ಕೇರಳದ ವಲಯಾರ್ ದಲಿತ ಸಹೋದರಿಯರ ಅತ್ಯಾಚಾರ ಪ್ರಕರಣ: ನ್ಯಾಯಾಲಯದಲ್ಲಿ ಈವರೆಗೆ ನಡೆದ ಬೆಳವಣಿಗೆಗಳ ಮಾಹಿತಿ

ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ವಲಾಯರ್ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆದಿತ್ತು.
Kerala High Court
Kerala High Court

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ವಲಯಾರ್‌ನಲ್ಲಿ ನಡೆದ ದಲಿತ ಸಹೋದರಿಯರ ಅತ್ಯಾಚಾರ ಮತ್ತು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ರಾಜೇಶ್ ಎಂ ಮೆನನ್ ಅವರನ್ನು ನೇಮಿಸುವಂತೆ ಮೃತ ಅಪ್ರಾಪ್ತ ಸಂತ್ರಸ್ತೆಯರ ತಾಯಿ ಮಾಡಿದ್ದ ಮನವಿಯನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಈಚೆಗೆ ಸೂಚಿಸಿದೆ.

ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ವಲಾಯರ್ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆದಿತ್ತು.

9 ಮತ್ತು 13 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು 2017ರಲ್ಲಿ ತಮ್ಮ ಮನೆಯಲ್ಲಿ ಪ್ರತ್ಯೇಕ ದಿನಗಳಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಜನವರಿ 2017ರಲ್ಲಿ 13 ವರ್ಷ ವಯಸ್ಸಿನ ಹಿರಿಯ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಬ್ಬರು ಪುರುಷರು ಮನೆಯಿಂದ ಹೊರ ಹೋಗಿದ್ದನ್ನು ಕಂಡಿದ್ದಾಗಿ ಆಕೆಯ 9 ವರ್ಷದ ಕಿರಿಯ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಮಗಳನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ದೂರಿದ್ದರು. ಆದರೆ ಪೊಲೀಸರು ಇದೊಂದು ಅಸಹಜ ಸಾವಿನ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಆಘಾತಕಾರಿ ಸಂಗತಿಯೆಂದರೆ, ಅಕ್ಕ ಆತ್ಮಹತ್ಯೆ ಮಾಡಿಕೊಂಡ 52 ದಿನಗಳ ನಂತರ, ಮಾರ್ಚ್ 2017ರಲ್ಲಿ, 9 ವರ್ಷದ ಕಿರಿಯ ಸಹೋದರಿ ಅದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಈ ಬೆಳವಣಿಗೆಗಳು ತೀವ್ರ ಸಂಚಲನ ಸೃಷ್ಟಿಸಿದ್ದವು. ಪ್ರತಿಭಟನೆ ಮತ್ತು ಸಾರ್ವಜನಿಕರ ಒತ್ತಡದ ಪರಿಣಾಮ ಎಂಬಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಮಧು ಅಲಿಯಾಸ್ ವಲಿಯ ಮಧು, ಮಧು ಎಂ ಅಲಿಯಾಸ್ ಕುಟ್ಟಿ ಮಧುಶಿಬು, ಪ್ರದೀಪ್ ಕುಮಾರ್ ಎಂ ಹಾಗೂ ಕೃತ್ಯ ನಡೆದಾಗ 16 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕನೊಬ್ಬ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿತ್ತು. ಪ್ರಕರಣದ ನಾಲ್ಕನೇ ಆರೋಪಿ ಪ್ರದೀಪ್ ಕುಮಾರ್ 2020ರ ನವೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಬಾಲಕಿಯರು ಸಾವನ್ನಪ್ಪುವ ಮುನ್ನ ಅತ್ಯಾಚಾರಕ್ಕೆ ಒಳಗಾಗಿದ್ದರು ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿತ್ತು. ಆರೋಪಿಗಳು ತಮ್ಮ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಆಘಾತದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರಿದ್ದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 2019ರಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಸಾಕ್ಷ್ಯಗಳಿಲ್ಲ ಎಂದು ತಿಳಿಸಿ ನ್ಯಾಯಾಲಯ ಅಕ್ಟೋಬರ್ 25ರಂದು ವಿ ಮಧು, ಎಂ ಮಧು ಮತ್ತು ಶಿಬು ಅವರನ್ನು ಖುಲಾಸೆಗೊಳಿಸಿತ್ತು. ಇದೇ ಕಾರಣಕ್ಕಾಗಿ ನ್ಯಾಯಾಲಯ ಈ ಹಿಂದೆ ಪ್ರದೀಪ್ ಕುಮಾರ್‌ನನ್ನೂ ಖುಲಾಸೆಗೊಳಿಸಿತ್ತು.

