ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ: ಮೂರು ವರ್ಷದ ಬಾಕಿ ಮೊತ್ತ ಶೀಘ್ರ ಪಾವತಿಗೆ ಸೂಚಿಸಿದ ಹೈಕೋರ್ಟ್‌

“ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವಾಗ ಕಲ್ಯಾಣ ಮಂಡಳಿಯಾಗಲಿ ಅಥವಾ ಸರ್ಕಾರವಾಗಲೀ ಹೈಕೋರ್ಟ್‌ನ ಈ ಆದೇಶಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು” ಎಂದು ನ್ಯಾಯಾಲಯ ಹೇಳಿದೆ.
Justice M Nagaprasanna and Karnataka HC
Justice M Nagaprasanna and Karnataka HC
Published on

“ಶೈಕ್ಷಣಿಕ ಧನಸಹಾಯ ಕೋರಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕ ಕಲ್ಯಾಣ‌ ಮಂಡಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಮಕ್ಕಳಿಗೆ 2021ರ ಅಧಿಸೂಚನೆ ಅನ್ವಯ ಬಾಕಿ ಇರುವ ಮೂರು ವರ್ಷಗಳ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಸಹಾಯಧನ ಒದಗಿಸಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಮಹಂತೇಶ್‌ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

“ವಿದ್ಯಾರ್ಥಿಗಳು 2020-21, 2021-22 ಹಾಗೂ 2022-23ನೇ ಸಾಲಿನಲ್ಲಿ ಕೋರಿರುವ ಶೈಕ್ಷಣಿಕ ಸಹಾಯಧನವನ್ನು 2021ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡಬೇಕು. ಅಂತೆಯೇ, ಈ ಆದೇಶವನ್ನು ಜಾರಿಗೊಳಿಸಲು ಅಗತ್ಯ ಕ್ರಮವಹಿಸಬೇಕು” ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ. ಅಲ್ಲದೇ, 2023ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿರುವ ಪೀಠವು ಈ ಹಿಂದಿನ 2021ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ಪಾವತಿಸುವಂತೆ ಆದೇಶಿಸಿದೆ.

“ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವಾಗ ಕಲ್ಯಾಣ ಮಂಡಳಿಯಾಗಲಿ ಅಥವಾ ಸರ್ಕಾರವಾಗಲೀ ಹೈಕೋರ್ಟ್‌ನ ಈ ಆದೇಶಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು” ಎಂದು ನಿರ್ದೇಶಿಸಿದ ಪೀಠವು “ಶೈಕ್ಷಣಿಕ ನೆರವಿನ ಯಾವುದೇ ಪರಿಷ್ಕರಣೆಯ ವೇಳೆ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಕಲ್ಯಾಣವೇ ಆತ್ಯಂತಿಕ ಆದ್ಯತೆ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಅಲೆದಾಡದಂತೆ ಭವಿಷ್ಯದಲ್ಲಿ ನೋಡಿಕೊಳ್ಳಬೇಕು” ಎಂದು ಎಚ್ಚರಿಸಿದೆ.

“ಮಹಾಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರು (ಸಿಎಜಿ) ಮೂರು ತಿಂಗಳ ಒಳಗಾಗಿ ಕಲ್ಯಾಣ ಮಂಡಳಿಯ ಲೆಕ್ಕಪರಿಶೋಧನೆ ಮಾಡಿಸಿ ಅದರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು” ಎಂದು ಸಿಎಜಿಗೆ ನ್ಯಾಯಾಲಯ ಸೂಚಿಸಿದೆ. ಅಂತೆಯೇ, ಈ ಕುರಿತಂತೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಸಿಎಜಿಯಿಂದ ವರದಿ ಸಂಗ್ರಹಿಸಬೇಕು. ಈ ವರದಿ ಬಂದ ಕೂಡಲೇ ವಿಳಂಬ ಮಾಡದೆ ಪ್ರಕರಣವನ್ನು ವಿಚಾರಣೆಗೆ ಮರು ನಿಗದಿಗೊಳಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಾಕೀತು ಮಾಡಿದೆ.

Also Read
ಸೆಸ್ ಹಣ ಕಾರ್ಮಿಕರ ಕಲ್ಯಾಣಕ್ಕಾಗಿ ಖರ್ಚು‌ ಮಾಡಬೇಕೇ ವಿನಾ ಅಧಿಕಾರಿಗಳ ಐಷಾರಾಮಿ ಓಡಾಟಕ್ಕಲ್ಲ: ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು 2023ರಿಂದ ಶೇ.80ರಿಂದ ಶೇ.70ಕ್ಕೆ ಕಡಿತಗೊಳಿಸಲಾಗಿತ್ತು. ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ‌ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕರ ಫೆಡರೇಷನ್‌ (ಸಿಡಬ್ಲ್ಯುಎಫ್‌ಐ–ಸಿಐಟಿಯು) ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ 2024ರ ಏಪ್ರಿಲ್‌ನಲ್ಲಿ ಮಧ್ಯಂತರ ಆದೇಶ ನೀಡಿ, ಅರ್ಜಿ ಸಲ್ಲಿಸಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಸಹಾಯಧನ ಪಾವತಿಸುವಂತೆ ಆದೇಶಿಸಿತ್ತು. ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ವಾದ ಮಂಡಿಸಿದ್ದರು.

Kannada Bar & Bench
kannada.barandbench.com