ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ಹಿರಿಯ ವಕೀಲ ಹಾಗೂ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನಡುವೆ ಕಾವೇರಿದ ಚರ್ಚೆ ನಡೆಯಿತು.
ಪಿಎಂಎಲ್ಎ ಜಾರಿಗೆ ಬಂದಾಗ ನೀವು ವಿರೋಧ ಪಕ್ಷದ ಭಾಗವಾಗಿದ್ದಿರಾ ಅಥವಾ ಆಡಳಿತ ರಾಜಕೀಯ ಪಕ್ಷದ ಭಾಗವಾಗಿದ್ದಿರಾ ಎಂದು ಕಾನೂನು ಜಾರಿ ವಿರುದ್ಧ ವಾದಿಸುತ್ತಿದ್ದ ಸಿಬಲ್ ಅವರನ್ನು ನ್ಯಾ. ಬೇಲಾ ಕೇಳಿದರು.
ಕಾಯಿದೆಯನ್ನು 2002ರಲ್ಲಿ ಸಂಸತ್ತು ಅಂಗೀಕರಿಸಿಲಾಗಿತ್ತಾದರೂ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2005ರಲ್ಲಿ ಅದು ಜಾರಿಗೆ ಬಂತು. ಆಗ ಸಿಬಲ್ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿದ್ದರು.
"ನಾನು 35 ವರ್ಷಗಳಿಂದ ಶಾಸಕನಾಗಿದ್ದೇನೆ, ವಿರೋಧ ಪಕ್ಷದಲ್ಲಿಯೂ ಇದ್ದೇನೆ. ಇಂತಹ ಕಾನೂನನ್ನು ಎಂದಿಗೂ ನೋಡಿರಲಿಲ್ಲ" ಎಂದು ವಿಚಾರಣೆ ವೇಳೆ ಸಿಬಲ್ ಹೇಳಿದರು.
"2002ರಲ್ಲಿ (2005) ನೀವು ವಿರೋಧ ಪಕ್ಷದಲ್ಲಿದ್ದಿರಾ?" ಎಂದು ನ್ಯಾ. ಬೇಲಾ ಪ್ರಶ್ನಿಸಿದರು.
"ಇದನ್ನು (ಕಾಯಿದೆಯನ್ನು) ಪಕ್ಷವೊಂದು ಜಾರಿಗೆ ತಂದು ತಿದ್ದುಪಡಿ ಮಾಡಿರಬಹುದು, ಆದರೆ ಅದು ಈ ರೀತಿ ಜಾರಿಗೆ ಬರುತ್ತದೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ತಾವು ಏನು ಕೇಳುತ್ತಿದ್ದೀರಿ ಎಂಬುದು ಅಸ್ಪಷ್ಟವಾಗಿದೆ" ಎಂದು ಸಿಬಲ್ ಉತ್ತರಿಸಿದರು.
"ಆ ವರ್ಷ ನೀವು ವಿರೋಧ ಪಕ್ಷದಲ್ಲಿದ್ದೀರಾ ಎಂದು ಮಾತ್ರ ಕೇಳುತ್ತಿದ್ದೇನೆ..." ಎಂದು ನ್ಯಾ. ಬೇಲಾ ಪಟ್ಟುಹಿಡಿದರು.
"ಇದರ (ಕಾಯಿದೆ ಜಾರಿಯ) ಪರಿಣಾಮ ಅಗಾಧವಾದುದು. ಅದು ನೀಡುವ ವ್ಯಾಪಕ ಅಧಿಕಾರದಿಂದಾಗಿ ನಮ್ಮ ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ, ಇದು ಅಪಾಯಕಾರಿ" ಎಂದು ಸಿಬಲ್ ಪ್ರತಿಪಾದಿಸಿದರು.
ಸಮನ್ಸ್, ದಾಖಲೆಗಳ ಪ್ರಸ್ತುತಪಡಿಸುವಿಕೆ ಮತ್ತು ಸಾಕ್ಷ್ಯ ನೀಡುವುದು ಇತ್ಯಾದಿಗಳಿಗೆ ಸಂಬಂಧಿಸಿದ ಅಧಿಕಾರಗಳೊಂದಿಗೆ ವ್ಯವಹರಿಸುವ ಪಿಎಂಎಲ್ಎ ಸೆಕ್ಷನ್ 50ರ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿದ ನ್ಯಾ. ಬೇಲಾ, ಕೇವಲ ಸಮನ್ಸ್ ನೀಡಿದರೆ ಅದು ಹೇಗೆ ಸಂವಿಧಾನದ 21ನೇ ವಿಧಿಯ ಅಡಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಪ್ರಶ್ನಿಸಿದರು.
