ಮುಸ್ಲಿಮರ ಮತ ಬೇಡ ಹೇಳಿಕೆ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್‌ವೈ ಅವರ ಶಿವಮೊಗ್ಗದ ಮನೆಯ ಆವರಣದಲ್ಲಿ 2023ರ ಏಪ್ರಿಲ್‌ 25ರಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಕೆ ಎಸ್ ಈಶ್ವರಪ್ಪ ವಿವಾದಾತ್ಮ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
K S Eshwarappa and Karnataka HC
K S Eshwarappa and Karnataka HC

‘ನಮಗೆ ಮುಸ್ಲಿಮರ ಮತ ಬೇಡ’ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಕೆ ಎಸ್ ಈಶ್ವರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಡಿಸೆಂಬರ್‌ 15ಕ್ಕೆ ಮುಂದೂಡಿತು. ಕೆ ಎಸ್ ಈಶ್ವರಪ್ಪ ಪರ ವಕೀಲ ಎಂ ವಿನೋದ್ ಕುಮಾರ್ ವಾದ ಮಂಡಿಸಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಶಿವಮೊಗ್ಗದ ಮನೆಯ ಆವರಣದಲ್ಲಿ 2023ರ ಏಪ್ರಿಲ್‌ 25ರಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಕೆ ಎಸ್ ಈಶ್ವರಪ್ಪ ಮಾತನಾಡುತ್ತ, ಶಿವಮೊಗ್ಗದಲ್ಲಿ 50ರಿಂದ 55 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಆದರೆ, ನಮಗೆ ಒಂದೇ ಒಂದು ಮುಸ್ಲಿಮರ ಮತ ಬೇಡ ಎಂದು ಹೇಳಿದ್ದರು ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವರದಿಯಾಗಿತ್ತು.

ಈ ಸುದ್ದಿಯನ್ನು ಆಧರಿಸಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಎಚ್ ಮಹೇಶ್ ಅವರು ಮೇ 6ರಂದು ರಂದು ವಿನೋಬಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಧೀಶರು ಪ್ರಕರಣದ ತನಿಖೆಗೆ ವಿನೋಬಾನಗರ ಪೊಲೀಸರಿಗೆ ಅನುಮತಿ ನೀಡಿದ್ದರು. ಅದರಂತೆ, ಮೇ 8ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಡಿಸೆಂಬರ್‌ 2ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಇದೀಗ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ.

ಪ್ರಕರಣ ದಾಖಲಾಗಿದ್ದಾಗ ಅರ್ಜಿದಾರರು ಶಾಸಕರಾಗಿದ್ದರು. ಹಾಗಾಗಿ ಜನಪ್ರತಿನಿಧಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ. ಅದರಂತೆ ಪೊಲೀಸರು ಪಡೆದುಕೊಂಡ ಅನುಮತಿ ಊರ್ಜಿತವಾಗುವುದಿಲ್ಲ. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 125ರ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಶಿವಮೊಗ್ಗದ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆದು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ನಡೆದ ತನಿಖೆಯ ಅಂತಿಮ ವರದಿಯನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಖಾಸಗಿ ಸುದ್ದಿ ಸಂಸ್ಥೆಯ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಬಂದ ಮಾಹಿತಿ ಆಧರಿಸಿ ದೂರು ದಾಖಲಿಸಲಾಗಿದೆ. ಉಳಿದಂತೆ ಪ್ರಕರಣದಲ್ಲಿ ಯಾವುದೇ ಬಲವಾದ ಸಾಕ್ಷಿ-ಪುರಾವೆಗಳಿಲ್ಲ. ಆದ್ದರಿಂದ ಇಂತಹ ಪ್ರಕರಣದ ತನಿಖೆ ಕಾನೂನಿನ ದುರ್ಬಳಕೆ ಆಗಲಿದ್ದು, ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com