ಎಲ್ಲಾ ಪ್ರಕರಣಗಳಿಗೂ ತಂತಾನೇ ಸೆರೆವಾಸ ಅನ್ವಯಿಸುವಂತಿಲ್ಲ ಎಂದು ನ್ಯಾಯಾಧೀಶರಿಗೆ ತರಬೇತಿ ನೀಡಬೇಕಿದೆ: ನ್ಯಾ. ಗುಪ್ತಾ

“ಕ್ರಿಮಿನಲ್ ಕಾನೂನಿನಲ್ಲಿ ಜಾಮೀನನ್ನೇ ಏಕೆ ಆತ್ಯಂತಿಕವಾಗಿ ಪರಿಗಣಿಸಲಾಗಿದೆ? ಪ್ರತಿಯೊಬ್ಬರೂ ಜಾಮೀನು ಪಡೆಯಲು ಅರ್ಹರು ಎಂದು ನಾನು ಹೇಳುತ್ತೇನೆ” ಎಂಬುದು ಹಿರಿಯ ವಕೀಲೆ ರೆಬೆಕಾ ಜಾನ್ ಅವರ ಅಭಿಪ್ರಾಯವಾಗಿತ್ತು.
Justice Gupta, Sr. Advocate Rebecca John
Justice Gupta, Sr. Advocate Rebecca John
Published on

ಎಲ್ಲಾ ಪ್ರಕರಣಗಳಲ್ಲೂ ಸೆರೆವಾಸದ ಶಿಕ್ಷೆಯನ್ನು ತಾನೇ ತಾನಾಗಿ ವಿಧಿಸುವಂತಿಲ್ಲ. ಅವುಗಳನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತಾ ತಿಳಿಸಿದರು.

“ಅಭಿಪ್ರಾಯ ಬೇಧ ನಮ್ಮ ಹಕ್ಕು” ವಿಷಯದ ಕುರಿತು ಹೈಕೋರ್ಟ್ ವಕೀಲರ ವೇದಿಕೆ ಆಯೋಜಿಸಿದ್ದ ಚರ್ಚೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು “ಈ ವಿಚಾರವಾಗಿ ನಾವು ನಮ್ಮ ನ್ಯಾಯಾಧೀಶರುಗಳಿಗೆ ತರಬೇತಿ ನೀಡಬೇಕಿದೆ” ಎಂದರು.

ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕರ ವಿಚಾರಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಈ ಕಾನೂನನ್ನು (ದೇಶದ್ರೋಹ) ಆಗಲೇ ತೆಗೆದುಹಾಕಬೇಕಿತ್ತು. ಆದರೆ ಇನ್ನೂ ಅದು ಅಸ್ತಿತ್ವದಲ್ಲಿದೆ.

ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತಾ

ಅಭಿಪ್ರಾಯ ಬೇಧ ಹತ್ತಿಕ್ಕಲು ದೇಶದ್ರೋಹದ ಪ್ರಕರಣ ದಾಖಲಿಸಿದಾಗ ಅವುಗಳನ್ನು ಸುಪ್ರೀಂಕೋರ್ಟ್‌ ಪರಿಗಣನೆಗೆ ತೆಗೆದುಕೊಳ್ಳಬೇಕೆ ಎಂದು ಕೇಳಲಾದ ಪ್ರಶ್ನೆಗೆ “ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕರ ವಿಚಾರಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಈ ಕಾನೂನನ್ನು ಆಗಲೇ ತೆಗೆದುಹಾಕಬೇಕಿತ್ತು. ಆದರೆ ಇನ್ನೂ ಅದು ಅಸ್ತಿತ್ವದಲ್ಲಿದೆ” ಎಂದು ಹೇಳಿದರು.

