ವಿಸಿ ದತ್ತಾಂಶ ಹ್ಯಾಕ್‌ ಮಾಡಿದ ಮಾತ್ರಕ್ಕೆ ತಂತ್ರಜ್ಞಾನ ನಿರ್ಬಂಧಿಸಲಾಗದು: ಸಿಜೆಐ ಚಂದ್ರಚೂಡ್‌

ಕರ್ನಾಟಕ ಹೈಕೋರ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಇ-ಇನಿಶಿಯೇಟಿವ್‌ ಕಾರ್ಯಕ್ರಮ ಸಿಜೆಐ ಚಂದ್ರಚೂಡ್‌ ಅವರು ಮಾತನಾಡಿದರು.
CJI Chandrachud
CJI Chandrachud

ಅಶ್ಲೀಲ ವಿಡಿಯೊ ಅಪ್‌ಲೋಡ್‌ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್‌ನ ವಿಡಿಯೊ ಕಾನ್ಫರೆನ್ಸ್‌ ಅನ್ನು ಅನಾಮಧೇಯರು ಹ್ಯಾಕ್‌ ಮಾಡಿದ್ದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು “ನಾವು ಮುಂದೆ ಸಾಗಬೇಕಿದೆ. ಇಂತಹ ಘಟನೆಗಳಿಂದಾಗಿ ತಂತ್ರಜ್ಞಾನವನ್ನು ನಿಲ್ಲಿಸಲಾಗದು” ಎಂದರು.

ಕರ್ನಾಟಕ ಹೈಕೋರ್ಟ್‌ನ ಇ-ಇನಿಶಿಯೇಟಿವ್‌ ಉಪಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ದೇಶದ ಕೆಲವು ಹೈಕೋರ್ಟ್‌ಗಳು ವಿಡಿಯೊ ಕಾನ್ಫರೆನ್ಸ್‌ ನಿಯಮಗಳನ್ನು ಅಳವಡಿಸಿಕೊಂಡಿವೆ. ಕೆಲವು ಹೈಕೋರ್ಟ್‌ಗಳು ಷರತ್ತುಗಳನ್ನು ವಿಧಿಸಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ವೇಳೆ ಅಶ್ಲೀಲ ವಿಡಿಯೊ ಹಾಕುವ ಮೂಲಕ ದತ್ತಾಂಶ ಹ್ಯಾಕ್‌ ಮಾಡಲಾಗಿತ್ತು ಎಂಬುದು ತಿಳಿದಿದೆ. ಇದರಿಂದ ನಾವು ವಿಚಲಿತರಾಗಿದ್ದೆವು. ನಾವು ಮುಂದೆ ಸಾಗಬೇಕಿದೆ. ಇಂತಹ ಘಟನೆಯಾದ ಮಾತ್ರಕ್ಕೆ ನಾವು ತಂತ್ರಜ್ಞಾನ ನಿರ್ಬಂಧಿಸಲಾಗದು. ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಏನಾದರೂ ಸಮಸ್ಯೆಯಾದರೆ ಅದನ್ನು ಪರಿಹರಿಸಬೇಕು” ಎಂದರು.

“ನ್ಯಾಯಾಲಯದ ವಿಡಿಯೊ ಕಾನ್ಫರೆನ್ಸ್‌ನ ವಿಡಿಯೊ ಕ್ಲಿಪ್‌ಗಳನ್ನು ಆನ್‌ಲೈನ್‌ನಲ್ಲಿ ನೀವು ನೋಡಿರುತ್ತೀರಿ. ಇದನ್ನು ನಾವು ಒಪ್ಪಿಕೊಳ್ಳಬೇಕಿದೆ. ಪ್ರತಿ ತಕ್ಷಣವೂ ನಮ್ಮ ಮೇಲೆ ನಿಗಾ ಇಟ್ಟಿರಲಾಗುತ್ತದೆ. ನಮ್ಮನ್ನು ವಿಡಿಯೊ, ಆಡಿಯೊ ರೆಕಾರ್ಡ್‌ ಮಾಡಲಾಗುತ್ತಿರುತ್ತದೆ. ಎನ್‌ಐಸಿ ಕ್ಲೌಡ್‌ ಸಿಸ್ಟಂಗೆ ವರ್ಗಾವಣೆಯಾಗುವಾಗ ಅದು ತಪ್ಪಲಿದೆ” ಎಂದರು.

