ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ನಂಬಿಕೆಯ ಆಧಾರದಲ್ಲಿ ಬಾಲಕಿಯ ಹೆಸರು ಬದಲಾವಣೆಗೆ ಹೈಕೋರ್ಟ್‌ ಅನುಮತಿ

“ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನ ಮೂಲಕ ಗುರುತಿಸಿಕೊಳ್ಳುವುದು ನಾಗರಿಕ ಹಕ್ಕು” ಎಂದ ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರ ಪೀಠ ಹೇಳಿದೆ.
Justice Hanchate Sanjeevkumar
Justice Hanchate Sanjeevkumar
Published on: 

ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ನಂಬಿಕೆಯ ಆಧಾರದ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಹೆಸರನ್ನು ಶಾಲಾ ದಾಖಲೆಗಳು ಹಾಗೂ ಇತರ ಸಾರ್ವಜನಿಕ ದಾಖಲೆಗಳಲ್ಲಿ ಬದಲಾಯಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿ ನೀಡಿದೆ.

“ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನ ಮೂಲಕ ಗುರುತಿಸಿಕೊಳ್ಳುವುದು ನಾಗರಿಕ ಹಕ್ಕು” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ್ ಅವರ ಏಕಸದಸ್ಯ ಪೀಠವು ಬಾಲಕಿಯನ್ನು ಇನ್ನು ಮುಂದೆ ‘ವೀಣಾ ಎನ್‌’ ಎಂದು ಗುರುತಿಸುವಂತೆ ಆದೇಶಿಸಿದೆ.

ಬಾಲಕಿಯ ತಂದೆ ನಿಂಗೇಗೌಡ ಅವರ ಮೂಲಕ ಲಕ್ಷ್ಮಿ ಎನ್‌ ಸಲ್ಲಿಸಿದ್ದ ಪ್ರಥಮ ಮೇಲ್ಮನವಿಯನ್ನು ಪುರಸ್ಕರಿಸಿದ ಪೀಠವು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನ 31ನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಮೂಲ ದಾವೆಯನ್ನು ವಜಾಗೊಳಿಸಿದ್ದ ಆದೇಶವನ್ನು ರದ್ದುಪಡಿಸಿತು.

ಬಾಲಕಿ 2010ರ ಅಕ್ಟೋಬರ್‌ 10ರಂದು ಜನಿಸಿದ್ದು, ನಾಮಕರಣದ ಸಂದರ್ಭದಲ್ಲಿ ಆಕೆಗೆ ‘ಲಕ್ಷ್ಮಿ ಎನ್‌’ ಎಂದು ಹೆಸರಿಡಲಾಗಿತ್ತು. ಬಳಿಕ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಹಿನ್ನೆಲೆಯಲ್ಲಿ ‘ವೀಣಾ ಎನ್‌’ ಎಂಬ ಹೆಸರು ಬಾಲಕಿಗೆ ಹೆಚ್ಚು ಶ್ರೇಯಸ್ಸು ತರಲಿದೆ ಎಂದು ಪೋಷಕರು ಭಾವಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಲಾ ದಾಖಲೆಗಳು ಸೇರಿದಂತೆ ಇತರ ಸಾರ್ವಜನಿಕ ದಾಖಲೆಗಳಲ್ಲಿ ‘ಲಕ್ಷ್ಮಿ ಎನ್‌’ ಎಂಬ ಹೆಸರನ್ನು ‘ವೀಣಾ ಎನ್‌’ ಎಂದು ಬದಲಾಯಿಸಲು ನಿರ್ದೇಶನ ನೀಡುವಂತೆ ಕೋರಿ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ, ‘ವೀಣಾ ಎನ್‌’ ಎಂಬ ಹೆಸರನ್ನು ದೃಢಪಡಿಸುವ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣ ನೀಡಿ ವಿಚಾರಣಾ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್‌, ಹೊಸ ಹೆಸರನ್ನು ಈಗಾಗಲೇ ಬಳಸಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಕಡ್ಡಾಯವಾಗಿ ಕೇಳಲು ಸಾಧ್ಯವಿಲ್ಲ ಎಂದು ಹೇಳಿತು.

“ಬಾಲಕಿಯ ಹೆಸರು ಆರಂಭದಿಂದಲೇ ತಪ್ಪಾಗಿ ದಾಖಲಾಗಿದೆ ಎಂಬುದು ಪೋಷಕರ ವಾದವಲ್ಲ. ಬದಲಿಗೆ ಈಗಿರುವ ಹೆಸರನ್ನು ಹೊಸ ಹೆಸರಿಗೆ ಬದಲಿಸಬೇಕು ಎಂಬುದಷ್ಟೇ ಅವರ ಕೋರಿಕೆಯಾಗಿದೆ. ಆದ್ದರಿಂದ, ಹೊಸ ಹೆಸರಿನ ಹಿಂದಿನ ದಾಖಲೆಗಳನ್ನು ಕೇಳುವುದು ಸಮರ್ಥನೀಯವಲ್ಲ,” ಎಂದು ಪೀಠ ಹೇಳಿತು.

ಹೀಗಾಗಿ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್‌, ಬಾಲಕಿಯನ್ನು ಇನ್ನು ಮುಂದೆ ‘ವೀಣಾ ಎನ್‌’ ಎಂದು ಗುರುತಿಸಬೇಕು ಎಂದು ನಿರ್ದೇಶಿಸಿದೆ. 

Kannada Bar & Bench
kannada.barandbench.com