Karnataka HC and BDA
Karnataka HC and BDA

ಶಿವರಾಮ ಕಾರಂತ ಬಡಾವಣೆ: ನಿವೃತ್ತ ನ್ಯಾ. ಚಂದ್ರಶೇಖರ್‌ ಸಮಿತಿ ವಿಸರ್ಜನೆಗೆ ಹೈಕೋರ್ಟ್‌ ಅಸ್ತು

ಸಮಿತಿಯ ಕೆಲಸ, ಕಾರ್ಯ, ವೇತನ, ದತ್ತಾಂಶ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ 17,95,10,448 ಖರ್ಚಾಗಿದೆ. ಇದರಲ್ಲಿ ದತ್ತಾಂಶ ನಿರ್ವಹಣೆಗೆ ಏಜೆನ್ಸಿಯೊಂದಕ್ಕೆ ಮೂರು ಕೋಟಿ ಖರ್ಚು ಮಾಡಿರುವುದೂ ಸೇರಿದೆ ಎಂದು ವಿವರಿಸಿದ ಅಡ್ವೊಕೇಟ್‌ ಜನರಲ್.‌

ಬೆಂಗಳೂರಿನ ಡಾ. ಶಿವರಾಮಕಾರಂತ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಕಾಲಕಾಲಕ್ಕೆ ತಕ್ಕಂತೆ ಹೊರಡಿಸಿರುವ ಆದೇಶಗಳನ್ನು ಪ್ರಶ್ನಿಸಿರುವ ಹೈಕೋರ್ಟ್‌ನ ವಿವಿಧ ಪೀಠಗಳ ಮುಂದೆ ಬಾಕಿ ಇರುವ ಪ್ರಕರಣಗಳನ್ನು ವಿಶೇಷ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್‌ ಮತ್ತು ಎಂ ನಾಗಪ್ರಸನ್ನ ಅವರ ನೇತೃತ್ವದ ವಿಶೇಷ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಮಿತಿಯು ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಳಿಸಿರುವುದರಿಂದ ಸಮಿತಿಯ ಅಧ್ಯಕ್ಷರ ಶಿಫಾರಸ್ಸಿನಂತೆ ಸಮಿತಿ ವಿಸರ್ಜನೆ ಮಾಡಲು, ವಿಶೇಷ ಪೀಠದ ಉಸ್ತುವಾರಿಯಲ್ಲಿ ಬಿಡಿಎ ಕಾರ್ಯನಿರ್ವಹಿಸಬಹುದಾಗಿದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ಸಮಿತಿಯ ದಾಖಲೆಗಳು ಮತ್ತು ದತ್ತಾಂಶ ಸಂಗ್ರಹಿಸಿರುವ ಸ್ಥಳದ ಪರಿಶೀಲನೆಯನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಮತ್ತು ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಜನರಲ್‌ ಅವರು ನಡೆಸಬೇಕು. ಅಲ್ಲಿರುವ ವಸ್ತುಗಳ ಪಟ್ಟಿಯನ್ನು ರಿಜಿಸ್ಟ್ರಾರ್‌ ಜನರಲ್‌ ಸಿದ್ಧಪಡಿಸಬೇಕು. ಕಂಪ್ಯೂಟರ್‌ ರಿಜಿಸ್ಟ್ರಾರ್‌ ಅವರು ಸಿಸ್ಟಂನಲ್ಲಿರುವ ದತ್ತಾಂಶವನ್ನು ಹೈಕೋರ್ಟ್‌ ನಿರ್ವಹಿಸುತ್ತಿರುವ ಸ್ವತಂತ್ರ ಸಿಸ್ಟಂಗೆ ವರ್ಗಾಯಿಸಿಕೊಳ್ಳಬೇಕು. ಇದು ನ್ಯಾಯಾಲಯದ ಕಸ್ಟಡಿಯಲ್ಲಿರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಿಜಿಸ್ಟ್ರಾರ್‌ ಜನರಲ್‌ ಅವರು ಸಿದ್ಧಪಡಿಸಿದ ವಸ್ತುಗಳ ಪಟ್ಟಿಯನ್ನು ಬಿಡಿಎ ಆಯುಕ್ತರಿಗೆ ಕಳುಹಿಸಿಕೊಡಬೇಕು, ದತ್ತಾಂಶ ಶೇಖರಿಸಲು ಮತ್ತು ಕಾಪಾಡಲು ಕಂಪ್ಯೂಟರ್‌ ರಿಜಿಸ್ಟ್ರಾರ್‌ ಅವರಿಗೆ ಏಜೆನ್ಸಿಯು ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಬೇಕು. ದತ್ತಾಂಶ ಸಂಗ್ರಹ ಮತ್ತು ನಿರ್ವಹಣೆಗೆ ಅಪಾರ ಹಣ ಖರ್ಚು ಮಾಡಲಾಗಿದ್ದು, ಅದನ್ನು ನ್ಯಾಯಾಲಯದ ನಿಯಂತ್ರಣಕ್ಕೆ ಪಡೆಯುವವರೆಗೆ ಅಂದರೆ 29.02.2024ರವರೆಗೆ ಬಿಡಿಎಯು ಏಜೆನ್ಸಿಯ ಗುತ್ತಿಗೆ ನವೀಕರಿಸಬೇಕು ಎಂದೂ ನ್ಯಾಯಾಲಯ ಆದೇಶ ಮಾಡಿದೆ.

