ಆನ್‌ಲೈನ್‌ ನಾಮಪತ್ರ ಸಲ್ಲಿಕೆ: ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ. ಬಂಗಾಳ ಸರ್ಕಾರ ವಿರೋಧ; ಕೇಂದ್ರವೇ ಮುಂದಾಗಲಿ ಎಂದು ವಾದ

"ಕೇಂದ್ರ ಅಥವಾ ಮುಖ್ಯ ಚುನಾವಣಾ ಆಯೋಗ ಇದನ್ನು ಮೊದಲು ಮಾಡಲಿ. ಬಿಜೆಪಿ ಸರ್ಕಾರ ಇದರಲ್ಲಿ ಮೊದಲಿಗನಾಗಿ ಆನ್ಲೈನ್ ನಾಮನಿರ್ದೇಶನ ಸ್ವೀಕರಿಸಲು ನಿಯಮ ಮಾರ್ಪಡಿಸಲಿ. ನಾವು ಅವುಗಳನ್ನು ಪಾಲಿಸುತ್ತೇವೆ" ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೇಳಿದರು.
Calcutta High Court
Calcutta High Court

ಮುಂದಿನ ತಿಂಗಳು ನಡೆಯಲಿರುವ ರಾಜ್ಯದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ನಾಮಪತ್ರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ನೀಡುವ ಕಲ್ಕತ್ತಾ ಹೈಕೋರ್ಟ್‌ನ ಸಲಹೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಈಚೆಗೆ ವಿರೋಧಿಸಿದೆ.

ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ಯಾವುದೇ ರಾಜ್ಯ ಮುಂದಾಗದಿರುವಾಗ ಪಶ್ಚಿಮ ಬಂಗಾಳ ಮಾತ್ರ ಏಕೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ಗುರುವಾರ ಪ್ರಶ್ನಿಸಿದರು. ನ್ಯಾಯಾಲಯ ಅಂತಹ ನಿರ್ದೇಶನವನ್ನು ಮೊದಲು ಬಿಜೆಪಿ ಆಡಳಿತವಿರುವ ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ವಕೀಲರು ಹೇಳಿದರು.

" ಮೊದಲಿಗೆ ಕೇಂದ್ರ ಸರ್ಕಾರ ಅಥವಾ ಮುಖ್ಯ ಚುನಾವಣಾ ಆಯೋಗ ಇದನ್ನು ಮಾಡಲಿ. ವಾಸ್ತವವಾಗಿ ಕೇಂದ್ರ ಸರ್ಕಾರವನ್ನು ಬಿಜೆಪಿ ನಡೆಸುತ್ತಿದೆ. ಬಿಜೆಪಿ ಸರ್ಕಾರ ಇದರಲ್ಲಿ ಮೊದಲಿಗನಾಗಿ ಆನ್‌ಲೈನ್ ನಾಮನಿರ್ದೇಶನ ಸ್ವೀಕರಿಸಲು ನಿಯಮ ಮಾರ್ಪಡಿಸಲಿ. ನಾವು ಅವುಗಳನ್ನು ಪಾಲಿಸುತ್ತೇವೆ" ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೇಳಿದರು.

ಆನ್‌ಲೈನ್‌ನಲ್ಲಿ ನಾಮಪತ್ರ ಸ್ವೀಕರಿಸಲು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ)ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಸೂಚಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ವಾದ ಮಂಡಿಸಿತು.

"ಚುನಾವಣಾ ಆಯೋಗವು ಹೊಸ ತಂತ್ರಜ್ಞಾನಕ್ಕೆ ಹತ್ತಿರಾಗಬೇಕು. ಮುಕ್ತ, ನ್ಯಾಯಸಮ್ಮತ ಮತ್ತು ಹಿಂಸಾಚಾರ ರಹಿತ ಚುನಾವಣೆ ನಡೆಸಲು ಅಂತಹ ತಂತ್ರಜ್ಞಾನವನ್ನು ಬಳಸಲು ಪ್ರಯತ್ನಿಸಬೇಕು" ಎಂದು ಸಿ ಜೆ ಶಿವಜ್ಞಾನಂ ಎಸ್‌ಇಸಿ ಪರ ಹಾಜರಾದ ವಕೀಲರಿಗೆ ತಿಳಿಸಿದರು.ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸುವುದರಿಂದ ಪರಿಶೀಲನೆ ಇತ್ಯಾದಿಗಳಿಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

Also Read
ಪ. ಬಂಗಾಳ ಚುನಾವಣೋತ್ತರ ಹಿಂಸಾಚಾರ: ಸಿಬಿಐ ಬಳಿ ಪುರಾವೆಗಳಿಲ್ಲ ಎಂಬ ಪತ್ರಿಕಾ ವರದಿ ಹಿಂಪಡೆಯುವಂತೆ ಎಎಸ್‌ಜಿ ಪತ್ರ

ಆನ್‌ಲೈನ್‌ ಮೂಲಕ ನಾಮಪತ್ರ ಸ್ವೀಕರಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಬೇರೆ ವಿಚಾರಗಳೊಂದಿಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಪ. ಬಂಗಾಳ ಸರ್ಕಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಾಮಪತ್ರ ಸಲ್ಲಿಸಲು ಕೇವಲ ಐದು ದಿನಗಳ ಕಾಲಾವಕಾಶ ನೀಡಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಅಲ್ಲದೆ ಹಿಂದೆ ವಿಧಾನಸಭಾ ಚುನಾವಣೆ ನಂತರ ಘಟಿಸಿದ್ದ ಹಿಂಸಾಚಾರ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ನಾಮಪತ್ರ ಸಲ್ಲಿಕೆಗೆ ಕೇವಲ ಐದು ದಿನಗಳ ಕಾಲಾವಕಾಶ ನೀಡಿರುವುದು ಮೇಲ್ನೋಟಕ್ಕೆ ಕಡಿಮೆ ಅವಧಿಯಾಗಿದ್ದು ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸಮಯ ಸಿಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು.  ರಾಜ್ಯ ಚುನಾವಣಾ ಆಯೋಗ ಮುಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಕೂಡ ಪೀಠ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿತು.  ಕಡೆಗೆ ಮುಂದಿನ ವಿಚಾರಣೆ ನಡೆಯಲಿರುವ ಜೂನ್‌ 12ರಂದು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಅರ್ಜಿದಾರರ ಅಹವಾಲುಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಅದು ಸೂಚಿಸಿತು.

Related Stories

No stories found.
Kannada Bar & Bench
kannada.barandbench.com