ಮುಸ್ಲಿಮರ ವಿವಾಹ ನೋಂದಣಿ ಅಧಿಕಾರ ವಕ್ಫ್‌ ಮಂಡಳಿಗೆ: ಕಾಲಹರಣ ಮಾಡುತ್ತಿರುವ ಸರ್ಕಾರದ ನಡೆಗೆ ಹೈಕೋರ್ಟ್‌ ಅತೃಪ್ತಿ

“ಈ ಹಿಂದೆ ಮೂರು ಬಾರಿ ಸಮಯ ಕೇಳಲಾಗಿದೆ. ಈಗ ಮತ್ತೆ ಸಮಯ ಕೇಳಲಾಗುತ್ತಿದೆ. ಕೊನೆಯ ಬಾರಿ ಅವಕಾಶ ನೀಡಲಾಗುವುದು. ಜೂನ್ 11ರೊಳಗೆ ಉತ್ತರ ನೀಡಬೇಕು” ಎಂದು ಸರ್ಕಾರಕ್ಕೆ ತಾಕೀತು ಮಾಡಿದ ಹೈಕೋರ್ಟ್.‌
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ಮುಸ್ಲಿಮರ ವಿವಾಹ ನೋಂದಣಿ ಹಾಗೂ ಮುಸ್ಲಿಂ ದಂಪತಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ನೀಡಿದ್ದು ಹೇಗೆ ಎಂಬ ಬಗ್ಗೆ ಉತ್ತರಿಸಲು ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಉತ್ತರಿಸಲು ಜೂನ್ 11ರ ಗಡುವು ವಿಧಿಸಿದೆ.

ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರ 2023ರ ಆಗಸ್ಟ್‌ 30ರಂದು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಎ. ಆಲಂ ಪಾಷಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು ಉತ್ತರಿಸಲು ಕಾಲಾವಕಾಶ ಕೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು “ಈ ಹಿಂದೆ ಮೂರು ಬಾರಿ ಸಮಯ ಕೇಳಲಾಗಿದೆ. ಈಗ ಮತ್ತೆ ಸಮಯ ಕೇಳಲಾಗುತ್ತಿದೆ. ಕೊನೆಯ ಬಾರಿ ಅವಕಾಶ ನೀಡಲಾಗುವುದು. ಜೂನ್ 11ರೊಳಗೆ ಉತ್ತರ ನೀಡಬೇಕು” ಎಂದು ಸರ್ಕಾರಕ್ಕೆ ತಾಕೀತು ಮಾಡಿತು. ಅಲ್ಲದೇ, ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಅಮಾನತ್ತಿನಲ್ಲಿಟ್ಟು 2024ರ ನವೆಂಬರ್ 11ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ನ್ಯಾಯಾಲಯ ಮುಂದುವರಿಸಿತು.

ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಮೂಲಕ ರಾಜ್ಯ ಸರ್ಕಾರ 2023ರ ಆಗಸ್ಟ್‌ 30ರಂದು ಹೊರಡಿಸಿರುವ ಆದೇಶ ವಕ್ಫ್‌ ಕಾಯಿದೆ-1995 ಹಾಗೂ ಸಂವಿಧಾನದ 14ನೇ ವಿಧಿ ತದ್ವಿರುದ್ಧವಾಗಿದೆ. ಈ ಆದೇಶ  ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com