
ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಕೊಲಿಜಿಯಂ ಮಾಡಿದ ಶಿಫಾರಸುಗಳನ್ನು ಅನುಮೋದಿಸಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ತಾನು ಗಮನಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಾಲಯ ತನ್ನ ಆಡಳಿತಾತ್ಮಕ ವಿಭಾಗದಿಂದ ಈ ವಿಚಾರದ ಬಗ್ಗೆ ಮುಂದುವರೆಯುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತಿಳಿಸಿತು.
ಇತ್ತೀಚೆಗೆ ದೆಹಲಿ ವಕೀಲರೊಬ್ಬರನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕೆಂಬ ಶಿಫಾರಸು ತಡೆಹಿಡಿದಿದ್ದನ್ನು ಪೀಠ ನಿರ್ದಿಷ್ಟವಾಗಿ ಪ್ರಸ್ತಾಪಿಸಿತು.
ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣದ ಕುರಿತು ಹಿರಿಯ ವಕೀಲ ಅರವಿಂದ್ ದಾತಾರ್ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಪೀಠ ಈ ವಿಚಾರಗಳನ್ನು ಹಂಚಿಕೊಂಡಿತು.
2019 ರಲ್ಲಿ ಮೊದಲಿಗೆ ಶಿಫಾರಸು ಮಾಡಲಾಗಿತ್ತು. 2021 ಮತ್ತು 22ರಲ್ಲಿ ಅದೇ ಶಿಫಾರಸುಗಳನ್ನು ಪುನರುಚ್ಚರಿಸಲಾಗಿತ್ತು. ಈಗಲೂ ಆ ಶಿಫಾರಸುಗಳಿಗೆ ಅನುಮೋದನೆ ದೊರೆಯದೆ ಬಾಕಿ ಉಳಿದಿವೆ. ನಾಲ್ಕು ವರ್ಷಗಳಿಂದ ಅನುಮೋದನೆ ಬಾಕಿ ಉಳಿದಿದ್ದು ಅಭ್ಯರ್ಥಿಗಳು ಅವರ ಸೇವಾ ಹಿರಿತನ ಕಳೆದುಕೊಳ್ಳುತ್ತಾರೆ ಎಂದು ದಾತಾರ್ ಆತಂಕ ವ್ಯಕ್ತಪಡಿಸಿದರು.
ಹಿರಿಯ ವಕೀಲೆ ಶ್ವೇತಶ್ರೀ ಮಜುಂದಾರ್ ಅವರ ನೇಮಕಾತಿ ಶಿಫಾರಸನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಕಿ ಉಳಿಸಿಕೊಂಡಿದ್ದನ್ನು ನಂತರ ಅವರು ನ್ಯಾಯಮೂರ್ತಿಗಳಾಗಲು ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದನ್ನು ಪ್ರಸ್ತಾಪಿಸಿದ ನ್ಯಾ. ಗವಾಯಿ ಅವರು ನಾವು ನ್ಯಾಯಾಲಯದ ಆಡಳಿತ ವಿಭಾಗದ ವತಿಯಿಂದಲೂ ಈ ವಿಚಾರವಾಗಿ ಮುಂದುವರೆಯುತ್ತಿದ್ದೇವೆ. ನನಗೆ ಗೊತ್ತಿದೆ. ದೆಹಲಿಯ ಮಹಿಳೆಯೊಬ್ಬರಿಗೆ ಇಂಥದ್ದೇ ಸ್ಥಿತಿ ಉಂಟಾಯಿತು ಎಂದರು.
ಇದಕ್ಕೆ ದನಿಗೂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು "ಹೌದು, ಆಕೆ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಯಾಗಿದ್ದರು. ಇದು ನಿರಂತರವಾಗಿ ನಡೆಯುತ್ತಿದೆ..." ಎಂದರು.
ಈ ಹಂತದಲ್ಲಿ ದಾತಾರ್ ಅವರು ʼಕೊಲಿಜಿಯಂ ಶಿಫಾರಸುಗಳನ್ನು ಸರ್ಕಾರವು 3 ರಿಂದ 4 ವರ್ಷಗಳ ಕಾಲ ಬಾಕಿ ಇಡುವಂತಿಲ್ಲ. ಸರ್ಕಾರ ಕಾಲಸೂಚಿ ಪಾಲಿಸಬೇಕಾಗುತ್ತದೆ ಎಂದು ಹೇಳಿದರು ಅಂತಿಮವಾಗಿ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಿಜೆಐ ಸಮ್ಮತಿಸಿದರು.