ಪ.ಬಂಗಾಳ ಪಂಚಾಯತಿ ಚುನಾವಣೆ: ರಾಜ್ಯ ಚುನಾವಣಾ ಆಯೋಗಕ್ಕೆ ಚಾಟಿ ಬೀಸಿದ ಹೈಕೋರ್ಟ್; ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

“ಚುನಾವಣಾ ಹಿಂಸಾಚಾರ ತಡೆಗಟ್ಟುವ ಸಲುವಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ತಾನು ನೀಡಿದ್ದ ಆದೇಶ ಪಾಲಿಸಲು ಯಾವುದೇ ನಿಖರ ಮತ್ತು ದೃಢ ಕ್ರಮ ಆರಂಭಿಸದೆ ಎಸ್ಇಸಿ ವಿಳಂಬ ಧೋರಣೆ ತಳೆದಿದೆ" ಎಂದು ಪೀಠ ಟೀಕಿಸಿತು.
West Bengal Panchayat Polls
West Bengal Panchayat Polls

ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವನ್ನು (ಎಸ್‌ಇಸಿ) ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದು ನ್ಯಾಯಾಂಗ ನಿಂದನೆ ನೋಟಿಸ್‌ ನೀಡಿದೆ  [ಸುವೆಂದು ಅಧಿಕಾರಿ ಮತ್ತು ರಾಜೀವ್ ಸಿನ್ಹಾ ನಡುವಣ ಪ್ರಕರಣ].

ಚುನಾವಣಾ ಹಿಂಸಾಚಾರ ತಡೆಗಟ್ಟುವ ಸಲುವಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ತಾನು ನೀಡಿದ್ದ ಆದೇಶ ಪಾಲಿಸಲು ಯಾವುದೇ ನಿಖರ ಮತ್ತು ದೃಢ ಕ್ರಮ ಅನುಸರಿಸದೆ ಎಸ್ಇಸಿ ವಿಳಂಬ ಧೋರಣೆ ತಳೆಯಿತು. ಅದರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಕೈಗೊಳ್ಳಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು. ಆದರೆ ಎಸ್‌ಇಸಿ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶಗಳನ್ನು ಕಾರ್ಯಗತಗೊಳಿಸಲಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಉದಯ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.  

ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ನಿಭಾಯಿಸಲು ಸೂಕ್ತ ಪ್ರಮಾಣದ ಅರೆಸೇನಾ ಪಡೆಗಳ ನಿಯೋಜನೆಗೆ ನ್ಯಾಯಾಲಯವು ಆದೇಶಿಸಿದ್ದರೂ ಎಸ್‌ಇಸಿ ಕೇವಲ 22 ತುಕಡಿಗಳನ್ನು ನಿಯೋಜಿಸುವಂತೆ ಮನವಿ ಮಾಡಿತ್ತು. ಈ ಪ್ರಮಾಣವು ಚುನಾವಣಾ ನಿರ್ವಹಣೆ ಮಾಡಲು ಅತ್ಯಂತ ಕಡಿಮೆಯಾಗಿದೆ. ಎಸ್‌ಇಸಿಯ ಈ ನಡೆ ನ್ಯಾಯಾಂಗ ನಿಂದನೆ ಕೃತ್ಯವಾಗಿದೆ. ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲು ಕೂಡ ಚುನಾವಣಾ ಆಯೋಗ ವಿಫಲವಾಗಿದ್ದು ಪಡೆಗಳನ್ನು ಕೇಂದ್ರೀಕೃತವಾಗಿ ನಿಯೋಜಿಸಿರಲಿಲ್ಲ. ಜೊತೆಗೆ ತ್ವರಿತ ನಿಯೋಜನೆಗೆ ಅಗತ್ಯವಿದ್ದ  ಮೂಲ ಸೌಕರ್ಯದ ನೆರವು ನೀಡಲು ವಿಫಲವಾಗಿತ್ತು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರದ ಪಡೆಗಳನ್ನು ನಿಯೋಜಿಸುವಂತೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದ ವಿರುದ್ಧ ಎಸ್‌ಇಸಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದರೂ ಈ ರೀತಿ ನಡೆದುಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳು ಗಮನಸೆಳೆದರು.

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಸೇನಾಪಡೆ ಸಂಚಾಲಕರಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇನ್ಸ್‌ಪೆಕ್ಟರ್ ಜನರಲ್  ಹಲವು ಬಾರಿ ಮನವಿ ಮಾಡಿದ್ದರೂ ಸೂಕ್ಷ್ಮ ಮತಗಟ್ಟೆಗಳ ಪಟ್ಟಿ ನೀಡಲಿಲ್ಲ. ಬದಲಿಗೆ  22 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಇಲ್ಲವೇ ಪೊಲೀಸ್‌ ಕಮಿಷನರ್‌ ಅವರೊಂದಿಗೆ ಕೆಲಸ ಮಾಡುವಂತೆ ಸಂಚಾಲಕರಿಗೆ ಸೂಚಿಸಲಾಗಿತ್ತು.  ಅಲ್ಲದೆ ಈ 22 ಜಿಲ್ಲೆಗಳಲ್ಲಿ 4,384 ಸೂಕ್ಷ್ಮ ಮತಗಟ್ಟೆಗಳಿವೆ ಎಂದಷ್ಟೇ ಹೇಳಿದ್ದ ಎಸ್‌ಇಸಿ, ಈ ಬೂತ್‌ಗಳು ಇರುವ ನಿರ್ದಿಷ್ಟ ಸ್ಥಳಗಳ ಮಾಹಿತಿ ತಿಳಿಸಿರಲಿಲ್ಲ ಎಂಬುದಾಗಿ ನ್ಯಾಯಾಲಯ ಕಿಡಿಕಾರಿತು.

Kannada Bar & Bench
kannada.barandbench.com