ಎಐ ಯುಗದಲ್ಲಿದ್ದೇವೆ; ಸರ್ಕಾರದ ದಾಖಲೆಗಳು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿರಲಿ: ಕೇರಳ ಹೈಕೋರ್ಟ್ ಕಿವಿಮಾತು

ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಹಾಗೂ ಇಂಡಿಯಾಸ್ಟಾಕ್‌ ರೀತಿಯ ಹೊಸ ಯತ್ನಗಳು ನಡೆಯುತ್ತಿರುವಾಗ ಸರ್ಕಾರ ಮತ್ತು ಶಾಸನಬದ್ಧ ಪ್ರಾಧಿಕಾರಗಳ ಪ್ರಮಾಣಪತ್ರ ಇಲ್ಲವೇ ದಾಖಲೆಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗಬೇಕು ಎಂದ ಪೀಠ.
Kerala High Court and AI
Kerala High Court and AI
Published on

ಇದು ಕೃತಕ ಬುದ್ಧಿಮತ್ತೆಯ (ಎಐ) ಯುಗವಾಗಿದ್ದು ನಿಜವಾಗಿಯೂ ಡಿಜಿಟಲ್‌ ಭಾರತದ ಕನಸು ನನಸಾಗಲು ಹೊಸ ಜಾಗತಿಕ ಬೇಡಿಕೆ ಮತ್ತು ಬದಲಾವಣೆಗಳಿಗೆ ಅನುಗುಣವಾಗಿ ಸರ್ಕಾರವು ಮುಂಚೂಣಿಯಲ್ಲಿರಬೇಕು ಎಂದು ಕೇರಳ ಹೈಕೋರ್ಟ್‌ ಈಚೆಗೆ ಹೇಳಿದೆ [ಎಜೋ ಪಿ ಜೆ ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಇನ್ನಿತರರ ನಡುವಣ ಪ್ರಕರಣ].

ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಹಾಗೂ ಇಂಡಿಯಾಸ್ಟಾಕ್‌ ರೀತಿಯ ಹೊಸ ಯತ್ನಗಳು ನಡೆಯುತ್ತಿರುವಾಗ ಸರ್ಕಾರ ಮತ್ತು ಶಾಸನಬದ್ಧ ಪ್ರಾಧಿಕಾರಗಳ ಪ್ರಮಾಣಪತ್ರ ಇಲ್ಲವೇ ದಾಖಲೆಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗಬೇಕು ಎಂದು ನ್ಯಾಯಮೂರ್ತಿ ಸಿ ಎಸ್ ಡಯಾಸ್ ಒತ್ತಿ ಹೇಳಿದರು.

ವಿಶೇಷವಾಗಿ ಭಾರತ ಅಂತಾರಾಷ್ಟ್ರೀಯ ಒಪ್ಪಂದ ಒಡಂಬಡಿಕೆಗಳಿಗೆ ಸಹಿ ಹಾಕಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ಶಾಸನಬದ್ಧ ಪ್ರಾಧಿಕಾರಗಳು ನೀಡುವ  ಪ್ರಮಾಣಪತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪುವಂತಿರಬೇಕು. ಡಿಜಿಟಲ್‌ ಇಂಡಿಯಾವನ್ನು ಸಾಕಾರಗೊಳಿಸುವ ದೃಷ್ಟಿಯಲ್ಲಿ ಜಾಗತಿಕ ಪ್ರಪಂಚದ ಜೊತೆ ಹೆಜ್ಜೆ ಹಾಕಲು ನಾವು ಅನುಕ್ಷಣವೂ ಬದಲಾವಣೆಗೆ ಸಿದ್ಧರಿರಬೇಕು ಮತ್ತು ಶುಷ್ಕ, ಜಟಿಲ ವಿಧಾನಗಳನ್ನು ಅಳವಡಿಸಿಕೊಳ್ಳಬಾರದು ಎಂದು ತೀರ್ಪು ನುಡಿದಿದೆ.

