[ಕುತುಬ್‌ ಮಿನಾರ್‌ ವಿವಾದ] 150 ವರ್ಷಗಳ ಬಳಿಕ ಎಚ್ಚೆತ್ತು, ಆಧಾರವಿಲ್ಲದೇ ನ್ಯಾಯಾಲಯದ ಕದ ತಟ್ಟಲಾಗಿದೆ: ಎಎಸ್‌ಐ

ಮಧ್ಯಪ್ರವೇಶಕಾರರ ಪರ ಅರ್ಜಿದಾರರು ಹೆಚ್ಚಿನ ಸಮಯ ನೀಡಬೇಕು ಎಂದು ಕೋರಿದ್ದನ್ನು ಪರಿಗಣಿಸಿ, ಮುಂದಿನ ವಿಚಾರಣೆಗೆ ಅತ್ಯಂತ ಸಮೀಪದ ದಿನಾಂಕ ನಿಗದಿಪಡಿಸಲಾಗುವುದು ಎಂದ ಸಿವಿಲ್‌ ನ್ಯಾಯಾಧೀಶರು.
Qutub Minar
Qutub Minar

ದೆಹಲಿಯ ಕುತುಬ್‌ ಮಿನಾರ್‌ ಆವರಣದಲ್ಲಿದ್ದ ಹಿಂದೂ ಮತ್ತು ಜೈನ ದೇವಾಲಯಗಳನ್ನು ಪುನರ್‌ ಸ್ಥಾಪಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಸೆಪ್ಟೆಂಬರ್‌ 13ಕ್ಕೆ ಮುಂದೂಡಿದೆ.

ಮಧ್ಯಪ್ರವೇಶಕಾರರ ಪರ ಅರ್ಜಿದಾರರು ಹೆಚ್ಚಿನ ಸಮಯ ನೀಡಬೇಕು ಎಂದು ಕೋರಿದ್ದನ್ನು ಪರಿಗಣಿಸಿ, ಮುಂದಿನ ವಿಚಾರಣೆಗೆ ಅತ್ಯಂತ ಸಮೀಪದ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಾಕೇತ್‌ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರಾದ ದಿನೇಶ್‌ ಕುಮಾರ್‌ ಹೇಳಿದರು.

“ಮೇಲ್ಮನವಿದಾರರು ಮತ್ತು ಪ್ರತಿವಾದಿಗಳಾದ 1,2,3 ಪರವಾಗಿ ಲಿಖಿತ ವಾದದ ಅಂಶಗಳನ್ನು ಸಲ್ಲಿಸಲಾಗಿದೆ. ವಾದ ಮಂಡಿಸಲು ಅರ್ಜಿದಾರರಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಕುಂವರ್‌ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಎನ್ನುವ ದೆಹಲಿ ನಿವಾಸಿಯೊಬ್ಬರು ಕುತುಬ್ ಮಿನಾರ್‌ ಇರುವ ಸ್ವತ್ತಿಗೆ ತಾವು ನಿಜವಾದ ಮಾಲೀಕರಾಗಿದ್ದು ಅದನ್ನು ತಮಗೆ ಒಪ್ಪಿಸಬೇಕು ಎಂದು ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು.

ಅರ್ಜಿದಾರರ ವಾದವನ್ನು ತಿರಸ್ಕರಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅರ್ಜಿದಾರರು ವಿಶೇಷವಾಗಿ ಯಾವುದೇ ಹಕ್ಕನ್ನು ಪ್ರತಿಪಾದಿಸಿಲ್ಲ. ಹೀಗಾಗಿ, ಅರ್ಜಿದಾರರಿಗೆ ಯಾವುದೇ ಮಾನ್ಯತೆ ಇಲ್ಲ. ವಿವಿಧ ರಾಜ್ಯಗಳಲ್ಲಿ ದೊಡ್ಡ ಮತ್ತು ವಿಶಾಲ ಪ್ರದೇಶಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹಕ್ಕು ಪ್ರತಿಪಾದಿಸುತ್ತಾರೆ. ಆದರೆ, 150 ವರ್ಷಗಳಿಂದ ಯಾವುದೇ ನ್ಯಾಯಾಲಯದ ಮುಂದೆ ಆಕ್ಷೇಪವೆತ್ತದೆ ಸುಮ್ಮನಿದ್ದಾರೆ. ಈಗ ಒಮ್ಮೆಲೇ ಎಚ್ಚೆತ್ತು ಈ ನ್ಯಾಯಾಲಯದ ಮುಂದೆ ಯಾವುದೇ ಆಧಾರವಿಲ್ಲದೇ ಮಧ್ಯಪ್ರವೇಶ ಮಾಡಿದ್ದಾರೆ ಎಂದಿದೆ. ಅರ್ಜಿ ಸಲ್ಲಿಸಬೇಕಿರುವ ಕಾಲಮಿತಿಯನ್ನು ಮೀರಿ ಅರ್ಜಿದಾರರು ನ್ಯಾಯಾಲಯದ ಕದ ತಟ್ಟಿರುವುದನ್ನೇ ಆಧರಿಸಿ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಬೇಕು ಎಂದು ಎಎಸ್‌ಐ ಕೋರಿದೆ.

ಅರ್ಜಿದಾರರು ಮೂಲ ದಾವೆಯಲ್ಲಿ ಪಕ್ಷಕಾರರಾಗಿಲ್ಲ. ಇದು ಮೇಲ್ಮನವಿಯಾಗಿದ್ದು, ಅರ್ಜಿದಾರರು ಮೂಲ ದಾವೆಯಲ್ಲಿ ಇಲ್ಲದೇ ಇರುವುದರಿಂದ ಇಲ್ಲಿ ಮಧ್ಯಪ್ರವೇಶಿಕೆ ಕೋರಲು ಅವರಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ವಾದಿಸಲಾಗಿದೆ.

Also Read
ಕುತುಬ್ ಮಿನಾರ್‌ ಸ್ವತ್ತು ತನ್ನದೆಂದ ವ್ಯಕ್ತಿ: ಸ್ಮಾರಕದಲ್ಲಿ ಪೂಜೆ ಕೋರಿದ್ದ ಅರ್ಜಿಯ ತೀರ್ಪು ಮುಂದೂಡಿದ ನ್ಯಾಯಾಲಯ

ಕುತುಬ್‌ ಮಿನಾರ್‌ ಸಂಕೀರ್ಣದಲ್ಲಿ 27 ಹಿಂದೂ ಮತ್ತು ಜೈನ್‌ ದೇವಾಲಯಗಳನ್ನು ಪುನರ್‌ ನಿರ್ಮಾಣ ಮಾಡುವಂತೆ ಕೋರಿದ್ದ ಅರ್ಜಿಯನ್ನು 2021ರ ಡಿಸೆಂಬರ್‌ನಲ್ಲಿ ಸಿವಿಲ್‌ ನ್ಯಾಯಾಧೀಶರಾದ ನೇಹಾ ಶರ್ಮಾ ಅವರು ವಜಾ ಮಾಡಿದ್ದರು. ಗತ ಕಾಲದಲ್ಲಿ ಆಗಿರುವ ತಪ್ಪುಗಳನ್ನು ಆಧರಿಸಿ ಇಂದಿನ ಶಾಂತಿಯನ್ನು ಕದಡಲಾಗದು ಎಂದು ಪೀಠವು ಆದೇಶದಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com