ವಕೀಲರು ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕರಾಗಿರಬೇಕು ಮತ್ತು ಮಾನವೀಯತೆಗಾಗಿ ಸೇವೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ತಿಳಿಸಿದರು.
ಇತ್ತೀಚೆಗೆ ನ್ಯಾ. ಖಾನ್ವಿಲ್ಕರ್ ಸೇವೆಯಿಂದ ನಿವೃತ್ತರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ರಾಷ್ಟ್ರೀಯ ಕಾನೂನು ವಿವಿಗಳ ಪ್ರತಿಷ್ಠಾನದ ಹಳೆ ವಿದ್ಯಾರ್ಥಿಗಳ ಒಕ್ಕೂಟ (ಸಿಎಎನ್) ನವದೆಹಲಿಯ ಸುಬ್ರೊತೊ ಪಾರ್ಕ್‌ನಲ್ಲಿರುವ ಏರ್ ಫೋರ್ಸ್ ಆಡಿಟೋರಿಯಂನಲ್ಲಿ ಶನಿವಾರ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾನೂನು ಶಿಕ್ಷಣವು ಸಕಾರಾತ್ಮಕ ಸಾಮಾಜಿಕ ಬದಲಾವಣೆಯ ಸಾಧನವಾಗಿದೆ ಮತ್ತು ವಿಫುಲ ಅವಕಾಶಗಳನ್ನು ಒದಗಿಸುತ್ತದೆ ಎಂದರು.
“ವೃತ್ತಿ ಜೀವನದಲ್ಲಿ ನಾವು ಪ್ರಾಮಾಣಿಕ, ಗೌರವಾನ್ವಿತ, ಕಷ್ಟಪಟ್ಟು ದುಡಿಯುವ, ಮಾನವೀಯತೆಗಾಗಿ ಸೇವೆ ಸಲ್ಲಿಸುವ ನಾಗರಿಕರಾಗಬೇಕು. ಮಾನವೀಯತೆ, ಸಹಾನುಭೂತಿ ಮಾತ್ರವಲ್ಲದೆ ಕಠಿಣ ಸಂದರ್ಭಗಳು ಎದುರಾದಾಗ ಅದನ್ನು ಎದುರಿಸಲು ಸಮರ್ಥರಾಗಿರಬೇಕು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ವಕೀಲ ವೃತ್ತಿಯಲ್ಲಿನ ನಮ್ಮ ಯಾನ ತೀರ್ಥಯಾತ್ರೆಯ ರೀತಿಯದ್ದು ಎಂಬುದು ನನಗೆ ಅರ್ಥವಾಗಿದೆ ಎಂದು ಅವರು ಹೇಳಿದರು.
ಕಾನೂನು ಅಧ್ಯಯನ ದುಸ್ಸಾಹಸದಿಂದ ಕೂಡಿದ್ದರೂ ವಕೀಲಿ ವೃತ್ತಿ ಪ್ರತಿಷ್ಠಿತ ಎಂದು ಮನ್ನಣೆ ಪಡೆದಿದ್ದು ಹಲವು ಮಾರ್ಗೋಪಯಗಳನ್ನು ತೆರೆದಿಡುತ್ತದೆ. ವಕೀಲಿಕೆ, ನ್ಯಾಯಾಂಗ ಸೇವೆಯ ಸದಸ್ಯರಾಗುವುದರಿಂದ ಹಿಡಿದು ಕಾನೂನು ವಿದ್ವಾಂಸರಾಗುವವರೆಗೆ ಅವಕಾಶಗಳು ಅನಂತವಾಗಿರುತ್ತವೆ ಎಂದು ಅವರು ಹೇಳಿದರು.
ಭಾರತದಲ್ಲಿ ಹುಟ್ಟಿರುವುದು ನನ್ನ ಅದೃಷ್ಟ ಎಂದು ಭಾವಿಸುವೆ. ನಮ್ಮ ಸಮಾಜದ ವೈವಿಧ್ಯತೆಯ ಗುಣಗಳನ್ನು ಗುರುತಿಸಿ ಅದನ್ನು ಆಚರಿಸುವ ಅಗತ್ಯವಿದೆ. ಚಿಂತನೆ, ಅಭಿವ್ಯಕಿ, ಆರಾಧನೆಯ ಸ್ವರೂಪ, ಭಾಷೆ, ಪ್ರದೇಶ, ಜನಾಂಗೀಯತೆ ಹಾಗೂ ಅವಕಾಶಗಳಲ್ಲಿರುವ ವೈವಿಧ್ಯಮಯತೆ ನಮ್ಮ ದೇಶವನ್ನು ನಾಗರಿಕತೆಗಳ ಸಮ್ಮಿಲನದ ಕುಂಡವಾಗಿದೆ. ನಾವು ವೈವಿಧ್ಯತೆಯನ್ನು ಆಚರಿಸಲು ಕಿಯಬೇಕು. ಆಗ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ಕೊಡುಗೆ ನೀಡಬಹುದು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಓಕಾ ಹಾಗೂ ವಿಕ್ರಮ್ ನಾಥ್ ಮತ್ತಿತರರು ಉಪಸ್ಥಿತರಿದ್ದರು.