ಖಾಲಿದ್‌ ಭಾಷಣ ಹಾನಿಕಾರಕ, ಪ್ರಚೋದನಾಕಾರಿ: ಸರ್ಕಾರಿ ಅಭಿಯೋಜಕರಿಗೆ ನೋಟಿಸ್‌ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಖಾಲಿದ್‌ ಅವರ ಅಮರಾವತಿ ಭಾಷಣದ ಬಗ್ಗೆ ನ್ಯಾಯಾಲಯವು “ಬ್ರಿಟಿಷರ ವಿರುದ್ಧ ಒಂದೇ ಒಂದು ಸಮುದಾಯ ಹೋರಾಟ ನಡೆಸಿತು ಎಂಬ ಭಾವನೆಯನ್ನು ಭಾಷಣ ಮೂಡಿಸುತ್ತದೆ. ಗಾಂಧೀಜಿ ಅವರು ಇಂಥ ಭಾಷೆಯನ್ನು ಬಳಸಿದ್ದರೆ? ಎಂದು ಪ್ರಶ್ನಿಸಿತು.
Umar Khalid, Delhi High Court
Umar Khalid, Delhi High Court

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದ ಕುರಿತು ದೆಹಲಿ ಹೈಕೋರ್ಟ್‌ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿ ಮಾಡಿದೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರು ನೋಟಿಸ್‌ ಸ್ವೀಕರಿಸಿದರು.

ಖಾಲಿದ್‌ ಅವರಿಗೆ ಜಾಮೀನು ನಿರಾಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ಮೃದುಲ್‌ ಮತ್ತು ರಜನೀಷ್‌ ಭಟ್ನಾಗರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಅಮರಾವತಿಯಲ್ಲಿ ಆರೋಪಿ ಮಾಡಿರುವ ಭಾಷಣವು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿಯಾಗಿದೆ ಎಂದಿದೆ.

ಖಾಲಿದ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ತ್ರಿದೀಪ್‌ ಪೈಸ್‌ ಅವರು “ಗಲಭೆ ನಡೆದ ಸಂದರ್ಭದಲ್ಲಿ ಖಾಲಿದ್‌ ಅವರು ದೆಹಲಿಯಲ್ಲಿ ಇರಲಿಲ್ಲ. ಒಂದು ಭಾಷಣದ ತುಣುಕು ಇದ್ದು, ಟಿವಿ ಚಾನೆಲ್‌ಗಳಿಗೆ ಆ ಭಾಷಣ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಟಿವಿ ಚಾನೆಲ್‌ಗಳು ಆ ಭಾಷಣವನ್ನು ರಾಜಕಾರಣಿಯಿಂದ ಸ್ವೀಕರಿಸಿದ್ದಾಗಿ ಹೇಳಿವೆ… ವಿಶೇಷ ನ್ಯಾಯಾಲಯವು ಖಾಲಿದ್‌ ಭಾಷಣವು ಪ್ರಚೋದನಾಕಾರಿ ಎಂದೂ ಹೇಳಿಲ್ಲ” ಎಂದರು.

ಆಗ ಪೀಠವು “ಖಾಲಿದ್‌ ಭಾಷಣದ ಅಂಶಗಳು ಜನರನ್ನು ಕೆರಳಿಸುತ್ತವೆ ಎಂದೆನಿಸುವುದಿಲ್ಲವೇ? ನಿಮ್ಮ ಪೂರ್ವಜರು ಬ್ರಿಟಿಷರ ಗುಲಾಮರಾಗಿದ್ದರು ಎಂಬುದು ಆಕ್ಷೇಪಾರ್ಹವಲ್ಲವೇ? ಬ್ರಿಟಿಷರ ವಿರುದ್ಧ ಒಂದೇ ಒಂದು ಸಮುದಾಯ ಹೋರಾಟ ನಡೆಸಿತು ಎಂಬ ಭಾವನೆಯನ್ನು ಅದು ಮೂಡಿಸುತ್ತದೆ. ಗಾಂಧೀಜಿ ಅವರು ಎಂದಾದರೂ ಆ ರೀತಿಯ ಭಾಷೆ ಬಳಸಿದ್ದರೇ? ಭಗತ್‌ ಸಿಂಗ್‌ ಅಂಥ ಭಾಷೆ ಬಳಕೆ ಮಾಡಿದ್ದರೆ? ಗಾಂಧೀಜಿ ನಮಗೆ ಹೇಳಿಕೊಟ್ಟಿದ್ದು ಇದನ್ನೇ?” ಎಂದು ಪ್ರಶ್ನಿಸಿತು.

ಮೇಲಿನ ಭಾಷೆಯನ್ನು ವಾಕ್‌ ಸ್ವಾತಂತ್ರ್ಯದ ಭಾಗವನ್ನಾಗಿಸಬಹುದೇ ಮತ್ತು ಐಪಿಸಿ ಸೆಕ್ಷನ್‌ 153ಎ (ಧರ್ಮದ ಆಧಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವುದು) ಅನ್ವಯಿಸುತ್ತದೆಯೇ ಎಂದು ಪೀಠ ಪ್ರಶ್ನಿಸಿತು. “ಭಾಷಣದ ಈ ವಿಚಾರದ ಹಿನ್ನೆಲೆಯಲ್ಲಿ ಎಫ್‌ಐಆರ್‌ ಸೀಮಿತವಾಗಿರುವುದಕ್ಕೆ ನಮಗೆ ಆಶ್ಚರ್ಯವಾಗಿಲ್ಲ. ಮೇಲ್ನೋಟಕ್ಕೆ ಖಾಲಿದ್‌ ಅವರ ಭಾಷಣವನ್ನು ಒಪ್ಪಲಾಗದು. ಪ್ರಜಾಪ್ರಭುತ್ವ ಮತ್ತು ವಾಕ್‌ ಸ್ವಾತಂತ್ರ್ಯದ ಭಾಗವಾಗಿ ಇದನ್ನು ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿತು.

Also Read
ದೆಹಲಿ ಹಿಂಸಾಚಾರ ಪ್ರಕರಣ: ಅ.22ರವರೆಗೆ ಉಮರ್ ಖಾಲಿದ್ ರನ್ನು‌ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಆಗ ಪೈಸ್‌ ಅವರು “ಅದು ಆಕ್ಷೇಪಾರ್ಹವಾದ ಭಾಷಣ ಎನ್ನುವುದಾದರೆ ಸರಿ. ಆದರೆ, ಆ ಕಾರಣಕ್ಕಾಗಿ ನಾನು ಇಲ್ಲಿ ಎಡತಾಕಿಲ್ಲ. ಭಯೋತ್ಪಾದನೆ ಆರೋಪದ ವಿಚಾರಕ್ಕೆ ನಾನು ನಿಮ್ಮ ಮುಂದಿದ್ದೇನೆ” ಎಂದರು.

ಆಗ ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಅಮಿತ್‌ ಪ್ರಸಾದ್‌ ಅವರಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್‌ 27ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com