ಹುಲಿ ಉಗುರು ಒಳಗೊಂಡ ಚಿನ್ನದ ಲಾಕೆಟ್ ಧರಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಬಿಗ್‌ಬಾಸ್ ರಿಯಾಲಿಟಿ ಷೋ-10ರ ಸ್ಪರ್ಧಿ ವರ್ತೂರು ಸಂತೋಷ್‌ಗೆ ಬೆಂಗಳೂರು ಗ್ರಾಮಾಂತರದ ನ್ಯಾಯಾಲಯವು ಈಚೆಗೆ ನವೆಂಬರ್ 6ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972ರ ವಿವಿಧ ಸೆಕ್ಷನ್‌ಗಳ ಆರೋಪದ ಅಡಿ ಬಂಧಿಸಲ್ಪಟ್ಟ ವರ್ತೂರು ಸಂತೋಷ್ ಅವರನ್ನು ಸೋಮವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡನೇ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಬಿ ಆರ್ ನರೇಂದ್ರ ಅವರ ಮನೆಯಲ್ಲಿ ಹಾಜರುಪಡಿಸಲಾಗಿತ್ತು. ಘಟನೆಯ ಕುರಿತು ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್ ಅವರು ಆರೋಪಿ ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಳಿಕ ಆರೋಪಿಯನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ವ್ಯಕ್ತಿಯೊಬ್ಬರು ನೀಡಿದ್ದ ದೂರು ಆಧರಿಸಿ ಬೆಂಗಳೂರು ನಗರ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ನೇತೃತ್ವದ ತಂಡವು ಬಿಗ್‌ಬಾಸ್ ಷೋ ಚಿತ್ರೀಕರಣ ಸ್ಥಳಕ್ಕೆ ತೆರಳಿ ಸಂತೋಷ್ ಅವರು ಧರಿಸಿದ್ದ ಲಾಕೆಟ್‌ನಲ್ಲಿ ಹುಲಿ ಉಗುರು ಮಿಳಿತವಾಗಿರುವುದನ್ನು ಖಾತರಿಪಡಿಸಿ, ಬಂಧಿಸಿದ್ದರು. ಆಕ್ಷೇಪಾರ್ಹವಾದ ಲಾಕೆಟ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.