ಏನಾಗುತ್ತಿದೆ ಎಂಬುದು ತಿಳಿದಿದೆ ಎಂದ ಸುಪ್ರೀಂ: ಯುಜಿಸಿ ಸಮತೆಯ ನಿಯಮಾವಳಿ ಪ್ರಶ್ನಿಸಿದ್ದ ಅರ್ಜಿ ಆಲಿಸಲು ತೀರ್ಮಾನ

ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮತೆಯ ಉತ್ತೇಜನ) ನಿಯಮಾವಳಿ- 2026 ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
UGC with Supreme Court
UGC with Supreme Court
Published on

ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಯಲ್ಲಿ ದೂರು ನೀಡಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್‌ ಬುಧವಾರ ಸಮ್ಮತಿ ಸೂಚಿಸಿದೆ

ನಿಯಮಾವಳಿಗಳು ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತರತಮ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ. ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು ಅರ್ಜಿ ಆಕ್ಷೇಪಿಸಿತ್ತು.

Also Read
ಯುಜಿಸಿಯ ಸಮತೆಯ ನಿಯಮಾವಳಿಗಳು ಸಾಮಾನ್ಯ ವರ್ಗದ ವಿರುದ್ಧ ಜಾತಿ ತರತಮಕ್ಕೆ ಕಾರಣವಾಗಬಹುದು ಎಂದು ಸುಪ್ರೀಂನಲ್ಲಿ ಅರ್ಜಿ

ಈ ಹಿನ್ನೆಲೆಯಲ್ಲಿ ಈಗ ಇರುವಂತೆಯೇ ನಿಯಮ ಜಾರಿಗೆ ಬರದಂತೆ ತಡೆ ನೀಡಬೇಕು. ಜಾತಿ ಆಧಾರದಲ್ಲಿ ದೂರು ಪರಿಹಾರ ವ್ಯವಸ್ಥೆಯನ್ನು ಲಭ್ಯವಿಲ್ಲದಂತೆ ಮಾಡುವುದು "ಅನುಮತಿಸಲಾಗದ ಸರ್ಕಾರಿ ತಾರತಮ್ಯ" ಎಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.

ಈ ನಿಯಮಾವಳಿಗಳ ವಿರುದ್ಧ ಸಾರ್ವಜನಿಕವಾಗಿಯೂ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರಬಲ ಜಾತಿಗಳಿಗೆ ಸೇರಿದವರು, ಇವು ಏಕಪಕ್ಷೀಯವಾಗಿವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ವಿರುದ್ಧ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ನಿಯಮಾವಳಿಗಳನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮುಂದೆ ಅನೇಕ ಅರ್ಜಿಗಳು ಮತ್ತು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ.

ಪ್ರಸಕ್ತ ಅರ್ಜಿಯನ್ನು ತುರ್ತಾಗಿ ಆಲಿಸುವಂತೆ ಅರ್ಜಿದಾರರು ಪ್ರಸ್ತಾಪಿಸಿದರು. ಆಗ ಪೀಠವು, "ಏನಾಗುತ್ತಿದೆ ಎಂಬುದು ತಿಳಿದಿದೆ. ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಿ. ಅರ್ಜಿ ಪಟ್ಟಿ ಮಾಡುತ್ತೇವೆ" ಎಂದು ಹೇಳಿತು.

ಜನವರಿ 13ರಿಂದ ಜಾರಿಗೆ ಬಂದಿರುವ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮತೆಯ ಉತ್ತೇಜನ) ನಿಯಮಾವಳಿ- 2026 ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.

Also Read
'ವಿಧಿ 226ರ ಅಡಿ ಇ ಡಿ ರಿಟ್ ಅರ್ಜಿ ಸಲ್ಲಿಸಬಹುದೇ?' ಕೇರಳ, ತಮಿಳುನಾಡು ತಕರಾರಿನ ಕುರಿತು ವಿಚಾರಣೆ ನಡೆಸಲಿದೆ ಸುಪ್ರೀಂ

ನಿಯಮಾವಳಿಯ ಉದ್ದೇಶ ಈ ರೀತಿ ಇದೆ: “ಧರ್ಮ, ಜಾತಿ, ಲಿಂಗ, ಜನ್ಮಸ್ಥಳ, ಅಂಗವೈಕಲ್ಯತೆ ಅಥವಾ ಇವುಗಳ ಆಧಾರದ ಮೇಲೆ ನಡೆಯುವ ಭೇದಭಾವವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಅಂಗವೈಕಲ್ಯ ಹೊಂದಿರುವವರು ಅಥವಾ ಇವರಲ್ಲಿ ಯಾರ ಮೇಲಾದರೂ ನಡೆಯುವ ಭೇದಭಾವವನ್ನು ತೊಡೆದುಹಾಕಿ, ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ಹಿತಾಸಕ್ತಿದಾರರ ನಡುವೆ ಸಂಪೂರ್ಣ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು.”

ನಿಯಮಾವಳಿಗಳ ಪ್ರಕಾರ, ಹಿಂದುಳಿದ ವರ್ಗಗಳಿಗಾಗಿ ರೂಪಿಸಲಾದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳು ಸಮಾನ ಅವಕಾಶ ಕೇಂದ್ರಗಳು ಹಾಗೂ ಸಮಾನತಾ ಸಮಿತಿಗಳನ್ನು ಸ್ಥಾಪಿಸಬೇಕು ಮತ್ತು ಭೇದಭಾವ ಸಂಬಂಧಿತ ದೂರುಗಳನ್ನು ಪರಿಶೀಲಿಸಬೇಕು ಎನ್ನಲಾಗುತ್ತದೆ.

Kannada Bar & Bench
kannada.barandbench.com