ಮುಸ್ಲಿಂ ದಂಪತಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರ ವಕ್ಫ್‌ ಮಂಡಳಿಗೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮುಸ್ಲಿಮರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಸಂಬಂಧ 2009ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2011ರಲ್ಲಿ ರದ್ದುಪಡಿಸಿದೆ. ಇದಾದ ಬಳಿಕ ಸರ್ಕಾರ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ.
Karnataka High Court
Karnataka High Court
Published on

ಮುಸ್ಲಿಂ ಸಮುದಾಯದ ದಂಪತಿಗೆ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್‌ ಕೋರ್ಟ್ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಎ ಆಲಂ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ, ರಾಜ್ಯ ವಕ್ಫ್‌ ಮಂಡಳಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ವಕ್ಫ್‌ ಕಾಯಿದೆ-1995ರ ಅನ್ವಯ ವಕ್ಫ್‌ ಆಸ್ತಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಮಾಡುವುದು ವಕ್ಫ್‌ ಮಂಡಳಿ ಕಾರ್ಯವ್ಯಾಪ್ತಿಯಾಗಿದೆ. ಕರ್ನಾಟಕ ವಿವಾಹ ನೋಂದಣಿ ಕಾಯಿದೆ-1976ರ ಪ್ರಕಾರ ವಿವಾಹ ನೋಂದಣಿ ಅಧಿಕಾರ ಇರುವುದು ಉಪ ನೋಂದಣಾಧಿಕಾರಿಗೆ ಮಾತ್ರ. ಮುಸ್ಲಿಮರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಸಂಬಂಧ 2009ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2011ರಲ್ಲಿ ರದ್ದುಪಡಿಸಿದೆ. ಇದಾದ ಬಳಿಕ ಸರ್ಕಾರ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ. ಈಗಾಗಲೇ ಉಪ ನೋಂದಣಾಧಿಕಾರಿ ಬಳಿ ವಿವಾಹ ನೋಂದಣಿಗೆ ಅವಕಾಶವಿದೆ. ಅಲ್ಲದೇ ಸ್ಥಳೀಯ ಖಾಜಿಗಳ ಬಳಿಯೂ ವಿವಾಹ ದಾಖಲೆ ಇರಲಿದೆ. ಆದಾಗ್ಯೂ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡುವ ಮೂಲಕ ಮೂರನೇ ವ್ಯವಸ್ಥೆಯೊಂದನ್ನು ಹುಟ್ಟು ಹಾಕಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಆದ್ದರಿಂದ, ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರ 2023ರ ಆಗಸ್ಟ್‌ 30ರಂದು ಹೊರಡಿಸಿರುವ ಆದೇಶ ವಕ್ಫ್‌ ಕಾಯಿದೆ-1995 ಹಾಗೂ ಸಂವಿಧಾನದ 14ನೇ ವಿಧಿಗೆ ತದ್ವಿರುದ್ಧವಾಗಿದೆ. ಈ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com