ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಕಳುವಿಗೆ ಸಂಬಂಧಿಸಿದ ಹಗರಣದ ಕುರಿತು ವಿಶೇಷ ತನಿಖಾ ದಳ ರಚಿಸಿ, ತಮ್ಮ ಸುಪರ್ದಿನಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಸಹೋದರ ನ್ಯಾಯಮೂರ್ತಿಗಳನ್ನು ಉಲ್ಲೇಖಿಸಿ ಸಿಟಿಜನ್ಸ್ ರೈಟ್ಸ್ ಫೌಂಡೇಶನ್ (ನಾಗರಿಕ ಹಕ್ಕುಗಳ ಪ್ರತಿಷ್ಠಾನ -ಸಿಆರ್‌ಎಫ್) ಸೋಮವಾರ ಪತ್ರ ಬರೆದಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಹಗರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಬೇಕು. ಎಸ್‌ಐಟಿ ಮೇಲ್ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳು ಮಾಡಬೇಕು. ಆ ಮೂಲಕ ಹಗರಣದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳನ್ನು ಬಯಲಿಗೆ ಎಳೆಯಬೇಕು ಎಂದು ಸಿಆರ್‌ಎಫ್ ಅಧ್ಯಕ್ಷ ಕೆ ಎ ಪೌಲ್ ಅವರು ಸಹಿ ಮಾಡಿರುವ ಪತ್ರದಲ್ಲಿ ಕೋರಲಾಗಿದೆ.
ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಪಕ್ಷವೇ ಕೇಂದ್ರದಲ್ಲೂ ಅಧಿಕಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಗರಣವನ್ನು ಬಯಲಿಗೆ ಎಳೆಯಲು ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಹೈಕೋರ್ಟ್ ಎಸ್‌ಐಟಿ ರಚಿಸಬೇಕು ಎಂದು ಕೋರಲಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿನ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮತ್ತು ಜಿಲ್ಲಾ ಚುನಾವಣಾಧಿಕಾರಿಯು (ಡಿಇಒ) ಸರ್ಕಾರೇತರ ಸಂಸ್ಥೆಯಾದ ʼಚಿಲುಮೆʼ ಜೊತೆ ಕೈಜೋಡಿಸಿ, ಕ್ರಿಮಿನಲ್ ಪಿತೂರಿ ನಡೆಸುವ ಮೂಲಕ ಮತದಾರರ ಪಟ್ಟಿಯನ್ನು ತಿರುಚುವ ಕೃತ್ಯ ಎಸಗಿದ್ದು, ಆ ಮೂಲಕ ನೇರವಾಗಿ ಚುನಾವಣಾ ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿರುವುದು ದುರದೃಷ್ಟಕರ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಉಸ್ತುವಾರಿಯಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಚುನಾವಣಾಧಿಕಾರಿಯಾಗಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಬೃಹತ್ ಜವಾಬ್ದಾರಿಯನ್ನು ಚಿಲುಮೆ ಉಚಿತವಾಗಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕೆ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲು ಚಿಲುಮೆಗೆ ಬಿಬಿಎಂಪಿ ಅನುಮತಿಸಿತ್ತು. ಆನಂತರ ಅದನ್ನು 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಿ, ಆಗಸ್ಟ್ 20ರಂದು ಸರ್ಕಾರಿ ಆದೇಶ ಮಾಡಲಾಗಿದೆ. ಚಿಲುಮೆ ಸಂಸ್ಥೆಯ ಹಿನ್ನೆಲೆ ಪರಿಶೀಲಿಸದೇ ಬಿಬಿಎಂಪಿಯು ತಕ್ಷಣ ಮತದಾರರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ಹೊಣೆಗಾರಿಕೆಯನ್ನು ಅರ್ಜಿ ಸಲ್ಲಿಸಿದ ತಕ್ಷಣ ಚಿಲುಮೆಗೆ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಸರ್ಕಾರಿ ಅಧಿಕಾರಿಗಳ ವೇಷದಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವ ಮೂಲಕ ಚಿಲುಮೆ ಸಂಸ್ಥೆಯು ಮಹಾನ್ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದು, ತನ್ನ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕಾರ್ಡ್‌ಗಳನ್ನೂ ನೀಡಿದೆ. ಬಿಬಿಎಂಪಿಗೆ ತಿಳಿದೇ ಚಿಲುಮೆ ಸಂಸ್ಥೆಯು ಈ ಕೃತ್ಯ ನಡೆಸಿದೆ ಎಂಬುದು ಇಲ್ಲಿ ಸ್ಪಷ್ಟ ಎಂದು ಹೇಳಲಾಗಿದೆ.