"ಆದರೆ ನನಗೇಕೆ ಸಮನ್ಸ್ ನೀಡಲಾಗಿದೆ ಎಂಬುದು ನನಗೆ ಗೊತ್ತಿರಬೇಕು...ಸ್ವಾತಂತ್ರ್ಯ ಎಂಬುದು ಸಿಆರ್‌ಪಿಸಿಯ ಹೃದಯಭಾಗದಲ್ಲಿದ್ದು ಸಿಆರ್‌ಪಿಸಿ ಸೆಕ್ಷನ್ 161ರ ಅಡಿಯಲ್ಲಿ ನಮ್ಮನ್ನು ಹೇಳಿಕೆ ನೀಡುವಂತೆ ಕರೆಯುವಾಗ, ನಮ್ಮನ್ನು ಸಾಕ್ಷಿ ಎಂದು ಪರಿಗಣಿಸಬೇಕಾಗುತ್ತದೆ. ಆದರೆ ನಾನಿಲ್ಲಿ ಸಂಪೂರ್ಣ ಗೊಂದಲದಲ್ಲಿದ್ದೇನೆ, ಏಕೆಂದರೆ ಏಕೆ ಸಮನ್ಸ್ ನೀಡಲಾಗಿದೆ ಎಂದು ನನಗೆ ಗೊತ್ತಿರದೇ ಇರುವುದರಿಂದ ನಾನು ನನ್ನ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ನನ್ನನ್ನು ಬಂಧಿಸಬಹುದು" ಎಂದು ಸಿಬಲ್ ಉತ್ತರಿಸಿದರು. ಬುಧವಾರದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೂ ಪೀಠದ ಭಾಗವಾಗಿದ್ದರು.
ನ್ಯಾಯಮೂರ್ತಿಗಳಾದ ಕೌಲ್ ಮತ್ತು ರೋಹಿಂಟನ್ ನಾರಿಮನ್ ಅವರಿದ್ದ ಪೀಠ ನವೆಂಬರ್ 2017ರಲ್ಲಿ ಪಿಎಂಎಲ್ಎಯ ಸೆಕ್ಷನ್ 45 (1) ಅನ್ನು ರದ್ದುಗೊಳಿಸಿ ಹಣ ಅಕ್ರಮ ವರ್ಗಾವಣೆ ಕಾಯಿದೆಯ ಆರೋಪಿಗಳಿಗೆ ಜಾಮೀನು ನೀಡಲು ಎರಡು ಹೆಚ್ಚುವರಿ ಷರತ್ತುಗಳನ್ನು ವಿಧಿಸಿತ್ತು.
ಆದರೆ, ತರುವಾಯ ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಜುಲೈ 2022 ರಲ್ಲಿ ಈ ತೀರ್ಪನ್ನು ರದ್ದುಗೊಳಿಸಿತ್ತು. ಕಾಯಿದೆಯ ಹಲವು ನಿಯಮಾವಳಿಗಳ ಸಿಂಧುತ್ವವನ್ನು ಅದು ಆ ವೇಳೆ ಎತ್ತಿ ಹಿಡಿದಿತ್ತು.
(ಜಾರಿ ನಿರ್ದೇಶನಾಲಯ ದಾಖಲಿಸಿಕೊಳ್ಳುವ) ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಆಂತರಿಕ ದಾಖಲೆಯಾಗಿರುವುದರಿಂದ ಅದನ್ನು ಪ್ರಥಮ ಮಾಹಿತಿ ವರದಿ (ಎಫ್ಐಆರ್) ಗೆ ಸಮೀಕರಿಸಲಾಗದು. ಹೀಗಾಗಿ ಪಿಎಂಎಲ್ಎ ಪ್ರಕ್ರಿಯೆಗಳ ಅಡಿಯಲ್ಲಿ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ದಾಖಲಿಸಿಕೊಳ್ಳುವುದು ಕಡ್ಡಾಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಇದಲ್ಲದೆ, ನಿಗದಿತ ಅಪರಾಧಗಳಿಗೆ ಸಂಬಂಧಿಸಿದಂತೆ ಪಿಎಂಎಲ್ಎ ಅಡಿಯಲ್ಲಿ ಶಿಕ್ಷೆಯ ಅನುಪಾತದ ಬಗೆಗಿನ ವಾದವನ್ನು ಸಂಪೂರ್ಣವಾಗಿ "ಆಧಾರರಹಿತ" ಎಂದು ಅದು ತಿರಸ್ಕರಿಸಿತು. 2022ರಲ್ಲಿ ನೀಡಲಾಗಿದ್ದ ತೀರ್ಪು ತೀವ್ರ ಟೀಕೆಗಳಿಗೆ ಕಾರಣವಾಗಿ ಹಲವು ಪರಿಶೀಲನಾ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದವು.
ಅವುಗಳ ವಿಚಾರಣೆ ಬಾಕಿದ್ದು ಈ ಮಧ್ಯೆ, ಪಿಎಂಎಲ್ಎ ಪ್ರಶ್ನಿಸಿ ಹೊಸ ಅರ್ಜಿಗಳನ್ನು ಸಲ್ಲಿಸಲಾಗಿದ್ದ, ಅವುಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು.