"ಇದು ಎಲೆಕ್ಷನ್‌ ಕಮಿಷನ್‌ ಅಲ್ಲ, ವಾಟ್ಸಾಪ್‌ ಕಮಿಷನ್‌" ಸುಪ್ರೀಂನಲ್ಲಿ ಮಮತಾ ಆಕ್ರೋಶ; ಇಸಿಐ ನಡೆಗೆ ತೀವ್ರ ಅಸಮಾಧಾನ

ಪಟ್ಟಿ ಪರಿಷ್ಕರಣೆ ಸಂಬಂಧ ಮೈಕ್ರೋ ಅಬ್ಸರ್ವರ್‌ಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ನೇಮಿಸಿಕೊಳ್ಳಲಾಗಿದೆ. ಹೆಸರುಗಳನ್ನು ಅಳಿಸುವ ಉದ್ದೇಶದಿಂದಲೇ ಇವರನ್ನು ನೇಮಿಸಲಾಗಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ.
Mamata Banerjee with Supreme Courtfacebook
Mamata Banerjee with Supreme Courtfacebook
Published on

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಶ್ನಿಸಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ನೋಟಿಸ್‌ ನೀಡಿದೆ.

ಹೆಸರುಗಳ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಮತದಾರರಿಗೆ ನೋಟಿಸ್‌ ಕಳುಹಿಸುವಾಗ ಎಚ್ಚರ ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿ ಎಂ ಪಂಚೋಲಿ ಅವರಿದ್ದ ಪೀಠ ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿತು.

Also Read
ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

ಹೆಸರಾಂತ ಲೇಖಕರಿಗೆ ಕೂಡ ನಿರ್ಲಕ್ಷ್ಯದಿಂದ ನೋಟಿಸ್‌ ಕಳಿಸಿರುವುದನ್ನು ಪ್ರಸ್ತಾಪಿಸಿದ ನ್ಯಾಯಾಲಯ ಹೀಗೆ ಆಗಬಾರದು ಎಂದು ಎಚ್ಚರಿಕೆ ನೀಡಿತು.

ಕವಿ ಜಾಯ್‌ ಗೋಸ್ವಾಮಿ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್‌ ದಿವಾನ್‌, ತಾರ್ಕಿಕ ವ್ಯತ್ಯಾಸಗಳ ಪಟ್ಟಿಯಲ್ಲಿ ಲಕ್ಷಾಂತರ ಹೆಸರುಗಳು ಸೇರಿವೆ, ಆದರೆ ಕಾರಣಗಳನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲ ಎಂದು ಆರೋಪಿಸಿದರು. ಹೆಸರುಗಳ ವ್ಯತ್ಯಾಸಕ್ಕೆ ಮಾತ್ರ ಸಂಬಂಧಿಸಿದ ನೋಟಿಸ್‌ಗಳನ್ನು ಹಿಂಪಡೆಯಬೇಕೆಂದು ಅವರು ಮನವಿ ಮಾಡಿದರು.

ಸ್ಥಳೀಯ ಭಾಷೆ ಮತ್ತು ಉಚ್ಚಾರಣೆಯಿಂದ ಹೆಸರುಗಳಲ್ಲಿ ವ್ಯತ್ಯಾಸ ಉಂಟಾಗುವುದು ಸಹಜ ಎಂದ ಪೀಠ ಆ ಕಾರಣಕ್ಕೆ ನೈಜ ಮತದಾರರು ಹೊರಗುಳಿಯುವಂತಾಗಬಾರದು ಎಂದಿತು.

ನ್ಯಾಯಾಲಯದಲ್ಲಿ ಖುದ್ದು ವಾದ ಮಂಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಸ್‌ಐಆರ್‌ ಮೂಲಕ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದರು. ಆಧಾರ್‌ ಸೇರಿದಂತೆ ಹಲವು ದಾಖಲೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸೂಕ್ಷ್ಮ ವೀಕ್ಷಕರನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅವರು ದೂರಿದರು.

ಮುಂದುವರೆದು, "ಚುನಾವಣಾ ಆಯೋಗವು ಎರಡು ವರ್ಷಗಳು ಹಿಡಿಯುವ ಕೆಲಸವನ್ನು ಎರಡು ತಿಂಗಳಲ್ಲಿ ಮಾಡಲು ಹೊರಟಿದೆ. ಆಯೋಗದವರ ಒತ್ತಡದಿಂದಾಗಿ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಚುನಾವಣಾ ಆಯೋಗದ ಆಧಿಕಾರಿಗಳು ಕಾರಣ. ಅವರು ನೀಡಿದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳವನ್ನೇ ಏಕೆ ಗುರಿ ಮಾಡಲಾಗಿದೆ? ಅಸ್ಸಾಂ ಅನ್ನು ಏಕೆ ಗುರಿಯಾಗಿಸಿಲ್ಲ?" ಎಂದು ಮಮತಾ ಬ್ಯಾನರ್ಜಿ ತಮ್ಮ ವಾದದ ವೇಳೆ ಆಕ್ಷೇಪಿಸಿದರು.