ಅಲ್ಲದೆ “ದೇಶದ್ರೋಹದ ವ್ಯಾಖ್ಯಾನ ತುಂಬಾ ವಿಶಾಲವಾದುದಾಗಿದ್ದು ಯಾವುದನ್ನು ಬೇಕಾದರೂ ದೇಶದ್ರೋಹಿ ಕೃತ್ಯ ಎಂದು ಕರೆಯಬಹುದು” ಎಂಬುದಾಗಿ ಹೇಳಿದ ಅವರು ಅಭಿಪ್ರಾಯ ಬೇಧ ಎಂಬುದು ಪ್ರಜಾಪ್ರಭುತ್ವದ ಹೆಗ್ಗುರುತಾಗಿದ್ದು “ಒಂದು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅದು ಟೀಕೆಗಳಿಂದ ರಕ್ಷಣೆ ಪಡೆಯುವುದಿಲ್ಲ” ಎಂದು ತಿಳಿಸಿದರು.

"ಕಳೆದ 9-10 ವರ್ಷಗಳಲ್ಲಿ, ನಾವು ನಮ್ಮ ಹಾಸ್ಯಪ್ರಜ್ಞೆ ಕಳೆದುಕೊಂಡಿದ್ದೇವೆ. ನಾನು ನನ್ನ ಹತ್ತಿರದವರನ್ನು ಕೂಡ ತಮಾಷೆ ಮಾಡಲು ಹೋಗುವುದಿಲ್ಲ. ಏಕೆಂದರೆ ಅದನ್ನೇ ತಪ್ಪಾಗಿ ತಿಳಿಯುವ ಸಂಭವವಿದೆ. ನಾವು ಖಂಡ ಖಂಡವಾಗಿ ಛಿದ್ರವಾಗುತ್ತಿದ್ದೇವೆ. ನಾವೆಲ್ಲಾ ಅಖಂಡವಾಗಿ ಉಳಿಯಬೇಕಿದೆ" ಎಂದು ಹೇಳಿದರು.

ಜಾಮೀನಿನ ಬದಲು ಜೈಲು ಆಯ್ಕೆಯ ಹಕ್ಕನ್ನು ವಿಚಾರಣೆ ನಡೆಸುವ ಸಂಸ್ಥೆಗಳು ಪಡೆದಂತಿದೆ.

ರೆಬೆಕಾ ಜಾನ್‌, ಹಿರಿಯ ವಕೀಲೆ

ಇದೇ ವೇಳೆ ಮಾತನಾಡಿದ ಹಿರಿಯ ವಕೀಲೆ ರೆಬೆಕಾ ಜಾನ್‌ ಅವರು ಅನೇಕ ಪ್ರಕರಣಗಳಲ್ಲಿ “ಜಾಮೀನು ನೀಡಬಹುದಾದ ಆರೋಪಗಳಿದ್ದರೂ ವ್ಯಕ್ತಿಗಳ ವಿರುದ್ಧ ಬಂಧನ ಆದೇಶ ಹೊರಡಿಸಲಾಗಿದೆ” ಎಂದು ವಿವರಿಸಿದರು. “…ಇಂತಹ ಪ್ರಕರಣಗಳು ದೆಹಲಿಯಲ್ಲಿ ಹೆಚ್ಚಾಗಿವೆ… ಜಾಮೀನಿನ ಬದಲು ಜೈಲು ಆಯ್ಕೆಯ ಹಕ್ಕನ್ನು ವಿಚಾರಣೆ ನಡೆಸುವ ಸಂಸ್ಥೆಗಳು ಪಡೆದಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಎಲ್ಲರಿಗೂ ಜಾಮೀನು ಪಡೆಯುವ ಹಕ್ಕು ಇದೆ. ಸರ್ಕಾರದ ವಿರುದ್ಧ ಅಪಸ್ವರ ಎತ್ತಿದವರನ್ನು ಯುಎಪಿಎ ರೀತಿಯ ವಿಶೇಷ ಕಾಯಿದೆ ಅಥವಾ ಇನ್ನಿತರ ರಾಷ್ಟ್ರೀಯ ಭದ್ರತಾ ಕಾಯಿದೆಗಳಡಿ ಬಂಧಿಸಲಾಗುತ್ತಿದೆ…. ತಮ್ಮ ಟ್ವೀಟ್‌ಗಳನ್ನು ಅಥವಾ ಸುದ್ದಿಗಳನ್ನು ಪ್ರಕಟಿಸುವ ಮುನ್ನ ನನಗೆ ಕಳುಹಿಸುವ ಹಿರಿಯ ಪತ್ರಕರ್ತರು ಇದ್ದಾರೆ. ಎಂತಹ ಆಡಳಿತ ಇದು?” ಎಂದು ಪ್ರಶ್ನಿಸಿದರು.