ಇದರ ಬೆನ್ನಿಗೇ, ಚಿಲುಮೆ ಮತ್ತು ಲೋಕೇಶ್ ಎಂಬಾತನ ವಿರುದ್ಧ ಹಲಸೂರು ಠಾಣೆಯಲ್ಲಿ ನವೆಂಬರ್ 11ರಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಎರಡು ಎಫ್‌ಐಆರ್ ದಾಖಲಿಸಲಾಗಿದ್ದು, ಕಾಡುಗೋಡಿ ಠಾಣೆಯಲ್ಲಿ ಪ್ರತ್ಯೇಕವಾಗಿ ಲೋಕೇಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದು, ಎಐಸಿಸಿಯು ಮುಖ್ಯ ಚುನಾವಣಾ ಆಯುಕ್ತರಿಗೂ ದೂರು ನೀಡಿದೆ. ಇದಲ್ಲದೇ ಬಿಜೆಪಿಯ ಕಾನೂನು ಘಟಕದ ಯೋಗೇಂದ್ರ ಹೂಡಘಟ್ಟ, ಎಂಎಲ್‌ಸಿಗಳಾದ ಚಲವಾದಿ ನಾರಾಯಣಸ್ವಾಮಿ ಮತ್ತು ಎನ್ ರವಿ ಕುಮಾರ್ ಅವರೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ವಿವರಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥನಾರಾಯಣ ಅವರ ಆಶೀರ್ವಾದದಿಂದ ಚುನಾವಣಾ ವಂಚನೆ ಕೃತ್ಯ ನಡೆಸಲಾಗಿದ್ದು, ಅವರ ವಿರುದ್ಧ ಯಾವುದೇ ತೆರನಾದ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಸರ್ಕಾರವು ಈ ಪ್ರಕರಣದಲ್ಲಿ ಮುಕ್ತವಾದ ತನಿಖೆ ನಡೆಸುವುದು ಕಷ್ಟಕರ ಎಂದು ವಿವರಿಸಲಾಗಿದೆ.
ಮತದಾರರ ಪಟ್ಟಿ ಹಗರಣವು ಅದು ಹಗರಣವಷ್ಟೇ ಅಲ್ಲ. ಇದು ಸಂವಿಧಾನದ ಮೂಲ ರಚನೆಯನ್ನು ಅಲುಗಾಡಿಸುತ್ತಿದೆ. ಮತದಾನ ಮಾಡುವುದು ಸಾಂವಿಧಾನಿಕ ಹಕ್ಕಾಗಿದ್ದು, ಅದನ್ನು ಯಾರೂ ಕಸಿಯಲಾಗದು. ಜನರ ಹಕ್ಕನ್ನು ರಕ್ಷಿಸಬೇಕಾದ ಚುನಾಯಿತ ಪ್ರತಿನಿಧಿಗಳು ಚುನಾವಣಾ ಅಕ್ರಮದಲ್ಲಿ ಭಾಗಿಯಾಗುವ ಮೂಲಕ ಅಧಿಕಾರಸ್ಥರು ಲಾಭ ಮಾಡಿಕೊಳ್ಳಲು ಜನರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
ಬೆಂಗಳೂರಿನ ಪ್ರಜೆಗಳಿಂದ ಸಂಗ್ರಹಿಸಲಾಗಿರುವ ಆಕ್ಷೇಪಾರ್ಹವಾದ ವೈಯಕ್ತಿಕ ದತ್ತಾಂಶವನ್ನು ಖಾಸಗಿ ಅಪ್ಲಿಕೇಶನ್ ಆದ ಡಿಜಿಟಲ್ ಸಮೀಕ್ಷಾದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಸ್ಪಷ್ಟವಾಗಿ ಚುನಾವಣಾ ವಂಚನೆ ಮತ್ತು ಸರ್ಕಾರಿ ಅಧಿಕಾರಿಗಳ ವೇಷಧಾರಿ ಕೃತ್ಯವಾಗಿದೆ. ಇದು ಗುರುತಿನ ಕಳವು, ಖಾಸಗಿ ಬಳಕೆದಾರರ ದತ್ತಾಂಶದ ಕಳವು, ಅಪ್ರಾಮಾಣಿಕವಾಗಿ ಆಸ್ತಿಯ ಅಕ್ರಮ, ಕದ್ದಿರುವುದರ ದುರ್ಬಳಕೆ, ನಂಬಿಕೆ ದ್ರೋಹ, ವಂಚನೆ ಕೃತ್ಯವಾಗಿದೆ ಎಂದು ವಿವರಿಸಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯು ಮುಖ್ಯಮಂತ್ರಿ ಉಸ್ತುವಾರಿಗೆ ಒಳಪಟ್ಟಿದ್ದು, ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ನೇರವಾಗಿ ಹಗರಣದ ಜವಾಬ್ದಾರಿ ಹೊತ್ತಿದೆ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವ ಬದಲಿಗೆ ಆಡಳಿತ ಪಕ್ಷವು ಪ್ರಕರಣವನ್ನು ನಿರಾಕರಿಸುತ್ತಿದೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶ ಹೊಂದಿದೆ ಎಂದು ದೂರಲಾಗಿದೆ.
ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಯಾವುದೇ ಪಕ್ಷವು ಪ್ರಜಾಪ್ರಭುತ್ವ ರಕ್ಷಣೆ ಉದ್ದೇಶ ಹೊಂದಿಲ್ಲ. ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ, ಸಂಬಂಧಿತ ಉಳಿದವರನ್ನು ಬಂಧಿಸಲಾಗಿದೆ. ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದರೆ ವಂಚನೆಗೆ ನಿಜವಾಗಿ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ. ಬದಲಿಗೆ ಅದು ಕಣ್ಣೊರೆಸುವ ಕೆಲಸವನ್ನಷ್ಟೇ ಮಾಡುತ್ತದೆ ಎಂದು ಶಂಕಿಸಲಾಗಿದೆ.