
ದೇಶದಲ್ಲಿನ ನ್ಯಾಯಾಧೀಶರಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಮತ್ತು ದೇಶದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಗುರುವಾರ ಹೇಳಿದ್ದಾರೆ.
ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರಗಳ ವ್ಯಾಖ್ಯಾನದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಕುರಿತು ಪ್ರತಿಕ್ರಿಯಿಸುತ್ತಾ ಧನ್‌ಕರ್ ಅವರು ನ್ಯಾಯಾಂಗವನ್ನು ಟೀಕಿಸಿದರು.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಮಸೂದೆಯ ಅಂಗೀಕಾರದ ಸಂಬಂಧ ಪಾಲಿಸಬೇಕಾದ ಕಾಲ ಮಿತಿಯೂ ಸೇರಿದಂತೆ ಇತರ ಅಂಶಗಳ ಕುರಿತಾಗಿ ತೀರ್ಪನ್ನು ನೀಡಿತ್ತು. ಈ ತೀರ್ಪು ಈಗ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ರಾಜ್ಯಸಭೆಯ ಆರನೇ ಪ್ರಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಮಾತನಾಡಿದ ಧನ್‌ಕರ್ ಅವರು, "ಇತ್ತೀಚಿನ ತೀರ್ಪೊಂದರಲ್ಲಿ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನು ನಡೆಯುತ್ತಿದೆ? ನಾವು ಅತ್ಯಂತ ಸೂಕ್ಷ್ಮವಾಗಿರಬೇಕು. ಯಾರಾದರೂ ಈ ಸಂಬಂಧ ನ್ಯಾಯಾಲಯದ ಪರಿಶೀಲನೆ ಕೋರುತ್ತಾರೆಯೇ, ಇಲ್ಲವೇ ಎನ್ನುವುದು ಇಲ್ಲಿನ ಪ್ರಶ್ನೆಯಲ್ಲ. ಈ ದಿನ ನೋಡಲೆಂದು ನಾವು ಪ್ರಜಾಪ್ರಭುತ್ವಕ್ಕಾಗಿ ಚೌಕಾಸಿ ಮಾಡಲಿಲ್ಲ. ರಾಷ್ಟ್ರಪತಿಗಳಿಗೆ (ಮಸೂದೆಗಳನ್ನು) ಕಾಲಮಿತಿಗೆ ಅನುಗುಣವಾಗಿ ನಿರ್ಧರಿಸಲು ನಿರ್ದೇಶನ ನೀಡಲಾಗಿದೆ, ಹಾಗೆ ಮಾಡದೆ ಹೋದಲ್ಲಿ ಅದು ಕಾನೂನಾಗುತ್ತದೆ ಎನ್ನಲಾಗಿದೆ. ಆ ಮೂಲಕ ನಮ್ಮಲ್ಲಿ ಈಗ ಶಾಸನ ಜಾರಿ ಮಾಡುವ ನ್ಯಾಯಾಧೀಶರು ಮೂಡಿದ್ದಾರೆ, ಅವರು ಕಾರ್ಯಾಂಗದ ಕೆಲಸಗಳನ್ನು ನಿರ್ವಹಿಸಲಿದ್ದಾರೆ! ಅವರು ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ! ಅಲ್ಲದೆ, ಈ ನೆಲದ ಕಾನೂನು ಅವರಿಗೆ ಅನ್ವಯಿಸದ ಕಾರಣ ಅವರಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ" ಎಂದು ಅವರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಮುಂದುವರೆದು ಅವರು, "ಸಂಸತ್ತು ನ್ಯಾಯಾಲಯದ ತೀರ್ಪನ್ನು ಬರೆಯಲು ಸಾಧ್ಯವಿಲ್ಲ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಸಂಸತ್ತು ಶಾಸನ ರಚಿಸಬಹುದಾಗಿದ್ದು ನ್ಯಾಯಾಂಗ ಮತ್ತು ಕಾರ್ಯಾಂಗ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಬಾಧ್ಯಸ್ಥರನ್ನಾಗಿಸಬಹುದು. ಹೇಗೆ ಶಾಸನ ಮಾಡುವುದು ಸಂಸತ್ತಿನ ಅಧಿಕಾರವೋ, ಅದೇ ರೀತಿ ತೀರ್ಪು ಬರೆಯುವುದು, ನ್ಯಾಯ ನಿರ್ಣಯ ಮಾಡುವುದು ನ್ಯಾಯಾಂಗದ ಏಕೈಕ ಹಕ್ಕು. ಆದರೆ ಈ ಪರಿಸ್ಥಿತಿಗೆ ಸವಾಲು ಒಡ್ಡಲಾಗುತ್ತಿಲ್ಲವೇ? ನಾನು ಏಕೆ ಹಾಗೆ ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ ಕಾರ್ಯಾಂಗದ ಆಡಳಿತವು ನ್ಯಾಯಾಂಗ ಆದೇಶಗಳಿಂದ ನಡೆಯುತ್ತಿದೆ. ಕಾರ್ಯಾಂಗ, ಸರ್ಕಾರವು ಜನರಿಂದ ಆಯ್ಕೆಗೊಂಡಿದ್ದು, ಸರ್ಕಾರವು ಸಂಸತ್ತಿಗೆ ಜವಾಬ್ದಾರಿಯಾಗಿರುತ್ತದೆ. ಸರ್ಕಾರವು ಚುನಾವಣೆಯಲ್ಲಿ ಜನರಿಗೆ ಜವಾಬ್ದಾರನಾಗಿರುತ್ತದೆ. ಹಾಗಾಗಿ, ಇಲ್ಲಿ ಹೊಣೆಗಾರಿಕೆಯ ತತ್ವವು ಕಾರ್ಯ ನಿರ್ವಹಿಸುತ್ತಿರುತ್ತದೆ. ಸಂಸತ್ತಿನಲ್ಲಿ ನೀವು ಪ್ರಶ್ನೆಗಳನ್ನು ಕೇಳಬಹುದು, ಕಠಿಣ ಪ್ರಶ್ನೆಗಳನ್ನು ಮುಂದಿಡಬಹುದು. ಏಕೆಂದರೆ ಆಡಳಿತವು ಕಾರ್ಯಾಂಗದಿಂದ ನಡೆಯುತ್ತಿರುತ್ತದೆ. ಆದರೆ, ಈ ಕಾರ್ಯಾಂಗದ ಆಡಳಿತವು ನ್ಯಾಯಾಂಗದಿಂದ ಆಗಿದ್ದರೆ ಆಗ ನೀವು ಪ್ರಶ್ನೆಗಳನ್ನು ಹೇಗೆ ಕೇಳುತ್ತೀರಿ? ಚುನಾವಣೆಯಲ್ಲಿ ನೀವು ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ?" ಎಂದು ಅವರು ತಮ್ಮ ಭಾಷಣದಲ್ಲಿ ನ್ಯಾಯಾಂಗದ ಕಾರ್ಯವೈಖರಿಗೆ ಅಸಮಾಧಾನ ಸೂಚಿಸಿದರು.
ಒಂದು ಅಂಗವು ಮತ್ತೊಂದು ಅಂಗದ ವ್ಯಾಪ್ತಿಯನ್ನು ಅತಿಕ್ರಮಿಸುವುದು ಸವಾಲನ್ನು ಒಡ್ಡಲಿದ್ದು, 'ಇದು ಉತ್ತಮ ಬೆಳವಣಿಗೆಯಲ್ಲ" ಎಂದರು.
