ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: 8 ಹಂತಗಳಲ್ಲಿ ಮತದಾನ ನಡೆಸುವ ಆಯೋಗದ ನಿಲುವು ಪ್ರಶ್ನಿಸಿದ್ದ ಅರ್ಜಿ ವಜಾ

ಚುನಾವಣಾ ಪ್ರಚಾರದಲ್ಲಿ “ಜೈ ಶ್ರೀರಾಮ್‌” ಎಂಬ ಘೋಷಣೆ ಬಳಸುವುದರಿಂದ ಅದು ಕೋಮುಗಳ ನಡುವೆ ಬಿರುಕು ಸೃಷ್ಟಿಸಲಿದ್ದು, ಇದು ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿದೆ ಎಂದೂ ಅರ್ಜಿದಾರ ಎಂ ಎಲ್‌ ಶರ್ಮಾ ದೂರಿದ್ದರು.
West Bengal and Election Commission
West Bengal and Election Commission
Published on

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಹಂತದಲ್ಲಿ ಮತದಾನ ನಡೆಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ (ಮನೋಹರ್‌ ಲಾಲ್‌ ಶರ್ಮಾ ವರ್ಸಸ್‌ ಭಾರತೀಯ ಚುನಾವಣಾ ಆಯೋಗ).

ಅರ್ಜಿದಾರ ವಕೀಲ ಮನೋಹರ್‌ ಲಾಲ್‌ ಶರ್ಮಾ ಎಂಬವರು ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ವಜಾ ಮಾಡಿದೆ.

“ನಿಮ್ಮ ವಾದವನ್ನು ಒಪ್ಪಲಾಗದು. ಇಡೀ ಪ್ರಕರಣವನ್ನು ನಾವು ಓದಿದ್ದು, ಮನವಿಯನ್ನು ವಜಾಗೊಳಿಸಿದ್ದೇವೆ” ಎಂದು ಪೀಠ ಹೇಳಿತು.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಒಂದೇ ಹಂತದಲ್ಲಿ ಮತ್ತು ನೆರೆಯ ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಎಂಟು ಹಂತಗಳಲ್ಲಿ ಮತದಾನ ನಡೆಸುವುದು ಸಂವಿಧಾನದ 14ನೇ ವಿಧಿಯಡಿ ದೊರೆತಿರುವ ಸಮಾನ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಶರ್ಮಾ ವಾದಿಸಿದರು.

“ತಮ್ಮ ಮನಸೋಇಚ್ಛೆಯಂತೆ ಐದು ವಿಭಿನ್ನ ರಾಜ್ಯಗಳಲ್ಲಿ ಭಿನ್ನ ರೀತಿಯಲ್ಲಿ ಚುನಾವಣೆ ನಡೆಸುವ ಮೂಲಕ ಅಸಮಾನ ವರ್ತನೆ ತೋರಲು ಆಯೋಗಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಇತರೆ ರಾಜ್ಯಗಳಲ್ಲಿ ಒಂದು ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಮತದಾನ ನಡೆಸಲಾಗುತ್ತಿದೆ. ಬಂಗಾಳವು ಯಾವುದೇ ತೆರನಾದ ಭಯೋತ್ಪಾದಕರ ದಾಳಿ ಅಥವಾ ಅದು ವಿವಾದಿತ ಯುದ್ಧ ವಲಯವಲ್ಲ. ಇದು ಭಾರತದ ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಮನವಿಯಲ್ಲಿ ವಿವರಿಸಿದ್ದರು.

Also Read
ಮತದಾನಕ್ಕಾಗಿ ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯತಿ ನೀಡಲು ಕ್ರಮಕ್ಕೆ ಸೂಚಿಸಿದ ಕೇಂದ್ರ ಚುನಾವಣಾ ಆಯೋಗ

ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಅಮಿತ್‌ ಶಾ ಮತ್ತು ಶುಭೇಂದು ಅಧಿಕಾರಿ ಅವರು “ಜೈ ಶ್ರೀರಾಮ್‌” ಧಾರ್ಮಿಕ ಘೋಷಣೆ ಬಳಸುವುದಕ್ಕೂ ಮನವಿಯಲ್ಲಿ ತಕರಾರು ತೆಗೆಯಲಾಗಿದೆ. ಇದು ಪ್ರಜಾಪ್ರತಿನಿಧಿ ಕಾಯಿದೆಯ (ಆರ್‌ಪಿ ಕಾಯಿದೆ) ಸೆಕ್ಷನ್‌ಗಳಾದ 123 ಮತ್ತು 125ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಪಿ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಉಲ್ಲಂಘಿಸಿರುವ ಶಾ ಮತ್ತು ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

“ಜಾತ್ಯತೀತವಾದ ಎಂಬುದು ಸಂವಿಧಾನದ ಬದಲಿಸಲಾಗದ ಮೂಲರಚನೆಯಾಗಿದೆ. ಧಾರ್ಮಿಕವಾಗಿ ಪ್ರಚೋದನೆ ಉಂಟು ಮಾಡುವ “ಜೈ ಶ್ರೀರಾಮ್‌” ಘೋಷಣೆ ಹಾಕುವ ಮೂಲಕ ಕೋಮು ಅಶಾಂತಿ ಮತ್ತು ಭಾರತೀಯ ನಾಗರಿಕರಲ್ಲಿ ದ್ವೇಷ ಹರಡಲಾಗುತ್ತಿದೆ” ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

Kannada Bar & Bench
kannada.barandbench.com