ಬೆಂಗಳೂರಿನ ನಗರದ ಈಜಿಪುರ ಹಾಗೂ ಕೋರಮಂಗಲ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮುಂದುವರಿಸಲು ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಅನುಮತಿ ನೀಡಬೇಕೆ? ಅಥವಾ ಹೊಸದಾಗಿ ಟೆಂಡರ್ ಕರೆಯಬೇಕೆ? ಎಂಬ ಬಗ್ಗೆ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಮಂಗಳವಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮೇಲ್ಸೇತುವೆ ಕಾಮಗಾರಿ ವಿಳಂಬ ಪ್ರಶ್ನಿಸಿ ಕೋರಮಂಗಲ ನಿವಾಸಿ ಆದಿನಾರಾಯಣ ಶೆಟ್ಟಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಸ್ತೃತವಾಗಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮನವಿ ಇತ್ಯರ್ಥಪಡಿಸಿತು.
ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಿಂಪ್ಲೆಕ್ಸ್ ಕಂಪೆನಿಗೆ ನಿರ್ದೇಶಿಸಬೇಕು ಎಂದು ಸರ್ಕಾರದ ಪರ ವಕೀಲೆ ಕೋರಿದರು. ಇದಕ್ಕೆ ಅಸಮಾಧಾನಗೊಂಡ ಪೀಠವು “ಬಿಬಿಎಂಪಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ನೀವೇಕೆ ನ್ಯಾಯಾಲಯವನ್ನು ಅವಲಂಬಿಸಿದ್ದೀರಿ? ಗುತ್ತಿಗೆ ಒಪ್ಪಂದ ಮತ್ತು ಕಾಯಿದೆ ಅಡಿ ನಿಮಗೆ ಅಧಿಕಾರವಿಲ್ಲವೇ? ಗುತ್ತಿಗೆ ಮಂಜೂರು ಮಾಡುವಾಗ ನಿರ್ದಿಷ್ಟ ಕಂಪೆನಿಯ ಅರ್ಹತೆಗಳ ಬಗ್ಗೆ ನಿಮಗೆ ತಿಳಿದಿರುವುದಿಲ್ಲವೆ?” ಎಂದು ಕಟುವಾಗಿ ನುಡಿಯಿತು.
ಮುಂದುವರಿದು, “ನಿರ್ದಿಷ್ಟ ವಿಚಾರದ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಾಗದಿದ್ದರೆ ಅಧಿಕಾರಿಗಳನ್ನು ಏಕೆ ನೇಮಕ ಮಾಡಬೇಕು? ಇದನ್ನು ನ್ಯಾಯಾಲಯಕ್ಕೆ ಸಾಗ ಹಾಕಬಹುದೇ? ನಮಗೆ ಯಾವುದೇ ತೆರನಾದ ತಜ್ಞತೆ ಇರುವುದಿಲ್ಲ. ನಾವು ಟೆಂಡರ್ ಆಹ್ವಾನಿಸುವ ಪ್ರಾಧಿಕಾರವಲ್ಲ. ನಾವು ಮೇಲ್ಸೇತುವೆ ನಿರ್ಮಿಸುವ ಉದ್ಯಮದಲ್ಲಿ ಇಲ್ಲ. ಹೀಗಾಗಿ, (ಸಿಂಪ್ಲೆಕ್ಸ್) ಕಂಪೆನಿಯು ಕೆಲಸ ಮಾಡಲು ಅರ್ಹವಾಗಿದೆಯೇ, ಇಲ್ಲವೇ ಎಂಬುದು ನಮಗೆ ತಿಳಿಯುವುದಿಲ್ಲ. ಇದನ್ನು ನಿಮಗೆ (ಬಿಬಿಎಂಪಿ) ನಿರ್ಧರಿಸಲಾಗಿಲ್ಲ ಎಂದರೆ ಆ ಪ್ರಾಧಿಕಾರವನ್ನು ಅಧಿಕ್ರಮಣ (ಸೂಪರ್‌ಸೀಡ್) ಮಾಡಬೇಕು. ನೀವು ಮಾಡಲಾಗಿಲ್ಲ ಎಂದರೆ ನ್ಯಾಯಾಲಯ ಮಾಡಬೇಕು ಎಂದು ನೀವು ವಾದಿಸುತ್ತಿದ್ದೀರಿ” ಎಂದು ಪೀಠವು ಸರ್ಕಾರದ ವಕೀಲರನ್ನು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.
ಅಂತಿಮವಾಗಿ, “ಸಿಂಪ್ಲೆಕ್ಸ್ ಕಂಪೆನಿಯು ಕಾಮಗಾರಿ ವಿಳಂಬ ಮಾಡಿದ್ದರಿಂದ ಹೈಕೋರ್ಟ್ ನಿರ್ದೇಶನದ ಮೇರೆಗೆ ಗುತ್ತಿಗೆ ರದ್ದುಪಡಿಸಲಾಗಿದೆ. ಇದೀಗ ಗುತ್ತಿಗೆ ಕಂಪನಿಯು ಕಾಲಮತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದಕ್ಕಾಗಿ ಬ್ಯಾಂಕ್ ಭದ್ರತಾ ಖಾತರಿ ನೀಡುವುದಾಗಿ ಹೇಳುತ್ತಿದೆ. ಆದರೆ, ಕಾಮಗಾರಿ ಮುಂದುವರಿಸಲು ಅನುಮತಿ ನೀಡುವ ವಿಚಾರದಲ್ಲಿ ಬಿಬಿಎಂಪಿಗೆ ಸಮಸ್ಯೆ ಎದುರಾಗಿದೆ. ಬಿಬಿಎಂಪಿ ಮತ್ತು ಕಂಪೆನಿ ನಡುವೆ ವಿವಾದವಿದ್ದರೂ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಯಿದೆ. ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ.
“ಹೊಸದಾಗಿ ಟೆಂಡರ್ ಕರೆದರೆ ಕಾಮಗಾರಿ ಮತ್ತುಷ್ಟು ವಿಳಂಬವಾಗಬಹುದು ಹಾಗೂ ಕಾಮಗಾರಿ ವೆಚ್ಚ ಸಹ ಹೆಚ್ಚಾಗಬಹುದು. ಹಾಗಾಗಿ, ಸಿಂಪ್ಲೆಕ್ಸ್ ಕಂಪೆನಿಗೆ ಕಾಮಗಾರಿ ಮುಂದುವರಿಸಲು ಅನುಮತಿ ನೀಡುವ ವಿಚಾರದಲ್ಲಿ ಬಿಬಿಎಂಪಿ ಮರುಪರಿಶೀಲನೆ ನಡೆಸಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕಿದೆ. ಅದಕ್ಕಾಗಿ ಒಂದು ವಾರದಲ್ಲಿ ಕಂಪನಿ ಜೊತೆಗೆ ಸಭೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು. ನಂತರದ ಎರಡು ವಾರದಲ್ಲಿ ಕಂಪನಿಗೆ ನೀಡಿರುವ ಗುತ್ತಿಗೆ ಮುಂದುವರಿಸಬೇಕೆ ಅಥವಾ ಹೊಸದಾಗಿ ಟೆಂಡರ್ ಕರೆಯಬೇಕೆ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಬೇಕು” ಎಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.
“ಬಿಬಿಎಂಪಿ ಅನುಮತಿ ನೀಡಿದರೆ ಒಂಭತ್ತು ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕಂಪೆನಿ ಮುಚ್ಚಳಿಕೆ ಸಲ್ಲಿಸಿದೆ. ಅದರಂತೆ ಮೇಲ್ಸೇತುವೆ ಕಾಮಗಾರಿ ಮುಂದುವರಿಸಲು ಕಂಪೆನಿಗೆ ಅನುಮತಿ ನೀಡಲು ಬಿಬಿಎಂಪಿ ನಿರ್ಧರಿಸಿದರೆ, ಆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆ ಪ್ರಸ್ತಾವನೆ ಸ್ವೀಕರಿಸಿದ ದಿನದಿಂದ ಎರಡು ವಾರಗಳಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಬೇಕು. ನಿರ್ಧಾರ ಕೈಗೊಳ್ಳುವಾಗ ಈಗಾಗಲೇ ಕಂಪೆನಿಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಿರುವ ಆದೇಶದ ಪ್ರಭಾವಕ್ಕೆ ಒಳಗಾಗಬಾರದು. ಒಂದು ವೇಳೆ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದರೆ ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಕಂಪೆನಿ ವಿರುದ್ಧ ಈ ಹಿಂದೆ ದಾಖಲಿಸಿರುವ ಎಫ್‌ಐಆರ್ ಅನ್ನು ಬಿಬಿಎಂಪಿ ಹಿಂಪಡೆಯಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನಲೆ: ಸಂಚಾರ ದಟ್ಟಣೆ ತಪ್ಪಿಸಲು ನಗರದ ಈಜಿಪುರ ಜಂಕ್ಷನ್‌ನಿಂದ ಕೋರಮಂಗಲದ ಕೇಂದ್ರೀಯ ಸದನದವರೆಗಿನ 2.5 ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗಿತ್ತು. 2014ರಲ್ಲಿ ಒಟ್ಟು 157.66 ಕೋಟಿ ರೂಪಾಯಿ ಮೊತ್ತದ ಟೆಂಡರ್ ಅನ್ನು ಬಿಬಿಎಂಪಿ ಕರೆದಿತ್ತು. ಒಪ್ಪಂದದ ಪ್ರಕಾರ 2019ರ ನವೆಂಬರ್ 4ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿತ್ತು.
ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯವು ಗುತ್ತಿಗೆ ರದ್ದುಪಡಿಸುವಂತೆ 2022ರ ಫೆಬ್ರವರಿ 17ರಂದು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಿರ್ದೇಶಿಸಿತ್ತು. ಅದರಂತೆ ಗುತ್ತಿಗೆ ರದ್ದುಪಡಿಸಿ 2022ರ ಮಾರ್ಚ್ 3ರಂದು ಸರ್ಕಾರ ಆದೇಶಿಸಿತ್ತು. ಅಲ್ಲದೆ, ಗುತ್ತಿಗೆ ಕಂಪೆನಿ ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಾಗಿತ್ತು. ನಂತರ ಗುತ್ತಿಗೆ ಕಂಪೆನಿ ಹೈಕೋರ್ಟ್ ಮೊರೆ ಹೋಗಿ, ಅನುಮತಿ ನೀಡಿದರೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೋರಿತ್ತು. ಇದರಿಂದ ಕಾಮಗಾರಿ ಮುಂದುವರಿಸಲು ಅನುಮತಿಸುವ ಬಗ್ಗೆ ಮರು ಪರಿಶೀಲಿಸುವಂತೆ ಬಿಬಿಎಂಪಿಗೆ ಹೈಕೋಟ್ ಸಲಹೆ ನೀಡಿತ್ತು.