ಮತದಾರರ ಪಟ್ಟಿ ಮಾಹಿತಿ ಕಳವು ಪ್ರಕರಣ: ಆರೋಪಿಗಳನ್ನು ಡಿ.2ರ ವರೆಗೆ ಪೊಲೀಸ್ ವಶಕ್ಕೆ ನೀಡಿದ ನ್ಯಾಯಾಲಯ

ಚಿಲುಮೆ ಸಂಸ್ಥೆಯ ಮುಖ್ಯಸ್ಥ ಹಾಗೂ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್, ಆತನ ಸಹೋದರ ಕೆಂಪೇಗೌಡ ಹಾಗೂ ಯೋಜನಾಧಿಕಾರಿ ಪ್ರಜ್ವಲ್‌ರನ್ನು ಡಿಸೆಂಬರ್ 2ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
Ballot Box
Ballot Box

ಮತದಾರರ ಪಟ್ಟಿಯ ವಿವರಗಳನ್ನು ಕಳವು ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂವರು ಆರೋಪಿಗಳನ್ನು ಬೆಂಗಳೂರಿನ ನಾಲ್ಕನೇ ಎಸಿಎಂಎಂ ನ್ಯಾಯಾಲಯ ಡಿ. 2ರವರೆಗೆ ಪೊಲೀಸ್‌ ವಶಕ್ಕೆ ನೀಡಿದೆ.

ಚಿಲುಮೆ ಸಂಸ್ಥೆಯ ಮುಖ್ಯಸ್ಥ ಹಾಗೂ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್‌, ಆತನ ಸಹೋದರ ಕೆಂಪೇಗೌಡ ಹಾಗೂ ಯೋಜನಾಧಿಕಾರಿ ಪ್ರಜ್ವಲ್‌ನನ್ನು ನಗರದ ಹಲಸೂರು ಗೇಟ್‌ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ.

Also Read
ಪಿಎಸ್‌ಐ ಹಗರಣ: 10 ಮಂದಿ ಅಭ್ಯರ್ಥಿಗಳು, ಇಬ್ಬರು ಮಧ್ಯವರ್ತಿಗಳಿಗೆ ಜಾಮೀನು, ಇಬ್ಬರು ಸರ್ಕಾರಿ ಅಧಿಕಾರಿಗಳ ಅರ್ಜಿ ವಜಾ

ಮತದಾರರ ವೈಯಕ್ತಿಕ ಮಾಹಿತಿ ಕಳವಿಗೆ ಸಂಬಂಧಿಸಿದಂತೆ ಸರ್ಕಾರೇತರ ಸಂಸ್ಥೆಯಾದ ಚಿಲುಮೆ ವಿರುದ್ಧ ಬಿಬಿಎಂಪಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿತ್ತು. 2023ನೇ ಸಾಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಚಿಲುಮೆ ಸಂಸ್ಥೆಗೆ ತಾನು ಷರತ್ತುಬದ್ಧ ಅನುಮತಿ ನೀಡಿದ್ದರೂ ಅದನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅನುಮತಿ ರದ್ದುಪಡಿಸಲಾಗಿದೆ. ಜೊತೆಗೆ ಸಂಸ್ಥಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರು ದೂರಿನಲ್ಲಿ ತಿಳಿಸಿದ್ದರು.

ತನಿಖೆ ನಡೆಸಿದ್ದ ಅಧಿಕಾರಿಗಳಿಗೆ ಸಂಸ್ಥೆಯ ಕಚೇರಿಯಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಲೆಟರ್‌ ಹೆಡ್‌, ಖಾಲಿಚೆಕ್‌, ನೋಟು ಎಣಿಸುವ ಯಂತ್ರ, ವಿವಿಧ ಅಧಿಕಾರಿಗಳ ವಿಸಿಟಿಂಗ್‌ ಕಾರ್ಡ್‌ಗಳು, ಬಿಬಿಎಂಪಿ ಅಧಿಕಾರಿಗಳ ಗುರುತಿನ ಚೀಟಿಗಳು ದೊರೆತಿದ್ದವು. ಪರಿಶಿಷ್ಟ ವರ್ಗ ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕುವ ಕೆಲಸವನ್ನು ಚಿಲುಮೆ ಮಾಡಿದೆ ಎಂದು ಪ್ರತಿಪಕ್ಷಗಳು ನಿನ್ನೆ ಆರೋಪಿಸಿದ್ದವು. ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ ಆರೋಪ ಸಂಸ್ಥೆಯ ಮೇಲಿದೆ.

ಬಿಬಿಎಂಪಿ ವಿಶೇಷ ಆಯುಕ್ತರು ದೂರು ನೀಡುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರವಿಕುಮಾರ್‌ನನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದರು.

Related Stories

No stories found.
Kannada Bar & Bench
kannada.barandbench.com