ಅಲ್ಲದೆ, "ಪಟ್ಟಿ ಪರಿಷ್ಕರಣೆ ಸಂಬಂಧ ಮೈಕ್ರೋ ಅಬ್ಸರ್ವರ್‌ಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ನೇಮಿಸಿಕೊಳ್ಳಲಾಗುತ್ತಿದೆ. ಹೆಸರುಗಳನ್ನು ಅಳಿಸುವ ಉದ್ದೇಶದಿಂದಲೇ ಇವರನ್ನು ನೇಮಿಸಲಾಗಿದೆ. 58 ಲಕ್ಷ ಮತದಾರರ ಹೆಸರನ್ನು ಮೊದಲ ಹಂತದಲ್ಲಿ ತೆಗೆದು ಹಾಕಲಾಗಿದೆ. ಅಗಾಧ ಸಂಖ್ಯೆಯಲ್ಲಿ ಮತದಾರರನ್ನು ಮೃತರಾಗಿದ್ದಾರೆ ಎನ್ನಲಾಗಿದೆ. ಈ ಎಲೆಕ್ಷನ್‌ ಕಮಿಷನ್‌ ಕ್ಷಮಿಸಿ, ವಾಟ್ಸ್‌ಆಪ್‌ ಕಮಿಷನ್‌ ಈ ಎಲ್ಲ ಕೃತ್ಯಗಳನ್ನು ನಡೆಸಿದೆ," ಎಂದು ಅವರು ಗಂಭೀರವಾದ ಆಕ್ಷೇಪಗಳನ್ನು ಎತ್ತಿದರು.

"ಎರಡನೆ ಹಂತದಲ್ಲಿ 1.30 ಕೋಟಿ ಮತದಾರರನ್ನು ಕೈಬಿಡಲಾಗಿದೆ. ಮೈಕ್ರೋ ಅಬ್ಸರ್ವರ್‌ಗಳ ಮೂಲಕ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ. ಆ ಮೂಲಕ ಪಶ್ಚಿಮ ಬಂಗಾಳದ ಜನತೆಯನ್ನು ದಮನಿಸಲಾಗಿದೆ. ತಾರ್ಕಿಕ ವ್ಯತ್ಯಾಸದ ಪಟ್ಟಿಯನ್ನು ಬಳಸಿ ಮತದಾರರ ಹೆಸರನ್ನು ಅಳಿಸಕೂಡದು," ಎಂದು ಕೋರಿದರು.

Also Read
ಐ- ಪ್ಯಾಕ್ ಪ್ರಕರಣದಲ್ಲಿ ಮಧ್ಯಪ್ರವೇಶಿಸದೆ ಹೋದರೆ ಅರಾಜಕತೆ ಎಂದ ಸುಪ್ರೀಂ ಕೋರ್ಟ್; ಮಮತಾ ಬ್ಯಾನರ್ಜಿಗೆ ನೋಟಿಸ್

ಇದಕ್ಕೆ ಆಕ್ಷೇಪಿಸಿದ ಚುನಾವಣಾ ಆಯೋಗದ ಪರ ವಕೀಲರು ಪ. ಬಂಗಾಳ ಸರ್ಕಾರ ಅಧಿಕಾರಿಗಳನ್ನು ಒದಗಿಸದ ಕಾರಣ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಬೇಕಾಯಿತು ಎಂದರು. ಇದೇ ವೇಳೆ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಚುನಾವಣಾ ಆಯೋಗದ ಅಧಿಕಾರಿಗಳನ್ನು ಶತ್ರುಗಳಂತೆ ಕಾಣುವ ವಾತಾವರಣ ರಾಜ್ಯದಲ್ಲಿದೆ ಎಂದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದ ಪೀಠ ಹೆಸರುಗಳ ವ್ಯತ್ಯಾಸಗಳನ್ನು ಪರಿಶೀಲಿಸಲು ರಾಜ್ಯ ಮತ್ತು ಆಯೋಗ ಸಂಯೋಜಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತು. ಅಂತಿಮವಾಗಿ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದ ಅದು ಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 9ಕ್ಕೆ ನಿಗದಿಪಡಿಸಿತು.

Kannada Bar & Bench
kannada.barandbench.com