ಖಾಲಿದ್ ಜಾಮೀನು ಅರ್ಜಿ ಕುರಿತು ಜು. 24ರಂದು ನಿರ್ಧರಿಸಲಿರುವ ಸುಪ್ರೀಂ; ತಾಹಿರ್‌ಗೆ ದೆಹಲಿ ಹೈಕೋರ್ಟ್ ಜಾಮೀನು

ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದು ಅಂದಿನಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.
Umar Khalid and Supreme Court
Umar Khalid and Supreme Court
Published on

ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಹಾರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜುಲೈ 24ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ [ಉಮರ್ ಖಾಲಿದ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಸೋಮವಾರದಂದು ಸಾಮಾನ್ಯವಾಗಿ ನ್ಯಾಯಾಲಯಗಳಿಗೆ ಅತಿಯಾದ ಕೆಲಸದ ಒತ್ತಡವಿರುವುದರಿಂದ ಆ ದಿನದ ಬದಲಿಗೆ ಬೇರೆ ದಿನ ಪ್ರಕರಣದ ವಿಚಾರಣೆ ನಡೆಸಬೇಕೆಂದು ದೆಹಲಿ ಪೊಲೀಸ್‌ ಪರ ವಕೀಲರು ಕೋರಿದರು.

ಆಗ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ʼಆ ದಿನ ಒತ್ತಡದಿಂದ ಕೂಡಿರುತ್ತದೆಯೇ ಇಲ್ಲವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ… ಪ್ರಕರಣ ಇತ್ಯರ್ಥಪಡಿಸಲು 1 ಅಥವಾ 2 ನಿಮಿಷ ಹಿಡಿಯುತ್ತದೆʼ ಎಂದರು.

Also Read
ಶಾರ್ಜೀಲ್‌, ಉಮರ್‌ ಖಾಲಿದ್‌ ಜಾಮೀನು ಮನವಿಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಲಿರುವ ದೆಹಲಿ ಹೈಕೋರ್ಟ್‌ [ಚುಟುಕು]

ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಪೊಲೀಸರು ಸಮಯಾವಕಾಶ ಕೋರಿದಾಗ, ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ಆ ವ್ಯಕ್ತಿ ಈಗ ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ ... ಈಗ ಜಾಮೀನು ಪ್ರಕರಣದಲ್ಲಿ (ಪೊಲೀಸರು) ಏನು ಪ್ರತಿಕ್ರಿಯೆ ನೀಡುತ್ತಾರೆ?" ಎಂದು ಕೇಳಿದರು.

ದೆಹಲಿ ಪೊಲೀಸರ ಪರ ಹಾಜರಿದ್ದ ವಕೀಲ ರಜತ್ ನಾಯರ್ ಉತ್ತರಿಸಿ "ಆರೋಪಪಟ್ಟಿ ಸಾವಿರಾರು ಪುಟಗಳಿಂದ ಕೂಡಿದ್ದು ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದರು.

Tahir Hussain and Delhi Riots
Tahir Hussain and Delhi Riots

ತಾಹಿರ್‌ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌

ಮತ್ತೊಂದೆಡೆ ದೆಹಲಿ ಗಲಭೆಗೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ ಆಮ್‌ ಆದ್ಮಿ ಪಕ್ಷದ ಮಾಜಿ ಪಾಲಿಕೆ ಸದಸ್ಯ ತಾಹಿರ್‌ ಹುಸೇನ್‌ ಅವರಿಗೆ ದೆಹಲಿ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

ತಾಹಿರ್‌ ವಿರುದ್ಧದ ಕೊಲೆಯತ್ನ, ಗಲಭೆಗೆ ಪ್ರಚೋದನೆ ಇತ್ಯಾದಿ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿಯ ದಯಾಳ್‌ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏ. 20ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾ. ಅನೀಶ್‌ ದಯಾಳ್‌ ಅವರು ಇಂದು (ಬುಧವಾರ) ಜಾಮೀನು ಆದೇಶ ನೀಡಿದರು.

Kannada Bar & Bench
kannada.barandbench.com