142ನೇ ವಿಧಿಯು ಅಣ್ವಸ್ತ್ರ ಸಿಡಿತಲೆಯಂತೆ
ಸುಪ್ರೀಂ ಕೋರ್ಟ್‌ಗೆ ಸಂವಿಧಾನದ 142ನೇ ವಿಧಿಯು ವಿಶೇಷ ಅಧಿಕಾರಗಳನ್ನು ನೀಡುತ್ತದೆ. ಈ ಅಧಿಕಾರವು ನ್ಯಾಯಾಂಗಕ್ಕೆ, "ಪ್ರಜಾಪ್ರಭುತ್ವದ ವಿರುದ್ಧ 24X7 ಪ್ರಯೋಗಿಸಬಹುದಾದ ಅಣ್ವಸ್ತ್ರ ಸಿಡಿತಲೆಯಾಗಿ ಪರಿಣಮಿಸಿದೆ,"ಎಂದು ಅವರು ಹೇಳಿದರು.
ನ್ಯಾಯಮೂರ್ತಿಗಳಿಗೇಕೆ ಕ್ರಿಮಿನಲ್ ತನಿಖೆಯಿಂದ ವಿಶೇಷ ರಕ್ಷಣೆ?
ತಮ್ಮ ಭಾಷಣದ ವೇಳೆ ಉಪರಾಷ್ಟ್ರಪತಿ ಧನ್‌ಕರ್ ಅವರು ಇತ್ತೀಚೆಗೆ ನ್ಯಾ. ಯಶವಂತ್ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನೋಟುಗಳು ದೊರೆತಿದ್ದ ಬಗ್ಗೆಯೂ ಪ್ರಸ್ತಾಪಿಸಿದರು. ದೇಶದುದ್ದಗಲಕ್ಕೂ ವ್ಯಾಪಕ ಚರ್ಚೆಗೆ ಕಾರಣವಾದ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗದ ಕಾರಣ ಯಾವುದೇ ಕ್ರಿಮಿನಲ್ ತನಿಖೆ ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.
"ಈ ದೇಶದಲ್ಲಿ ಯಾರ ವಿರುದ್ಧ ಬೇಕಾದರೂ ಎಫ್ಐಆರ್ ದಾಖಲಾಗಬಹುದು, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ, ನಿಮ್ಮ ಮುಂದಿರುವ ನನ್ನನ್ನೂ ಸೇರಿದಂತೆ ಎಫ್‌ಐಆರ್ ದಾಖಲಿಸಬಹುದು. ಇದಕ್ಕಾಗಿ ಕಾನೂನಿನ ಮೊರೆ ಹೋದರೆ ಸಾಕು, ಯಾವುದೇ ಅನುಮತಿ ಬೇಕಿಲ್ಲ. ಆದರೆ, ಒಂದು ವೇಳೆ ಅದು ನ್ಯಾಯಾಧೀಶರ ವಿರುದ್ಧವಾದರೆ ಆಗ ಅದು ಬೇರೆಯದೇ ವರ್ಗವಾಗುತ್ತದೆ... ಅವರ ವಿರುದ್ಧ ನೇರವಾಗಿ ಎಫ್‌ಐಆರ್ ದಾಖಲಿಸಲಾಗದು. ಅದಕ್ಕೆ ನ್ಯಾಯಾಂಗದ ಸಂಬಂಧಪಟ್ಟವರಿಂದ ಅನುಮತಿ ಅಗತ್ಯ. ವಿಪರ್ಯಾಸವೆಂದರೆ, ಹಾಗೆಂದು ಸಂವಿಧಾನದಲ್ಲಿ ಎಲ್ಲಿಯೂ ಇಲ್ಲ. ಸಂವಿಧಾನವು ಘನತೆವೆತ್ತ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮಾತ್ರ ಈ ರಕ್ಷಣೆಯನ್ನು ನೀಡಿದೆ. ಹಾಗಾದರೆ, ಈ ವರ್ಗವು ಅದು ಹೇಗೆ ಇಂತಹ ರಕ್ಷಣೆಯನ್ನು ಪಡೆಯಿತು... ಇದರ ಕೆಟ್ಟ ಪರಿಣಾಮಗಳು ಇಂದು ಎಲ್ಲರ ಮನದಲ್ಲಿ ಮೂಡಿವೆ," ಎಂದು ಅವರು ಬೆರಳು ಮಾಡಿದರು.