ಸರ್ಕಾರಿ ಬಂಗಲೆ ವಿವಾದ: ಸ್ಥಳಾಂತರಗೊಳ್ಳುವುದಾಗಿ ತಿಳಿಸಿದ ನಿವೃತ್ತ ಸಿಜೆಐ ಚಂದ್ರಚೂಡ್

ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಧಿಕೃತ ಸಿಜೆಐ ನಿವಾಸದಲ್ಲಿ ನಿವೃತ್ತಿಯ ಬಳಿಕವೂ ವಾಸಿಸುತ್ತಿರುವ ಬಗ್ಗೆ ವಿವಾದ ಎದ್ದ ಹಿನ್ನೆಲೆಯಲ್ಲಿ ನ್ಯಾ. ಚಂದ್ರಚೂಡ್ ʼಬಾರ್ ಅಂಡ್ ಬೆಂಚ್ʼಗೆ ಈ ಪ್ರತಿಕ್ರಿಯೆ ನೀಡಿದರು.
Justice DY Chandrachud
Justice DY Chandrachud
Published on

ದೆಹಲಿಯ 5, ಕೃಷ್ಣ ಮೆನನ್ ಮಾರ್ಗದಲ್ಲಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಅಧಿಕೃತ ಬಂಗಲೆ ತೆರವುಗೊಳಿಸುವಲ್ಲಿ ವಿಳಂಬ ಉಂಟಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ʼಬಾರ್ & ಬೆಂಚ್‌ʼಗೆ ತಿಳಿಸಿದರು.

ಮುಂದಿನ ಎರಡು ವಾರಗಳಲ್ಲಿ ತಾವು ಮತ್ತು ತಮ್ಮ ಕುಟುಂಬ ಸದಸ್ಯರು ಅಧಿಕೃತ ನಿವಾಸ ತೊರೆಯುವುದಾಗಿ ಅವರು ಹೇಳಿದರು. ಸಾಮಗ್ರಿಗಳನ್ನು ಜೋಡಿಸಿಕೊಳ್ಳಲಾಗಿದೆ. ಹೆಚ್ಚೆಂದರೆ ಇನ್ನೆರಡು ವಾರಗಳ ಒಳಗೆ ಮನೆ ಖಾಲಿ ಮಾಡಲಾಗುವುದು ಎಂದರು.

ನವೆಂಬರ್ 2024 ರಲ್ಲಿ ನಿವೃತ್ತರಾದ ನ್ಯಾ. ಚಂದ್ರಚೂಡ್ ಅವರು ತೀನ್ ಮೂರ್ತಿ ಮಾರ್ಗದಲ್ಲಿರುವ ಸರ್ಕಾರದಿಂದ ಹಂಚಿಕೆಯಾದ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ 6 ತಿಂಗಳವರೆಗೆ ತಮ್ಮ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಲು ಅವಕಾಶ ಇರಲಿದೆ.

CJI Chandrachud daughters rashtrapati bhavan
CJI Chandrachud daughters rashtrapati bhavan PTI

ತಮ್ಮ ಇಬ್ಬರು ದತ್ತುಪುತ್ರಿಯರು ವಿಕಲಚೇತನರಾಗಿರುವುದರಿಂದ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಧಿಕೃತ ಸಿಜೆಐ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದ್ದಾಗಿ ಅವರು ಹೇಳಿದರು. ಅಪರೂಪದ ಆನುವಂಶಿಕ ನ್ಯೂನತೆ ನೆಮಲಿನ್ ಮಯೋಪತಿ ಎಂಬ ವೈದ್ಯಕೀಯ ಸ್ಥಿತಿಯಲ್ಲಿರುವ ಪ್ರಿಯಾಂಕಾ ಮತ್ತು ಮಾಹಿ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಚಂದ್ರಚೂಡ್‌ ಮತ್ತು ಕಲ್ಪನಾ ದಾಸ್‌ ದಂಪತಿ ದತ್ತು ಪಡೆದಿದ್ದಾರೆ.

ನ್ಯಾ. ಚಂದ್ರಚೂಡ್‌ ಅವರು ಬಂಗಲೆ ತೆರವುಗೊಳಿಸದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ ಆಡಳಿತ ವಿಭಾಗ ಕೆಲ ದಿನಗಳ ಹಿಂದೆ ಪತ್ರ ಬರೆದಿತ್ತು.

ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 2024 ರಂದು ನಿವೃತ್ತರಾಗಿದ್ದರು. ಏಪ್ರಿಲ್ 30ರವರೆಗೆ ಔಪಚಾರಿಕವಾಗಿ  ಬಂಗಲೆಯಲ್ಲಿರಲು ಅನುಮತಿ ನೀಡಲಾಗಿತ್ತು. ಈ ಅವಕಾಶ ಮೇ 31ರವರೆಗೆ ಅನೌಪಚಾರಿಕ ವಿಸ್ತರಣೆಯಾಗಿತ್ತು. ಅವರು ಜುಲೈನಲ್ಲಿ ಕೂಡ ಮನೆ ತೊರೆಯದೆ ಇದ್ದುದರಿಂದ ಸುಪ್ರೀಂ ಕೋರ್ಟ್‌ ಅಪರೂಪ ಎಂಬಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿತು.

Kannada Bar & Bench
kannada.barandbench.com