ಇದು ಸಾರ್ವಜನಿಕ ಆಕ್ರೋಶ, ಪ್ರತಿಭಟನೆಗೆ ಕಾರಣವಾಯಿತು. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಒಕ್ಕೂಟ ಸರ್ಕಾರದ ಕೈವಾಡ ಇದರ ಹಿಂದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಕೋಲಾಹಲ ಸೃಷ್ಟಿಸಿದ್ದವು. 

ನಂತರ ಪೋಕ್ಸೊ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ದಾಖಲೆಗಳನ್ನು ಒದಗಿಸಲು, ಕೆಳ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಲು ಹಾಗು ಆರೋಪಿಗಳಿಗೆ ಶಿಕ್ಷೆ ವಿಧಿಸಲು ಇಲ್ಲವೇ ಅಪರಾಧದ ಮರುತನಿಖೆಗೆ ಆದೇಶಿಸುವಂತೆ ಹೈಕೋರ್ಟ್‌ ನಿರ್ದೇಶಿಸಬೇಕು ಎಂದು ಅದು ಕೋರಿತು.

ದಲಿತ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಸಂಘಟನೆಯ ಬೆಂಬಲದೊಂದಿಗೆ ಬಾಲಕಿಯ ತಾಯಿ, ಮರುತನಿಖೆ ಕೋರಿ ಸರ್ಕಾರವನ್ನು ಸಂಪರ್ಕಿಸಿದರು. ಅಲ್ಲದೆ ಸಿಬಿಐ ತನಿಖೆಗೂ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು.

ಜನವರಿ 2021ರಲ್ಲಿ, ನ್ಯಾಯಮೂರ್ತಿಗಳಾದ ಎ ಹರಿಪ್ರಸಾದ್ (ಈಗ ನಿವೃತ್ತ) ಮತ್ತು ಎಂ ಆರ್ ಅನಿತಾ ಅವರನ್ನು ಒಳಗೊಂಡ ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ ಎಲ್ಲಾ ಆರೋಪಿಗಳ ಖುಲಾಸೆಯನ್ನು ರದ್ದುಗೊಳಿಸಿತು ಇಡೀ ಪ್ರಕರಣದ ಮರು ವಿಚಾರಣೆಗೆ ನಿರ್ದೇಶನ ನೀಡಿತು.

ಬಳಿಕ ಸಿಬಿಐ ತನಿಖೆ ನಡೆಸಲು ಸರ್ಕಾರ ಮಾಡಿದ್ದ ಶಿಫಾರಸನ್ನು ಪರಿಗಣಿಸಿದ ನ್ಯಾಯಾಲಯ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿತು. ಈ ಹೊತ್ತಿಗಾಗಲೇ ಆಳುವ ವರ್ಗದ ನಿಷ್ಕ್ರಿಯತೆಯನ್ನು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ತಾರಕ ಹಂತಕ್ಕೆ ತಲುಪಿದ್ದವು.

ಜನವರಿ 2022ರಂದು, ಪ್ರಕರಣದ ಪ್ರಮುಖ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಪೀಠ ಸಿಬಿಐ ಸಲ್ಲಿಸಿದ ಅಂತಿಮ ವರದಿಯ ಆಧಾರದ ಮೇಲೆ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು ಎಂದು ಹೇಳಿತು.

ಇದೀಗ ಕ್ರಿಮಿನಲ್ ಮೊಕದ್ದಮೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸುವ ನಿರ್ಧಾರ  ಸರ್ಕಾರದ್ದೇ ಆಗಿದ್ದರೂ, ಸಂತ್ರಸ್ತೆ ಅಥವಾ ಅವರ ಪ್ರತಿನಿಧಿಯ ಮನವಿಯನ್ನೂ ಆಲಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.  

ತಮ್ಮ ಆಯ್ಕೆಯ ಅರ್ಹ ವಕೀಲರನ್ನು ಪ್ರಾಸಿಕ್ಯೂಟರ್ ಆಗಿ ನೇಮಿಸಲು ಸಂತ್ರಸ್ತರು ಅಥವಾ ಅವರ ಪರವಾಗಿ ಯಾರಾದರೂ ವಿನಂತಿಸಬಹುದು ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಹೇಳಿದ್ದಾರೆ. ಆದರೂ ಅಂತಿಮ ನಿರ್ಧಾರ ಸಂಬಂಧಪಟ್ಟ ಸರ್ಕಾರದ್ದೇ ಆಗಿರುತ್ತದೆ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. ಈ ಸಂಬಂಧ ಮೂರು ತಿಂಗಳೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅದು ಸೂಚಿಸಿದೆ.

Kannada Bar & Bench
kannada.barandbench.com