ಕುವೈತ್‌ನಲ್ಲಿ ಉದ್ಯೋಗದಲ್ಲಿರುವ ಅರ್ಜಿದಾರರು ತಮ್ಮ ವಿರುದ್ಧದ ವೈವಾಹಿಕ ಕ್ರಿಮಿನಲ್‌ ಮೊಕದ್ದಮೆಯಲ್ಲಿ ಜಾಮೀನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್‌ ನಿರಾಕ್ಷೇಪಣಾ ಪತ್ರವನ್ನು ಅವರಿಗೆ ನೀಡಲಾಗಿತ್ತು. ಆದರೆ ಕುವೈತ್‌ ರಾಯಭಾರ ಕಚೇರಿ ಪ್ರಮಾಣಪತ್ರ ಸ್ವೀಕರಿಸಲು ಒಪ್ಪಲಿಲ್ಲ. ಏಕೆಂದರೆ ಅದರಲ್ಲಿ ಬಾರ್‌ಕೋಡ್‌, ಸ್ಕ್ಯಾನ್‌ ಮಾಡಿದ ಫೋಟೊ ಅಥವಾ ವ್ಯಕ್ತಿಯ ಕ್ರಿಮಿನಲ್‌ ಪ್ರಕರಣದ ಸ್ಥಿತಿಗತಿ ವಿವರಗಳು ಇರಲಿಲ್ಲ. ಈ ಹಿಂದೆ ತಾನು ಹೈಕೋರ್ಟ್‌ ಕದ ತಟ್ಟಿ ಸೂಕ್ತ ಪ್ರಮಾಣಪತ್ರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಆದೇಶ ಪಡೆದಿದ್ದರೂ ಅಧಿಕಾರಿಗಳು ಅದನ್ನು ಪಾಲಿಸದೇ ಇದ್ದುದರಿಂದ ಪುನಃ ಆ ವ್ಯಕ್ತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ ಪಾಸ್‌ಪೋರ್ಟ್‌ ಅಧಿಕಾರಿಗಳು ಮನವಿಯನ್ನು ಒಪ್ಪಲಿಲ್ಲ. ಅರ್ಜಿದಾರರಿಗೆ ಯಾವುದೇ ಕ್ರಿಮಿನಲ್ ಪೂರ್ವಾಪರ  ಇಲ್ಲದಿದ್ದಾಗ ಮಾತ್ರ ಬಾರ್‌ಕೋಡ್‌ಮತ್ತು ಸ್ಕ್ಯಾನ್ ಮಾಡಿದ ಛಾಯಾಚಿತ್ರಗಳೊಂದಿಗೆ ಪ್ರಮಾಣಪತ್ರ ನೀಡಲು ಕೇಂದ್ರ ಡೇಟಾಬೇಸ್ ಅನುಮತಿ ನೀಡುತ್ತದೆ. ಇಲ್ಲದಿದ್ದರೆ, ಬಾರ್‌ಕೋಡ್ ಮತ್ತು ಸ್ಕ್ಯಾನ್ ಮಾಡಿದ ಛಾಯಾಚಿತ್ರವಿಲ್ಲದೆ ಕೈಬರಹದ ಪ್ರಮಾಣಪತ್ರವಷ್ಟೇ ದೊರೆಯುತ್ತದೆ ಎಂದು ವಿವರಿಸಲಾಯಿತು.

ಆಗ ನ್ಯಾಯಾಲಯ ಜಾಗತಿಕಮಾನದಂಡಗಳಿಗೆ ಅನುಗುಣವಾಗಿ ನವೀಕೃತವಾಗುವುದರ ಮಹತ್ವವನ್ನು ವಿವರಿಸಿತು. ಜೊತೆಗೆ ಕೇಂದ್ರ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು ಮತ್ತು ಅರ್ಜಿದಾರರಿಗೆ ಸೂಕ್ತ ಪ್ರಮಾಣಪತ್ರ ಒದಗಿಸಬೇಕು ಎಂದು ನಿರ್ದೇಶಿಸಿತು.

Kannada Bar & Bench
kannada.barandbench.com