕಾಲಿಕದ ಹೆಸರು ಒಂದೇ ಎಂದು ಜನ ಗೊಂದಲಕ್ಕೊಳಗಾಗಬಹುದು ಎಂಬ ತಪ್ಪು ತೀರ್ಮಾನಕ್ಕೆ ಬೆಂಗಳೂರಿನ XVIII ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಬಂದಿದೆ ಎಂಬುದಾಗಿ ಪೀಠ ತಿಳಿಸಿದೆ.
“ಫಿರ್ಯಾದಿ (ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿ) ಪ್ರಕಟಿಸುವ ಪತ್ರಿಕೆಯು ಅನೇಕ ಜನ ಚಂದಾದಾರರಾಗದೇ ಇರುವ ಅಥವಾ ಅದನ್ನು ಓದದೇ ಇರುವ ಫ್ಯಾಷನ್ ನಿಯತಕಾಲಿಕೆಯಾಗಿದೆ. ಫ್ಯಾಷನ್ ಬಗ್ಗೆ ಸಾಮಾನ್ಯವಾಗಿ ಅರಿವು ಇರುವಂತಹ ಸಮಾಜದ ಸೀಮಿತ ವರ್ಗ ಮಾತ್ರ ಇದನ್ನು ಬಳಸುತ್ತಿದೆ. ಫಿರ್ಯಾದುದಾರರು ನಿಯತಕಾಲಿಕವನ್ನು ಪ್ರಕಟಿಸುವ ವ್ಯವಹಾರದಲ್ಲಿ ತೊಡಗಿದ್ದು ಯಾವುದೇ ಸಂಸ್ಥೆಯನ್ನು ನಡೆಸುತ್ತಿಲ್ಲ ಎಂಬ ಅರಿವು ಅದನ್ನು ಖರೀದಿಸುವ ಚಂದಾದಾರರಾಗಿ ಇರಬಲ್ಲದು. ಅಂತೆಯೇ ಶಿಕ್ಷಣ ಸಂಸ್ಥೆ ಸೇರುವ ಬಹುಪಾಲು ವಿದ್ಯಾರ್ಥಿಗಳು ಸಂಸ್ಥೆ ನಿಯತಕಾಲಿಕಕ್ಕೆ ಸಂಬಂಧಿಸಿದ್ದು ಎಂದು ಗೊಂದಲಗೊಳ್ಳುವ ಸಂಭವವೇನೂ ಇಲ್ಲ. ಅಲ್ಲದೆ ಇದನ್ನು ಸಾಬೀತುಪಡಿಸುವಂತಹ ಪುರಾವೆ ಫಿರ್ಯಾದುದಾರರ ಬಳಿ ಇಲ್ಲ” ಎಂದು ನ್ಯಾಯಾಲಯ ವಿವರಿಸಿದೆ.
ಪ್ರತಿವಾದಿಗಳು/ಮೇಲ್ಮನವಿದಾರರು (ಶಿಕ್ಷಣ ಸಂಸ್ಥೆ) ʼವೋಗ್ʼ ಹೆಸರಿನ ನಿಯತಕಾಲಿಕವನ್ನು ಪ್ರಕಟಿಸುತ್ತಿಲ್ಲ ಬದಲಿಗೆ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಹೀಗಾಗಿ ಯಾವುದೇ ಟ್ರೇಡ್‌ಮಾರ್ಕ್ (ವ್ಯಾಪಾರ ಚಿಹ್ನೆ) ನಿಯಮಾವಳಿ ಉಲ್ಲಂಘನೆಯಾಗಿಲ್ಲ ಎಂಬ ಅಂಶವನ್ನು ಪೀಠ ಗಮನಿಸಿದೆ.
