

ಅಂಗವಿಕಲರ ವಿರುದ್ಧ ಯಾವುದೇ ತಾರತಮ್ಯ ಆರೋಪವಿಲ್ಲದ ಪ್ರಕರಣದಲ್ಲಿ ಅಂಗವಿಕಲರ ಹಕ್ಕುಗಳ ಕಾಯಿದೆ 2016 ಅಡಿಯಲ್ಲಿ ರಾಜ್ಯ ಅಂಗವಿಕಲರ ಆಯುಕ್ತರು ನೀಡಿದ್ದ ಎಚ್ಚರಿಕೆ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಅಂಗವಿಕಲರ ಹಕ್ಕುಗಳ ಆಯುಕ್ತರು ನೀಡಿದ್ದ ಎಚ್ಚರಿಕೆ ಪ್ರಶ್ನಿಸಿ ಅಪಾರ್ಟ್‌ಮೆಂಟ್ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅಂಗವಿಕಲರ ಹಕ್ಕುಗಳ ಕಾಯಿದೆಯಂತಹ ಜನಪರ ಹಾಗೂ ಕಲ್ಯಾಣಕಾರಿ ಕಾನೂನುಗಳನ್ನು ಸಾಮಾನ್ಯ ಅಪಾರ್ಟ್‌ಮೆಂಟ್ ಅಥವಾ ನೆರೆಹೊರೆಯ ವಿವಾದಗಳನ್ನು ಬಗೆಹರಿಸಲು ಬಳಸಬಾರದು ಎಂದು ಸ್ಪಷ್ಟಪಡಿಸಿದೆ. ಇಂತಹ ಕಾನೂನುಗಳ ದುರುಪಯೋಗದಿಂದ ನಿಜವಾದ ಸಂತ್ರಸ್ತ ಅಂಗವಿಕಲರಿಗೆ ಸಿಗಬೇಕಾದ ನ್ಯಾಯ ಹಾಗೂ ಸೌಲಭ್ಯಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಪ್ರಕರಣದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ ರಾಜ್ಯ ಅಂಗವಿಕಲರ ಆಯುಕ್ತರು 2026ರ ಫೆಬ್ರವರಿ 19ರಂದು ಎಚ್ಚರಿಕೆ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅಪಾರ್ಟ್‌ಮೆಂಟ್ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದೈಹಿಕ ಅಂಗವೈಕಲ್ಯ ಹೊಂದಿರುವ ದೂರುದಾರರು, ತಮ್ಮ ನಿವಾಸದ ಎದುರು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ತಮ್ಮನ್ನು "ಲೋಫರ್" ಎಂದು ನಿಂದಿಸಲಾಗಿದೆ, ನಿರ್ವಹಣಾ ಶುಲ್ಕ ಬಾಕಿ ಇರುವ ಮಾಹಿತಿ ವಾಟ್ಸ್ಆ್ಯಪ್ ಗುಂಪು ಹಾಗೂ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದೆ, ಭದ್ರತಾ ಸಿಬ್ಬಂದಿಗೆ ಸಹಾಯ ಮಾಡದಂತೆ ಸೂಚಿಸಲಾಗಿದೆ ಎಂಬ ಆರೋಪಗಳನ್ನು ಮಾಡಿದ್ದರು.
ಆದರೆ, ಈ ಎಲ್ಲ ಆರೋಪಗಳು ದೂರುದಾರರ ಅಂಗವೈಕಲ್ಯದ ಕಾರಣದಿಂದ ನಡೆದ ತಾರತಮ್ಯವನ್ನು ತೋರಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಸಿಟಿವಿ ಅಳವಡಿಸುವುದು, ಅವಹೇಳನಕಾರಿ ಪದ ಬಳಕೆ ಅಥವಾ ನಿರ್ವಹಣಾ ಶುಲ್ಕ ಬಾಕಿ ಇರುವವರ ಹೆಸರನ್ನು ಪ್ರಕಟಿಸುವುದು ಸಾಮಾನ್ಯ ಅಪಾರ್ಟ್‌ಮೆಂಟ್ ವಿವಾದಗಳಿಗೆ ಸಂಬಂಧಿಸಿದ ವಿಷಯಗಳಾಗಿದ್ದು, ಅವುಗಳನ್ನು ಅಂಗವಿಕಲರ ಹಕ್ಕುಗಳ ಕಾಯಿದೆಯ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನಿರ್ವಹಣಾ ಶುಲ್ಕ ಬಾಕಿ ಇರುವವರ ಹೆಸರನ್ನು ವಾಟ್ಸ್ಆ್ಯಪ್ ಗುಂಪು ಅಥವಾ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವುದು ಕೇವಲ ಮಾಹಿತಿ ನೀಡುವ ಕ್ರಮವಾಗಿದ್ದು, ಅದನ್ನೇ ಕಿರುಕುಳ ಅಥವಾ ತಾರತಮ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಭವಿಷ್ಯದಲ್ಲಿ ಇಂತಹ ದೂರುಗಳನ್ನು ಆರಂಭಿಕ ಹಂತದಲ್ಲೇ ಸೂಕ್ಷ್ಮವಾಗಿ ಪರಿಶೀಲಿಸಿ, ಅಂಗವೈಕಲ್ಯಕ್ಕೆ ಸಂಬಂಧಿಸಿದ ನೈಜ ಪ್ರಕರಣಗಳನ್ನಷ್ಟೇ ಅಂಗವಿಕಲರ ಹಕ್ಕುಗಳ ಕಾಯಿದೆಯಡಿ ಪರಿಗಣಿಸುವಂತೆ ರಾಜ್ಯ ಅಂಗವಿಕಲರ ಆಯುಕ್ತರಿಗೆ ಹೈಕೋರ್ಟ್ ಸಲಹೆ ನೀಡಿದೆ.
ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರು ಸಮುದಾಯ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಂಡು ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ದೂರುದಲ್ಲಿ ಅಂಗವೈಕಲ್ಯ ಆಧಾರಿತ ತಾರತಮ್ಯದ ಯಾವುದೇ ಆರೋಪ ಇಲ್ಲದಿರುವುದರಿಂದ, ಈ ಪ್ರಕರಣವನ್ನು ವಿಚಾರಣೆ ನಡೆಸುವ ಅಧಿಕಾರ ರಾಜ್ಯ ಅಂಗವಿಕಲರ ಆಯುಕ್ತರಿಗೆ ಇರಲಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿ, 2026ರ ಫೆಬ್ರವರಿ 19ರಂದು ಹೊರಡಿಸಿದ್ದ ಎಚ್ಚರಿಕೆ ಆದೇಶವನ್ನು ರದ್ದುಪಡಿಸಿ ಅರ್ಜಿಯನ್ನು ಅನುಮೋದಿಸಿದೆ.