ಜಾತಿ ಪ್ರಮಾಣ ಪತ್ರ ಹಗರಣ: ಸಿಬಿಐ ತನಿಖೆ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪ. ಬಂಗಾಳ ಸರ್ಕಾರ; ನಾಳೆ ವಿಚಾರಣೆ

ತಮ್ಮ ಆದೇಶ ಬದಿಗೆ ಸರಿಸಿದ್ದ ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸಿ ಹಗರಣದ ತನಿಖೆ ಆರಂಭಿಸುವಂತೆ ನ್ಯಾ. ಗಂಗೋಪಾಧ್ಯಾಯ ಅವರು ಈ ಹಿಂದೆ ಸಿಬಿಐಗೆ ನಿರ್ದೇಶನ ನೀಡಿದ್ದರು.
ಸಿಬಿಐ, ಪಶ್ಚಿಮ ಬಂಗಾಳ ಮತ್ತು ಸುಪ್ರೀಂ ಕೋರ್ಟ್
ಸಿಬಿಐ, ಪಶ್ಚಿಮ ಬಂಗಾಳ ಮತ್ತು ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಜಾತಿ ಪ್ರಮಾಣಪತ್ರ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ವ್ಯಾಪಕವಾಗಿದ್ದು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಲವಾರು ವ್ಯಕ್ತಿಗಳು ಇಂತಹ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಬುಧವಾರ ಬೆಳಿಗ್ಗೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶ ಹೊರಡಿಸಿದ್ದರು. ಈ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ, ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ಪ್ರಕರಣ ಪ್ರಸ್ತಾಪಿಸಿದ್ದರು. ವಿಭಾಗೀಯ ಪೀಠ ಆದೇಶಕ್ಕೆ ತಡೆ ನೀಡಿತ್ತು.

ತಡೆ ನೀಡಿದ ಬಗ್ಗೆ ತಮಗೆ ಮಾಹಿತಿ ಒದಗಿಸಿಲ್ಲ ಎಂದು ತಿಳಿಸಿದ ನ್ಯಾ. ಗಂಗೋಪಾಧ್ಯಾಯ ಅವರು ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಿ ಸಿಬಿಐಗೆ ದಾಖಲೆಗಳನ್ನು ಹಸ್ತಾಂತರಿಸುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ಆದೇಶಿಸಿದ್ದರು.

ನಂತರ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಳ್ಳಿ ಹಾಕಿತ್ತು. ಆದರೆ ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸಬೇಕು ಎಂದು ನ್ಯಾ. ಗಂಗೋಪಾಧ್ಯಾಯ ವಿವಾದಾತ್ಮಕ ಆದೇಶ ಹೊರಡಿಸಿದರು.

ವಿಭಾಗೀಯ ಪೀಠದ ಮುಖ್ಯಸ್ಥರಾದ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ರಾಜ್ಯದ ರಾಜಕೀಯ ಪಕ್ಷವೊಂದರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನ್ಯಾ. ಗಂಗೋಪಾಧ್ಯಾಯ ತಮ್ಮ ಆದೇಶದಲ್ಲಿ ತಿಳಿಸಿದ್ದರು.

ಈ ವಿದ್ಯಮಾನಗಳು ಸುಪ್ರೀಂ ಕೋರ್ಟ್‌ ಶನಿವಾರ ವಿಶೇಷ ವಿಚಾರಣೆ ನಡೆಸಲು ಪ್ರೇರೇಪಿಸಿದವು. ಪ್ರಕರಣವನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಸಿಬಿಐ ತನಿಖೆಗೆ ನಿರ್ದೇಶಿಸಿದ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ಆದೇಶಕ್ಕೆ ತಡೆ ನೀಡಿತು.

ಈ ನಡುವೆ ಸುಪ್ರೀಂ ಕೋರ್ಟ್‌ಗೆ ಪ. ಬಂಗಾಳ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ "ನ್ಯಾ. ಗಂಗೋಪಾಧ್ಯಾಯ ಅವರ ಆದೇಶ ನ್ಯಾಯಿಕ ಆಡಳಿತವನ್ನು ಅಪಖ್ಯಾತಿಗೊಳಿಸುವ ಗುರಿ ಹೊಂದಿದ್ದು ನ್ಯಾಯಾಂಗದ ನಿಷ್ಪಕ್ಷಪಾತತನದ ಬಗ್ಗೆ ಸಾರ್ವಜನಿಕರು ಇರಿಸಿಕೊಂಡಿರುವ ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂದಿದೆ.

ಕಲ್ಕತ್ತ ಹೈಕೋರ್ಟ್‌ ಏಕಸದಸ್ಯ ಪೀಠದ "ಅವಲೋಕನಗಳು, ಆರೋಪಗಳು ಮತ್ತು ದೂಷಣೆಗಳಲ್ಲಿ ಸೌಜನ್ಯ ಮತ್ತು ಉತ್ತಮ ನಂಬಿಕೆಯ ಕೊರತೆ ಇದ್ದು ನ್ಯಾಯಾಂಗ ಸಂಯಮವನ್ನು ಗಾಳಿಗೆ ತೂರಲಾಗಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು "ಸಂಪೂರ್ಣ ಸಂಬಂಧವೇ ಇಲ್ಲದ ಪ್ರಕರಣವೊಂದನ್ನು ಉಲ್ಲೇಖಿಸಿ ಯಾವುದೇ ದಾಖಲೆಗಳಿಲ್ಲದೆ, ರಾಜ್ಯ ಪೊಲೀಸರ ಅಸಮರ್ಥತೆಯ ಬಗ್ಗೆ ತಮ್ಮದೇ ಆದ ತೀರ್ಮಾನಗಳಿಗೆ ಬಂದಿದ್ದಾರೆ,ಮತ್ತೊಂದೆಡೆ, ನ್ಯಾಯಾಂಗದ ಔಚಿತ್ಯ ಮತ್ತು ನ್ಯಾಯಾಲಯಗಳ ನ್ಯಾಯಸಮ್ಮತತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ" ಎಂದು ದೂರಿದ್ದಾರೆ.

ಐವರು ಸದಸ್ಯರ ಸುಪ್ರೀಂ ಕೋರ್ಟ್‌ ಪೀಠ ನಾಳೆ (ಸೋಮವಾರ) ಪ್ರಕರಣದ ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com