ಮುಂದುವರಿದು, “ಪ್ರಸಕ್ತ ವರ್ಷದಲ್ಲಿ ಕರ್ನಾಟಕದ ನ್ಯಾಯಾಂಗವು 1,69,46,085 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ನ್ಯಾಯಮೂರ್ತಿಗಳು ತಂತ್ರಜ್ಞಾನವನ್ನು ಹೆಚ್ಚು ತಿಳಿದುಕೊಂಡರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು. ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಬಾಕಿ ಪ್ರಕರಣಗಳು ಇವೆ ಎಂಬುದರ ಮೇಲೆ ನಿಗಾ ಇಡಬಹುದಾಗಿದೆ” ಎಂದರು.

“ಕರ್ನಾಟಕದಲ್ಲಿ 19.25 ಲಕ್ಷ ಬಾಕಿ ಪ್ರಕರಣಗಳಿದ್ದು, ಆರೋಪಿಗಳು ನಾಪತ್ತೆಯಾಗಿರುವುದರಿಂದ 1,85,390 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ” ಎಂದರು.

“ಕಾಗದಿಂದ ವಿದ್ಯುನ್ಮಾನ ವ್ಯವಸ್ಥೆಗೆ ವರ್ಗಾವಣೆಯಾಗುವುದು ಮಾತ್ರವೇ ಅಲ್ಲ, ಭಾರತದ ನ್ಯಾಯಾಂಗವನ್ನು ಡಿಜಿಟಲ್‌ ಯುಗಕ್ಕೆ ಕೊಂಡೊಯ್ಯುವ ಗುರಿಯನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಹಾಯದಿಂದ ಸಾಧಿಸಬೇಕು” ಎಂದರು.

“ಕೆಲವು ನ್ಯಾಯಮೂರ್ತಿಗಳಿಗೆ ತಂತ್ರಜ್ಞಾನ ಗೊತ್ತಿದೆ. ಉಳಿದವರಿಗೆ ತಂತ್ರಜ್ಞಾನದ ಬಗ್ಗೆ ಅಷ್ಟು ಗೊತ್ತಿಲ್ಲ ಎಂಬುದು ಇರಬಾರದು. ನಮ್ಮ ಪ್ರಕ್ರಿಯೆಯ ಅವಿಭಾಜ್ಯ ಅಂಗ ತಂತ್ರಜ್ಞಾನ. ಇದನ್ನು ನಾವು ಅಳವಡಿಸಿಕೊಳ್ಳಬೇಕು” ಎಂದರು.

“ವಿದೇಶಗಳಿಗೆ ಹೋಲಿಕೆ ಮಾಡಿದರೆ ಜನರು ನ್ಯಾಯಾಲಯದ ಬಾಗಿಲು ತಟ್ಟುವ ವಿಚಾರದಲ್ಲಿ ಭಾರತವು ವಿಭಿನ್ನ ಸವಾಲು ಎದುರಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಜನರನ್ನು ನ್ಯಾಯಾಲಯದ ಸಮೀಪಕ್ಕೆ ಕರೆತಂದರೂ ಭಾಷೆಯ ಸಮಸ್ಯೆಯಿಂದ ಅವರಿಗೆ ಕಲಾಪ ಅರ್ಥವಾಗದಿರುವುದು ಬಹುದೊಡ್ಡ ಅಡ್ಡಿಯಾಗಿದೆ. ಸುಪ್ರೀಂ ಕೋರ್ಟ್‌ನ 30,000 ತೀರ್ಪುಗಳು ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗುತ್ತಿವೆ” ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ಹೈಕೋರ್ಟ್‌ನ ವೆಬ್‌ಸೈಟ್‌ ಅನ್ನು ಹೊಸ ಫೀಚರ್‌ಗಳೊಂದಿಗೆ ರೂಪಿಸಲಾಗಿದೆ. ಇ-ಇನಿಶಿಯೇಟಿವ್‌ ಭಾಗವಾಗಿ ವಕೀಲರಿಗೆ ಅಂಡ್ರಾಯ್ಡ್‌ ಮೊಬೈಲ್‌ ಅಪ್ಲಿಕೇಶನ್‌ ರೂಪಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಡ್ಯಾಷ್‌ಬೋರ್ಡ್‌ ವರ್ಗಾವಣೆ, ಐಎಲ್‌ಆರ್‌ ಆನ್‌ಲೈನ್‌ ಮೂಲಕ ಇ-ಐಎಲ್‌ಆರ್‌ , ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಆರು ಜಿಲ್ಲೆ ನ್ಯಾಯಾಲಯಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅರವಿಂದ್‌ ಕುಮಾರ್‌, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com