ಪರಿಹಾರ ನೀಡದಿದ್ದರೆ ಉಚಿತ ಕೊಡುಗೆ, ಜನಪ್ರಿಯ ಯೋಜನೆ ಸ್ಥಗಿತ: ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಖಡಕ್‌ ಎಚ್ಚರಿಕೆ

ಈ ವರ್ಷದ ಆರಂಭದಲ್ಲಿ ಬಜೆಟ್ ಮಂಡನೆ ವೇಳೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ₹ 96,000 ಕೋಟಿಗಳಷ್ಟು ಹೆಚ್ಚುವರಿ ಹೊರೆಯಾಗುವ ವಿವಿಧ ಜನಪ್ರಿಯ ಯೋಜನೆಗಳನ್ನು ಘೋಷಿಸಿತ್ತು.
Supreme Court of India
Supreme Court of India
Published on

ಡಿನೋಟಿಫೈಡ್ ಮೀಸಲು ಅರಣ್ಯ ಭೂಮಿ ಮಂಜೂರಾದ ಭೂಮಾಲೀಕರಿಗೆ ಬಾಕಿ ಇರುವ ಪರಿಹಾರವನ್ನು ಪಾವತಿಸದಿದ್ದಲ್ಲಿ 'ಲಡ್ಕಿ ಬೆಹನ್ ಯೋಜನೆ'ಯಂತಹ ಉಚಿತ ಕೊಡುಗೆಗಳನ್ನು ನೀಡುವ ಅನೇಕ ಯೋಜನೆಗಳನ್ನು ನಿಲ್ಲಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಆಗಸ್ಟ್‌ 28ರೊಳಗೆ ಪರಿಹಾರ ನೀಡದಿದ್ದರೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಸಮನ್ಸ್‌ ನೀಡಬೇಕಾಗುತ್ತದೆ ಎಂದಿರುವ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈಚಿನ ಬಜೆಟ್‌ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಗಳಿಗೆ ತಡೆ ನೀಡಬೇಕಾಗುತ್ತದೆ ಎಂಬುದಾಗಿ ಪುನರುಚ್ಚರಿಸಿತು.  

ಸರ್ಕಾರಕ್ಕೆ ಉಚಿತ ಕೊಡುಗೆಗಳನ್ನು ನೀಡಲು ಸಾಕಷ್ಟು ಹಣವಿದೆ, ಪರಿಹಾರ ಪಾವತಿಸಲು ಹಣ ಇಲ್ಲ ಎಂದು ಕಿಡಿಕಾರಿದ ಪೀಠ ಒಂದು ವೇಳೆ ಪರಿಹಾರ ನೀಡದೆ ಹೋದರೆ ಲಡ್ಕಿ ಬಹು ಬೆಹನ್ ರೀತಿಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದಿತು.

ಪರಿಹಾರ ನೀಡುವಂತೆ ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಪಾಲಿಸಲಾಗಿದೆಯೇ ಎನ್ನುವ ಕುರಿತು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿತು. ಚುನಾವಣೆಯ ಹೊಸ್ತಿಲಿನಲ್ಲಿರುವ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ಈ ವರ್ಷದ ಆರಂಭದಲ್ಲಿ ಬಜೆಟ್ ಮಂಡನೆ ವೇಳೆ ₹ 96,000 ಕೋಟಿಗಳಷ್ಟು ಹೆಚ್ಚುವರಿ ಹೊರೆಯಾಗುವ ವಿವಿಧ ಜನಪ್ರಿಯ ಯೋಜನೆಗಳನ್ನು ಘೋಷಿಸಿತ್ತು. ಸುಪ್ರೀಂ ಕೋರ್ಟ್‌ ಆಗಸ್ಟ್ 7ರಂದು ನೀಡಿದ ಆದೇಶದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕುಟುಕಿದೆ.

ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಯೋಜನೆಗಳಲ್ಲಿ ಮುಖ್ಯಮಂತ್ರಿ ಮಝಿ ಲಡ್ಕಿ ಬೆಹನ್ ಯೋಜನೆ 21-65 ವಯಸ್ಸಿನ ಅರ್ಹ ಮಹಿಳೆಯರಿಗೆ ಮಾಸಿಕ ₹ 1,500 ನೀಡುತ್ತದೆ.

ವಿಚಾರಣೆ ವೇಳೆ, ಪರಿಹಾರ ಮೊತ್ತ ನಿಗದಿಯಾಗಬೇಕಿರುವುದರಿಂದ ಪರಿಹಾರ ಪಾವತಿಸಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದಾಗ ಅಸಮಾಧಾನಗೊಂಡ ನ್ಯಾಯಾಲಯ ಈ ಹೇಳಿಕೆಗಳನ್ನು ನೀಡಿತು.

ಪ್ರಕರಣ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿರುವ ಬಗ್ಗೆ ಇಂದಿನ ವಿಚಾರಣೆ ವೇಳೆ ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ಬೇಸರ ವ್ಯಕ್ತಪಡಿಸಿದರಾದರೂ ಸರ್ವೋಚ್ಚ ನ್ಯಾಯಾಲಯ ಇದರಿಂದ ಪ್ರಭಾವಿತವಾಗದೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿತು.

ಅಲ್ಲದೆ, ಮುಂದಿನ ವಿಚಾರಣೆ ವೇಳೆಗೆ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳದೆ ಹೋದರೆ ಭೂ ಸ್ವಾಧೀನ ಕಾಯಿದೆಯ ಅಡಿ ಲಭ್ಯವಿರುವ ಅತಿ ಹೆಚ್ಚಿನ ಪರಿಹಾರವನ್ನು ನೀಡಿ ಆದೇಶಿಸುವುದಾಗಿ ಪೀಠವು ಮಹಾರಾಷ್ಟ್ರ ಸರ್ಕಾರವನ್ನು ಎಚ್ಚರಿಸಿತು.

Kannada Bar & Bench
kannada.barandbench.com