ಬಿಡಿಎ ಸೇರಿದಂತೆ ಯಾವುದೇ ವ್ಯಕ್ತಿಯು ಸಮಿತಿಯ ಯಾವುದೇ ವಿಚಾರಕ್ಕೆ ಆಕ್ಷೇಪ ಹೊಂದಿದ್ದರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಇದೆಲ್ಲವನ್ನೂ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ನಿರ್ಧರಿಸಲಿದೆ ಎಂದಿದೆ. 12.12.2023ರ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಎಲ್ಲಾ ದಾಖಲೆಗಳನ್ನು ವರ್ಗಾಯಿಸಲು ಸರ್ವೋಚ್ಚ ನ್ಯಾಯಾಲಯದ ಸೆಕ್ರೆಟರಿ ಜನರಲ್‌ ಅವರಿಗೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ವಿಷಯ ಮುಟ್ಟಿಸಬೇಕು ಎಂದು ಆದೇಶಿಸಿಲಾಗಿದೆ.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಿವೃತ್ತ ನ್ಯಾ. ಎ ವಿ ಚಂದ್ರಶೇಖರ್‌ ಅವರ ನೇತೃತ್ವದ ಸಮಿತಿಯನ್ನು 03.12.2020ರಂದು ರಚಿಸಲಾಗಿದ್ದು, ಅದರ ಅವಧಿಯು 31.12.2023ರಂದು ಮುಗಿದಿದೆ. ನ್ಯಾ. ಚಂದ್ರಶೇಖರ್‌ ಅವರು ಸಮಿತಿಯ ಮುಂದುವರಿಕೆಗೆ ಆಕ್ಷೇಪಿಸಿದ್ದಾರೆ. ಆದರೆ, ಸಮಿತಿಯ ಸದಸ್ಯರು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸಮಿತಿ ಮುಂದುವರಿಕೆಗೆ ಒಲವು ತೋರಿದ್ದಾರೆ. ಸಮಿತಿಯ ರಚನೆಯ ಉದ್ದೇಶ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ, ಸಮಿತಿ ಮುಂದುವರಿಕೆ ಅಗತ್ಯವಿಲ್ಲ ಎಂದು ನ್ಯಾ. ಚಂದ್ರಶೇಖರ್‌ ಅವರು ಶಿಫಾರಸ್ಸು ಮಾಡಿದ್ದಾರೆ. ಇದರ ಅನ್ವಯ 12.12.2023ರಂದು ಸುಪ್ರೀಂ ಕೋರ್ಟ್‌ ಸಮಿತಿ ಮುಂದುವರಿಕೆ ವಿಚಾರವನ್ನು ನಿರ್ಧರಿಸಲು ವಿಶೇಷ ಪೀಠದ ವಿವೇಚನೆಗೆ ಬಿಟ್ಟಿದೆ” ಎಂದರು.

Also Read
ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸುವಂತಿಲ್ಲ: ಹೈಕೋರ್ಟ್‌

ಮುಂದುವರಿದು, “ಸಮಿತಿಯ ಕೆಲಸ, ಕಾರ್ಯ, ವೇತನ, ದತ್ತಾಂಶ ನಿರ್ವಹಣೆಗಾಗಿ ಸರ್ಕಾರದ ಬೊಕ್ಕಸದಿಂದ 17,95,10,448 ಖರ್ಚಾಗಿದೆ. ಇದರಲ್ಲಿ ದತ್ತಾಂಶ ನಿರ್ವಹಣೆಗೆ ಏಜೆನ್ಸಿಯೊಂದಕ್ಕೆ ಮೂರು ಕೋಟಿ ಖರ್ಚು ಮಾಡಿರುವುದೂ ಸೇರಿದೆ. ಇದು ಬಿಡಿಎ ಹಣವಲ್ಲ. ಆದರೆ, ಜನರ ತೆರಿಗೆ ಹಣ. ಸಮಿತಿಯ ವರದಿಯ ಅನುಷ್ಠಾನಕ್ಕೆ ಬಿಡಿಎ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇದಕ್ಕೆ ಯಾವುದೇ ಹಣ ಖರ್ಚಾಗುವುದಿಲ್ಲ. ಈಗಾಗಲೇ 18 ಕೋಟಿ ಖರ್ಚಾಗಿರುವುದರಿಂದ ಹೆಚ್ಚಿನ ಖರ್ಚಿಗೆ ತಡೆಯೊಡ್ಡಬೇಕಿದೆʼ ಎಂದು ತಿಳಿಸಿದ್ದಾರೆ. ಇದನ್ನು ನ್ಯಾಯಾಲಯ ದಾಖಲಿಸಿದೆ.

Related Stories

No stories found.
Kannada Bar & Bench
kannada.barandbench.com