ದೇಶದ್ರೋಹ ಕಾನೂನು ಕುರಿತು ಮಾತನಾಡಿದ ನ್ಯಾಯವಾದಿ ಚಿತ್ರಾಂಶುಲ್‌ ಸಿನ್ಹಾ ಅವರು ʼಕೇದಾರನಾಥ್‌ ತೀರ್ಪನ್ನುʼ ಕೂಡ ಪೊಲೀಸರು, ಸ್ಥಳೀಯ ಸಂಸ್ಥೆಗಳು, ಅಷ್ಟೇ ಅಲ್ಲದೆ ನ್ಯಾಯಾಲಯಗಳು ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿಪ್ರಾಯ ಬೇಧ ಎಂಬುದು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಒಂದು ಕರ್ತವ್ಯ.

ನ್ಯಾಯವಾದಿ ಚಿತ್ರಾಂಶುಲ್ ಸಿನ್ಹಾ

ಕೇವಲ ಘೋಷಣೆ ಕೂಗುವುದರಿಂದ ಅದು ದೇಶದ್ರೋಹವಾಗದು ಎಂದು ಬಲವಂತ್‌ ಸಿಂಗ್‌ ಪ್ರಕರಣದಲ್ಲಿ ತೀರ್ಪು ನೀಡಲಾಗಿದೆ. ಆದರೆ ಕ್ರಿಕೆಟ್‌ ನೋಡುತ್ತ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಉತ್ತರಪ್ರದೇಶದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದರು. ದೇಶದ್ರೋಹದಡಿ ಪ್ರಕರಣ ದಾಖಲಿಸುವುದನ್ನು ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ದಿಶಾ ರವಿ ಬಂಧನದ ವೈಖರಿಯನ್ನೂ ವಿಶ್ಲೇಷಿಸಲಾಯಿತು. ಶಾರ್ದುಲ್ ಅಮರ್‌ಚಂದ್ ಮಂಗಳದಾಸ್‌ ಸಂಸ್ಥೆಯ ಹಿರಿಯ ಪಾಲುದಾರೆ ರಿತು ಭಲ್ಲಾ, ವಕೀಲರಾದ ಮನಾಲಿ ಸಿಂಘಾಲ್, ಅರುಂಧತಿ ಕಟ್ಜು ಮತ್ತು ಸ್ವಾತಿ ಸಿಂಗ್ ಮಲಿಕ್ ಚರ್ಚೆಯಲ್ಲಿ ಪಾಲ್ಗೊಂಡರು.

ಚರ್ಚೆ ಹಾಸ್ಯಮಯವಾಗಿ ಅಂತ್ಯಗೊಂಡಿತು. ನ್ಯಾಯವಾದಿ ಮನಾಲಿ ಅವರು ಚಿತ್ರಾಂಶುಲ್‌ ಸಿನ್ಹಾ ಅವರಿಗೆ “ಈ ಚರ್ಚೆಯ ನಂತರ ನೀವು ಜೈಲಿಗೆ ಹೋದರೆ ನಿಮಗೆ ಉತ್ತಮ ಕಂಪೆನಿ ಸಿಗಲಿದೆ. ನಾವು ನಿಮ್ಮೊಂದಿಗೆ ಇರುತ್ತೇವೆ” ಎಂದು ಚಟಾಕಿ ಹಾರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ ʼರೆಬೆಕಾ ಅವರು ನಮ್ಮೆಲ್ಲರನ್ನೂ ಪ್ರತಿನಿಧಿಸಲಿದ್ದಾರೆ” ಎಂದು ನಗೆಯ ಹೊನಲು ಹರಿಸಿದರು.

Kannada Bar & Bench
kannada.barandbench.com