“ನ್ಯಾಯಾಲಯ ನಿರ್ಣಯಕ್ಕೆ ಬರಲು, ಟ್ರೇಡ್ ಮಾರ್ಕ್‌ನ ಗಡಿಯಾಚೆಗಿನ ಖ್ಯಾತಿಯೊಂದೇ ಸಾಕಾಗುವುದಿಲ್ಲ. ಸಲ್ಲಿಸಲಾದ ಸಾಕ್ಷ್ಯಾಧಾರಗಳ ಸಹಿತ ಪ್ರಕರಣದ ಎಲ್ಲಾ ಸನ್ನಿವೇಶಗಳನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ಫಿರ್ಯಾದಿ ಬಳಸಿದ ಟ್ರೇಡ್ ಮಾರ್ಕ್‌ನ ಖ್ಯಾತಿ ಮತ್ತು ಸದಾಶಯಕ್ಕೆ ಧಕ್ಕೆಯಾಗುತ್ತದೆಯೇ ಎಂಬುದನ್ನು ನಿರ್ಣಯಿಸುವುದು ಅಗತ್ಯವಾಗಿದ್ದು ಅದನ್ನು ಸಾಬೀತುಪಡಿಸುವಲ್ಲಿ ನಿಯತಕಾಲಿಕ ವಿಫಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (ನಿಯತಕಾಲಿಕ) ಅಸ್ತಿತ್ವದಲ್ಲಿದೆ ಎಂದ ಮಾತ್ರಕ್ಕೆ ಭಾರತದಲ್ಲಿ ಅದು ಸುಪರಿಚಿತ ಎಂದರ್ಥವಲ್ಲ. ತಾವು ಇನ್ನೊಂದು ವಲಯದಲ್ಲಿಯೂ ವ್ಯಾಪಾರ ಪ್ರಸಿದ್ಧಿ ಹೊಂದಿದ್ದು ಅದನ್ನು ರಕ್ಷಿಸಬೇಕು ಎಂಬುದನ್ನು ಸಮರ್ಥಿಸಿ ಸಾಬೀತುಪಡಿಸಿಕೊಳ್ಳುವುದು ಟ್ರೇಡ್‌ಮಾರ್ಕ್ ಬಳಕೆದಾರರ ಕರ್ತವ್ಯ” ಎಂದು ಪೀಠ ನುಡಿದಿದೆ.
ನಿಯತಕಾಲಿಕದ ಟ್ರೇಡ್‌ಮಾರ್ಕ್ ವರ್ಗ- 16ರ ಅಡಿ ಬರಲಿದ್ದು ಪ್ರತಿವಾದಿ/ಮೇಲ್ಮನವಿದಾರ ಫ್ಯಾಷನ್ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆಯ ವ್ಯಾಪ್ತಿಯನ್ನು ಅದು ಒಳಗೊಂಡಿರುವುದಿಲ್ಲ. ಹೀಗಾಗಿ ಸಂಸ್ಥೆಯಿಂದ ಯಾವುದೇ ಟ್ರೇಡ್ ಮಾರ್ಕ್ ಉಲ್ಲಂಘನೆಯಾಗಿಲ್ಲ… ತಾನು ಭಾರತದಲ್ಲಿ ಸುಪ್ರಸಿದ್ಧ ನಿಯತಕಾಲಿಕ ಎಂಬುದನ್ನು ಸಾಬೀತುಪಡಿಸುವಲ್ಲಿ ಫಿರ್ಯಾದುದಾರರು ಶೋಚನೀಯ ರೀತಿಯಲ್ಲಿ ವಿಫಲರಾಗಿದ್ದು ಇದನ್ನು ಗ್ರಹಿಸುವಲ್ಲಿ ವಿಚಾರಣಾ ನ್ಯಾಯಾಲಯದಿಂದ ತಪ್ಪಾಗಿದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
“ವೋಗ್ ಎಂಬುದು ಸಾಮಾನ್ಯ ಇಂಗ್ಲಿಷ್ ಪದವಾಗಿದ್ದು ಇದು ಸೃಷ್ಟಿಸಲಾದ ಪದವಲ್ಲ. ಹೀಗಾಗಿ ಫಿರ್ಯಾದುದಾರರು ಈ ಪದ ಬಳಸದಂತೆ ಇತರರನ್ನು ತಡೆಯುವಂತಿಲ್ಲ ಮತ್ತು ಅದರ ಮೇಲೆ ಏಕಸ್ವಾಮ್ಯತೆ ಹೊಂದುವಂತಿಲ್ಲ” ಎಂದು ಮೇಲ್ಮನವಿ ಸಲ್ಲಿಸಿದ್ದ ʼವೋಗ್ʼ ಫ್ಯಾಷನ್ ಶಿಕ್ಷಣ ಸಂಸ್ಥೆಯ ವಾದವಾಗಿತ್ತು.
ಸಂಸ್ಥೆಯ ಪರವಾಗಿ ಜಸ್ಟ್ ಲಾ ನ್ಯಾಯವಾದಿ ಸಂಸ್ಥೆ ಹಿರಿಯ ನ್ಯಾಯವಾದಿ ಎಸ್ ಎಸ್ ನಾಗಾನಂದ, ಸುಮನಾ ನಾಗಾನಂದ, ಶಾರದಾ ನಾಗಾನಂದ, ವಿಕ್ರಮ್ ಯು ಆರ್, ವಾದ ಮಂಡಿಸಿದ್ದರು. ವೋಗ್ ನಿಯತಕಾಲಿಕವನ್ನು ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಮತ್ತು ವಕೀಲ ವೆಂಟರಾಘವನ್ ಪ್ರತಿನಿಧಿಸಿದ್ದರು
[ಆದೇಶದ ಪ್ರತಿಯನ್ನು ಇಲ್ಲಿ ಓದಿ]