ಟ್ವಿಟರ್‌ ಖಾತೆ ನಿರ್ಬಂಧ ಪ್ರಕರಣ: ಅರ್ಜಿ ವಿಚಾರಣೆ ಮುಂದೂಡಿಕೆ ಕೋರಿದ ಕೇಂದ್ರದ ನಡೆಗೆ ಹೈಕೋರ್ಟ್‌ ತೀವ್ರ ಅಸಮಾಧಾನ

ತನ್ನ ಬಳಕೆದಾರರಿಗೆ ಸಕಾರಣಗಳನ್ನು ನೀಡಬೇಕಿರುವುದರಿಂದ ಖಾತೆ ನಿರ್ಬಂಧ ಆದೇಶಕ್ಕೆ ಕೇಂದ್ರ ಸರ್ಕಾರವು ಕಾರಣಗಳನ್ನು ನೀಡಬೇಕು ಎಂದು ಟ್ವಿಟರ್‌ 2022ರ ಅಕ್ಟೋಬರ್‌ 27ರಂದು ವಾದಿಸಿತ್ತು.
Twitter, Karnataka High Court
Twitter, Karnataka High Court
Published on

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರವು ಮನವಿ ಮಾಡಿದ್ದಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿ ವಿಚಾರಣೆಯನ್ನು ಜನವರಿ 27 ಅಥವಾ ಫೆಬ್ರವರಿ 3ಕ್ಕೆ ನಡೆಸುವಂತೆ ಕೇಂದ್ರ ಸರ್ಕಾರದ ಪರವಾಗಿ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠಕ್ಕೆ ಮನವಿ ಮಾಡಲಾಯಿತು. ಆಗ ನ್ಯಾಯಮೂರ್ತಿಗಳು “ನಾವು ಸರ್ಕಾರ ಹೇಳಿದ್ದನ್ನು ಬರೆದುಕೊಳ್ಳಲು ಇಲ್ಲಿಲ್ಲ. ನಾವು ಇದಕ್ಕೆ ಒಪ್ಪುವುದಿಲ್ಲ… ಜನರು ಏನೆಂದು ಕೊಳ್ಳಬೇಡ? ಚಾಚೂತಪ್ಪದೇ ನಿಮ್ಮ ಆದೇಶ ಪಾಲಿಸಲು ನಾವಿಲ್ಲಿ ಕುಳಿತಿಲ್ಲ. ಎಷ್ಟು ಬಾರಿ ನೀವು ವಿಚಾರಣೆ ಮುಂದೂಡಿಕೆ ಕೋರಿದ್ದೀರಿ? ಆದೇಶದ ಹಾಳೆಗಳನ್ನು ನೋಡಿ” ಎಂದು ಮೌಖಿಕವಾಗಿ ಕಟುವಾಗಿ ನುಡಿದರು.

ತನ್ನ ಬಳಕೆದಾರರಿಗೆ ಸಕಾರಣಗಳನ್ನು ನೀಡಬೇಕಿರುವುದರಿಂದ ಖಾತೆ ನಿರ್ಬಂಧ ಆದೇಶಕ್ಕೆ ಕೇಂದ್ರ ಸರ್ಕಾರವು ಕಾರಣಗಳನ್ನು ನೀಡಬೇಕು ಎಂದು ಟ್ವಿಟರ್‌ 2022ರ ಅಕ್ಟೋಬರ್‌ 27ರಂದು ವಾದಿಸಿತ್ತು.

ಕೇಂದ್ರ ಸರ್ಕಾರದ ಕೋರಿಕೆಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್‌ 16ಕ್ಕೆ ಹೈಕೋರ್ಟ್ ಮುಂದೂಡಿತ್ತು. ಡಿಸೆಂಬರ್‌ 13ರಂದು ಕೇಂದ್ರ ಸರ್ಕಾರ ಕೋರಿಕೆಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೊಮ್ಮೆ ಕೇಂದ್ರ ಸರ್ಕಾರ ಅರ್ಜಿ ವಿಚಾರಣೆ ಮುಂದೂಡಿಕೆ ಕೋರಿದೆ. ನ್ಯಾಯಾಲಯವು ಜನವರಿ 18ಕ್ಕೆ ವಿಚಾರಣೆ ನಿಗದಿಪಡಿಸಿದೆ.

Kannada Bar & Bench
kannada.barandbench.com