ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ಕುರಿತು ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳ ಮಾಹಿತಿ ಹಾಗೂ ಇಂತಹದ್ದೇ ದುರ್ಬಲ ಪ್ರದೇಶಗಳ ಸಮಾನಾಂತರ ಗುರುತಿಸುವಿಕೆಯ ಕುರಿತಾಗಿಯೂ ನ್ಯಾಯಾಲಯ ಮಾಹಿತಿ ಪಡೆಯಲಿದೆ.
Wayanad district and Kerala High Court
Wayanad district and Kerala High Court
Published on

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರದ ಪುನರ್ವಸತಿ ಪ್ರಗತಿಯ ಮೇಲ್ವಿಚಾರಣೆ ನಡೆಸಲು ಮತ್ತು ಅಂತಹ ವಿಪತ್ತುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಪ್ರತಿ ಶುಕ್ರವಾರ ವಿಚಾರಣೆ ನಡೆಸುವುದಾಗಿ ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ.

ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರ ವಿಭಾಗೀಯ ಪೀಠವು ವಯನಾಡ್ ಪ್ರವಾಹ, ಭೂಕುಸಿತದಂತಹ ಪರಿಸರ ವಿಪತ್ತುಗಳನ್ನು ತಡೆಗಟ್ಟಲು ಅಭಿವೃದ್ಧಿ ಚಟುವಟಿಕೆಗಳ ವಿಚಾರದಲ್ಲಿ ಕೈಗೊಳ್ಳಬೇಕಾದ ಸಮಗ್ರ ಮತ್ತು ಸಮತೋಲಿತ ವಿಧಾನದ ಅಗತ್ಯವನ್ನು ಪುನರುಚ್ಚರಿಸಿತು.

ಇಂದಿನ ವಿಚಾರಣೆಯ ವೇಳೆ ನ್ಯಾಯಾಲಯವು, "ನಾವು ಯಾವುದೇ ಸೂಕ್ಷ್ಮ ದತ್ತಾಂಶವನ್ನು ಗುರುತಿಸುತ್ತಿದ್ದೇವೆಯೇ, ಈ ಘಟನೆ ಏಕೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಖಚಿತವಾದ ಯಾವುದೇ ವೈಜ್ಞಾನಿಕ ದೃಷ್ಟಿಕೋನವಿದೆಯೇ?" ಎಂದು ಕೇಳಿತು.

ಪರಿಸರ ವಿಪತ್ತುಗಳನ್ನು ತಗ್ಗಿಸುವ ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವ ಸುತ್ತಲಿನ ನೀತಿಗಳನ್ನು ಅರ್ಥಮಾಡಿಕೊಳ್ಳಲು ಎಲ್ಲಾ ಸಂಬಂಧಿತ ಶಾಸನಗಳ ಸಂಪೂರ್ಣ ಅಧ್ಯಯನದ ಪ್ರಾಮುಖ್ಯತೆಯನ್ನು ಸಹ ಇದೇ ವೇಳೆ ನ್ಯಾಯಾಲಯವು ಒತ್ತಿಹೇಳಿತು.

ಪರಿಣಾಮಕಾರಿ ಮೇಲ್ವಿಚಾರಣೆಯ ಸಲುವಾಗಿ ಈ ಪ್ರಕರಣವನ್ನು ಪ್ರತಿ ಶುಕ್ರವಾರ ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯವು ಘೋಷಿಸಿತು. ಈ ವೇಳೆ ಈ ಕೆಳಗಿನ ಪ್ರಮುಖ ಅಂಶಗಳ ಬಗ್ಗೆ ನ್ಯಾಯಾಲಯವು ನವೀಕೃತ ಮಾಹಿತಿಗಳನ್ನು ಪಡೆಯಲಿದೆ:

- ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ಕುರಿತು ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳ ಮಾಹಿತಿ;

- ಸಂತ್ರಸ್ತರ ಪುನರ್ವಸತಿ ಪ್ರಯತ್ನಗಳು;

- ಇಂತಹದ್ದೇ ದುರ್ಬಲ ಪ್ರದೇಶಗಳ ಸಮಾನಾಂತರ ಗುರುತಿಸುವಿಕೆ;

- ಮುಂಜಾಗಕರೂಕತಾ ಕ್ರಮವಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳು;

ಪ್ರತಿ ಶುಕ್ರವಾರ ನ್ಯಾಯಾಲಯದಲ್ಲಿ ಮೊದಲ ಪ್ರಕರಣವಾಗಿ ಈ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಗೋಪಾಲಕೃಷ್ಣ ಕುರುಪ್ ಕೆ ಅವರು ಅನಾಹುತದಿಂದ ಆಗಿರುವ ಹಾನಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಮಂಡಿಸಿದರು.

ಸುಮಾರು 231 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅದರಲ್ಲಿ 53 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಕನಿಷ್ಠ 378 ಮಂದಿ ಗಾಯಗೊಂಡಿದ್ದಾರೆ, ಸುಮಾರು 128 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದ ಅಂದಾಜು ₹1,200 ಕೋಟಿ ನಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

"ಮೂಲಸೌಕರ್ಯ ಹಾನಿಯಲ್ಲಿ 3 ಸೇತುವೆಗಳು, 126 ಸಮುದಾಯ ಭವನಗಳು, 1,555 ಮನೆಗಳು, 2 ಶಾಲೆಗಳು, ಅಂದಾಜು 1.5 ಕಿಮೀ ಗ್ರಾಮೀಣ ರಸ್ತೆ ಮತ್ತು ಭೂಮಿ ಹಾಗೂ ಜಾನುವಾರುಗಳ ಗಣನೀಯ ನಷ್ಟ ಸಂಭವಿಸಿದೆ" ಎಂದು ಎಜಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಮುಂದುವರೆದು ಈವರೆಗೆ ಅನೇಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ಸಂತ್ರಸ್ತರನ್ನು ಅವುಗಳಲ್ಲಿ ಇರಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಸಹಾಯ ಮಾಡಲು ನಿಯುಕ್ತಗೊಂಡಿರುವ ಅಮಿಕಸ್ ಕ್ಯೂರಿ ಹಿರಿಯ ವಕೀಲ ರಂಜಿತ್ ಥಂಪನ್ ಅವರು ಸಹ ವರದಿಯನ್ನು ಸಲ್ಲಿಸಿದ್ದು, ಮುಂದಿನ ವಿಚಾರಣೆ ವೆಳೆ ನ್ಯಾಯಾಲಯವು ಇದನ್ನು ಪರಿಶೀಲಿಸಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಕೇಂದ್ರ ಜಲ ಆಯೋಗ, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮತ್ತು ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಸೇರಿದಂತೆ ಇತರ ಹಲವು ಕಕ್ಷಿದಾರರನ್ನು ನ್ಯಾಯಾಲಯ ಇಂದು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸಿದೆ.

Kannada Bar & Bench
kannada.barandbench.com