ಮುಂಬರುವ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲೆಂದು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಚುನಾವಣಾಧಿಕಾರಿ ತಿರುಚಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ತಡೆಹಿಡಿದಿದೆ [ಹೌರಾ ಜಿಲ್ಲಾಧಿಕಾರಿ ಇತರರು ಹಾಗೂ ಕಾಶ್ಮೀರಾ ಬೇಗಂ ಖಾನ್ ಇತರರ ನಡುವಣ ಪ್ರಕರಣ].
ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ಜೂನ್ 21ರಂದು ನೀಡಿದ್ದ ಆದೇಶ ಪ್ರಶ್ನಿಸಿ ಹೌರಾ ಜಿಲ್ಲಾಧಿಕಾರಿ ಹಾಗೂ ಇತರ ಮೂವರು ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಅಪೂರ್ಬಾ ಸಿನ್ಹಾ ರೇ ಈ ಆದೇಶ ನೀಡಿದರು.
"ಇಬ್ಬರೂ ಕಕ್ಷಿದಾರರ ಬಳಿ ತರ್ಕಯೋಗ್ಯ ವಾದಗಳಿರುವುದರಿಂದ, ನಾವು ಎಚ್ಚರಿಕೆಯಿಂದ ಪರಿಗಣಿಸುವ ಅಗತ್ಯವಿದ್ದು ಸಿಬಿಐ 26.6.2023ರವರೆಗೆ ದೋಷಾರೋಪಣೆ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ದೋಷಾರೋಪಣೆ ಮಾಡಲಾದ ಆದೇಶದ ಇತರ ಭಾಗಗಳನ್ನು ಸದ್ಯಕ್ಕೆ ಮುಟ್ಟುವಂತಿಲ್ಲ" ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಅಂತಿಮ ಆದೇಶವನ್ನು ಸೋಮವಾರ ಮಧ್ಯಾಹ್ನ ಪ್ರಕಟಿಸಲಾಗುವುದು ಎಂದು ವಿಭಾಗೀಯ ಪೀಠ ತಿಳಿಸಿದೆ.
ವಿರೋಧ ಪಕ್ಷಗಳ ಇಬ್ಬರು ಅಭ್ಯರ್ಥಿಗಳು (ಪ್ರತಿವಾದಿಗಳು) ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪಂಚಾಯತ್ ಚುನಾವಣಾ ಅಧಿಕಾರಿ ತಿದ್ದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ ಈ ಪ್ರಕರಣ.
ನಾಮಪತ್ರ ಸಲ್ಲಿಕೆ ವೇಳೆ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರೂ ಬಳಿಕ ಅದನ್ನು ಒದಗಿಸಿಲ್ಲ ಎಂದು ಅಧಿಕಾರಿ ಆರೋಪಿಸಿದ್ದರು. ಪರಿಣಾಮ ಅಭ್ಯರ್ಥಿಗಳ ನಾಮಪತ್ರ ರದ್ದುಗೊಂಡಿದ್ದರಿಂದ ಅವರು ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜೂನ್ 21ರಂದು, ನ್ಯಾಯಮೂರ್ತಿ ಅಮೃತ ಸಿನ್ಹಾ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಜೊತೆಗೆ ಪಂಚಾಯತ್ ಚುನಾವಣೆ ನಡೆಯುವ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 7ರೊಳಗೆ ವರದಿ ಸಲ್ಲಿಸುವಂತೆ ಅದು ಸಿಬಿಐಗೆ ಸೂಚಿಸಿತ್ತು.
ಪಂಚಾಯತ್ ಚುನಾವಣಾಧಿಕಾರಿ ಉಲುಬೇರಿಯಾ I ಬ್ಲಾಕ್ ಪರಿಶೀಲಿಸುವ ಪ್ರಕ್ರಿಯೆಯ ವೀಡಿಯೊ ಚಿತ್ರೀಕರಣವನ್ನು ಮರುಪರಿಶೀಲಿಸುವವರೆಗೆ ಸಂರಕ್ಷಿಸಿ ನಿರ್ವಹಿಸುವಂತೆಯೂ ನ್ಯಾಯಾಲಯ ಈ ಸಂದರ್ಭದಲ್ಲಿ ಆದೇಶಿಸಿತ್ತು.
ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಭಾಗೀಯ ಪೀಠ ಪ್ರಕರಣದ ಅಂತಿಮ ಆದೇಶ ನೀಡುವ ಸಾಧ್ಯತೆ ಇದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]