ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಆಕ್ಷೇಪಾರ್ಹವಾದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ 24 ತಾಸುಗಳ ಗಡುವು ವಿಧಿಸಿದೆ.
ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಪಂಕಜ್ ಮಿತ್ತಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ರೂಪಾ ಪ್ರತಿನಿಧಿಸಿದ್ದ ವಕೀಲರು ನ್ಯಾಯಾಲಯ ನಿನ್ನೆ ಸೂಚಿಸಿದಂತೆ ಮಧ್ಯಸ್ಥಿಕೆ ಒಪ್ಪಂ ಆಗಲಿಲ್ಲ ಎಂದರು.
ಆಗ ನ್ಯಾ. ಓಕ ಅವರು “ಐಎಎಸ್ ಅಧಿಕಾರಿ ಮತ್ತು ಐಪಿಎಸ್ ಅಧಿಕಾರಿಗಳು ಮಧ್ಯಸ್ಥಿಕೆ ನಿರಾಕರಿಸಿ ಈ ರೀತಿ ವಾಗ್ವಾದಕ್ಕೆ ಇಳಿದರೆ ಹೇಗೆ… ಇದು ಕೊನೆಯಾಗಬೇಕು. ಈ ರೀತಿಯಾದರೆ ಆಡಳಿತ ಹೇಗೆ ನಡೆಯಲಿದೆ? ಅರ್ಜಿಯನ್ನು ಮೆರಿಟ್ ಮೇಲೆ ನಿರ್ಧರಿಸುತ್ತೇವೆ. ಪ್ರತಿವಾದಿ ಆಕ್ಷೇಪಣೆ ಸಲ್ಲಿಸಬೇಕು” ಎಂದರು.
ಪಾರ್ಟಿ ಇನ್ ಪರ್ಸನ್ ರೂಪದಲ್ಲಿ ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿ ವಾದಿಸಿದ ರೋಹಿಣಿ ಸಿಂಧೂರಿ ಅವರು “ನಮ್ಮ ಕುಟುಂಬವನ್ನು ಆಕೆ ಎಳೆದು ತರುತ್ತಿದ್ದಾರೆ? ಹತ್ತು ವರ್ಷದ ನನ್ನ ಮಗ ನನ್ನನ್ನು ಪ್ರಶ್ನಿಸುತ್ತಿದ್ದಾನೆ. ನನ್ನ ಚಾರಿತ್ರ್ಯ ಹರಣ ಮಾಡಲಾಗಿದೆ” ಎಂದರು.
ಇದಕ್ಕೆ ಪೀಠವು “ಭಾವನಾತ್ಮಕ ವಾದದಿಂದ ನಾವು ಸಂತುಷ್ಟಗೊಳ್ಳುವುದಿಲ್ಲ. ಫೇಸ್‌ಬುಕ್‌ನಲ್ಲಿ (ರೂಪಾ) ಹಾಕಿರುವ ಪೋಸ್ಟ್‌ಗಳನ್ನು ತೆಗೆದು ಹಾಕಬೇಕು. ಅವುಗಳನ್ನು ಹಿಂಪಡೆಯಬೇಕು. ಮೊದಲು ಅವುಗಳನ್ನು ಅಳಿಸಿ ಹಾಕಿ. ಆನಂತರ ಕ್ಷಮೆ. ಆನಂತರ ಆಕ್ಷೇಪಣೆಯನ್ನು ಪರಿಶೀಲಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ತೆಗೆದು ಹಾಕಲು (ರೂಪಾಗೆ) 24 ತಾಸು ಗಡುವು ನೀಡುತ್ತಿದ್ದೇವೆ. ಆಕ್ಷೇಪಾರ್ಹಾವಾದ ಪೋಸ್ಟ್‌ಗಳು ಯಾವ ಸಾಮಾಜಿಕ ಜಾಲತಾಣದಲ್ಲಿವೆ ಎಂಬುದನ್ನು (ಸಿಂಧೂರಿ) ತಿಳಿಸಬೇಕು. ಸಿಆರ್‌ಪಿಸಿ ಸೆಕ್ಷನ್ 313 ಹಂತದಲ್ಲಿ ಪ್ರಕರಣದ ವಿಚಾರಣೆ ಇದೆ. ಎಲ್ಲದಕ್ಕೂ ಮಿತಿ ಇದೆ. ಯಾರಾದರೊಬ್ಬರು ಮೊದಲು ಹೆಜ್ಜೆ ಇರಿಸಬೇಕು. ಅರ್ಜಿ ವಜಾ ಮಾಡಲಾಗಿದೆ ಎಂದು ಸುಲಭವಾಗಿ ಹೇಳಿಬಿಡಬಹುದು. ಇಬ್ಬರು ಅಧಿಕಾರಿಗಳ ಹಿತದೃಷ್ಟಿಯಿಂದ ಇದನ್ನು ಮಾಡುತ್ತಿದ್ದೇವೆ. (ರೂಪಾ) ನಾಳೆ ವಿಶ್ವಾಸಾರ್ಹತೆ ಸಾಬೀತುಪಡಿಸಿ” ಎಂದಿತು.
ಆಗ ಸಿಂಧೂರಿ ಅವರು “ಈಚೆಗೆ ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದೆವು. ನನ್ನ ಹಿಂದೆ ಕುಳಿತಿದ್ದ ರೂಪಾ ಅವರು ನನ್ನನ್ನು ನಿಂದಿಸಲಾರಂಭಿಸಿದರು. ನನ್ನ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ನನ್ನ ಗೌರವ ಮತ್ತು ಘನತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರತಿಯೊಬ್ಬ ಪುರುಷ ಅಧಿಕಾರಿಯ ಜೊತೆಗೆ ನನಗೆ ಸಂಬಂಧ ಕಲ್ಪಿಸಿದ್ದಾರೆ” ಎಂದು ಅಳಲು ತೋಡಿಕೊಂಡರು. “ನಾನು ರಾಜ್ಯದಲ್ಲಿ ಹೇಗೆ ಕೆಲಸ ಮಾಡಲಿ” ಎಂದರು.
ಇದಕ್ಕೆ ಪೀಠವು “ಸ್ವಲ್ಪ ಸಮಾಧಾನದಿಂದಿರಿ. ನಿಮ್ಮನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನೀವು (ರೂಪಾ) ಆಕೆಯನ್ನು (ಸಿಂಧೂರಿ) ತನಿಖೆಗೆ ಒಳಪಡಿಸುತ್ತಿದ್ದೀರಾ?” ಎಂದಿತು. ಇದಕ್ಕೆ ರೂಪಾ 'ಇಲ್ಲ' ಎಂದರು.
ಆಗ ಪೀಠವು “ಹಲವು ಜನರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ನೀವು ಆರೋಪಗಳನ್ನು ಏಕೆ ಮಾಡಿದಿರಿ? ಒಬ್ಬರ ವಿರುದ್ದದ ಆರೋಪಗಳನ್ನು ಮತ್ತೊಬ್ಬರು ತನಿಖೆ ನಡೆಸುತ್ತಿರುವಾಗ ಐಪಿಎಸ್ ಅಧಿಕಾರಿಯಾದ ನೀವು ಅದರೆಡೆಗೆ ಏಕೆ ಗಮನಹರಿಸಿದ್ದೀರಿ? ಬೇರೆಯವರು ಅದನ್ನು ನೋಡಿಕೊಳ್ಳುತ್ತಾರೆ," ಎಂದಿತು. "ಈ ಅರ್ಜಿಯನ್ನು ನಾವೇಕೆ ಮಾನ್ಯ ಮಾಡಬೇಕು” ಎಂದು ಪ್ರಶ್ನಿಸಿತು.
ಇದಕ್ಕೆ ರೂಪಾ ಪರ ವಕೀಲರು “ಪುರುಷ ಅಧಿಕಾರಿಗಳಿಗೆ ಚಿತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸುವಂತೆ ಆಕೆಗೆ ಸೂಚಿಸಿ” ಎಂದರು.
ಆಗ ಪೀಠವು “ನಿಮ್ಮನ್ನು ಆಲಿಸಿ ನಾವು ನಿಮ್ಮ ಅರ್ಜಿಯನ್ನು ಮಾನ್ಯ ಮಾಡಬಹುದು ಎಂಬ ಭಾವನೆ ಹೊಂದಬೇಡಿ. ನಾವು ರಾಜ್ಯದ ಆಡಳಿತದ ವಿಚಾರ ನೋಡುತ್ತಿದ್ದೇವೆ. ಈ ನ್ಯಾಯಾಲಯದಲ್ಲಿ ಭಾವನಾತ್ಮಕ ವಿಚಾರಗಳಿಗೆ ಮಹತ್ವ ನೀಡುವುದಿಲ್ಲ ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು” ಎಂದು ಕಟುವಾಗಿ ಹೇಳಿತು. ಅಂತಿಮವಾಗಿ ಆಕ್ಷೇಪಾರ್ಹವಾದ ಪೋಸ್ಟ್‌ಗಳನ್ನು ನಾಳೆಯ ಒಳಗೆ ಅಳಿಸಿಹಾಕುವ ಭರವಸೆ ನೀಡುವಂತೆ ರೂಪಾಗೆ ನ್ಯಾಯಾಲಯ ಸೂಚಿಸಿ, ವಿಚಾರಣೆಯನ್ನು ನಾಳೆಗೆ (ಡಿ.15) ಮುಂದೂಡಿತು.