ಭಾರತೀಯರೆಂದು ಪರಿಭಾವಿತ ವಲಸಿಗರ ಹೆಸರೂ ಮತದಾರರ ಪಟ್ಟಿಯಿಂದ ಹೊರಗೆ: ಪ.ಬಂಗಾಳ ಎಸ್ಐಆರ್ ವಿರುದ್ಧ ಸುಪ್ರೀಂಗೆ ಅರ್ಜಿ

ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅರ್ಹರಾಗಿರುವವರ ಪೌರತ್ವ ಅರ್ಜಿಗಳು ಬಾಕಿ ಇರುವುದರಿಂದ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಅರ್ಜಿ ಕೋರಿದೆ.
Supreme Court, West Bengal
Supreme Court, West Bengal
Published on

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ ನಡುವೆಯೇ ಪೌರತ್ವ ತಿದ್ದುಪಡಿ ಕಾಯಿದೆ 2019ರ ಅಡಿಯಲ್ಲಿ ಭಾರತೀಯ ನಾಗರಿಕರೆಂದು ಪರಿಗಣಿಸಲು ಅರ್ಹರಾದ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ ಸೋಮವಾರ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದೆ [ಆತ್ಮದೀಪ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅರ್ಹರಾಗಿರುವ ದಮನಕ್ಕೊಳಗಾದ ಅಲ್ಪಸಂಖ್ಯಾತರೆಂದು ಗುರುತಿಸಲಾದ ವಲಸಿಗರ ಪೌರತ್ವಕ್ಕಾಗಿ ಹಲವಾರು ಅರ್ಜಿಗಳು ಆಡಳಿತಾತ್ಮಕ ವಿಳಂಬದಿಂದಾಗಿ ಬಾಕಿ ಉಳಿದಿವೆ ಎಂದು ಸರ್ಕಾರೇತರ ಸಂಸ್ಥೆ ಆತ್ಮದೀಪ್‌ ಸಲ್ಲಿಸಿರುವ ಅರ್ಜಿ ಹೇಳಿದೆ.

Also Read
ಸಿಎಎ-ಎನ್‌ಆರ್‌ಸಿ ಜಾರಿ ವಿರೋಧಿಸಿ ಪ್ರತಿಭಟನೆ: ಎಂಟು ಮಂದಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಇಂಥದ್ದ ಪರಿಸ್ಥಿತಿ ಎದುರಿಸುತ್ತಿರುವ ಅನೇಕರು 2024ರ ಪೌರತ್ವ ತಿದ್ದುಪಡಿ ನಿಯಮಾವಳಿ ಅಡಿ ರಚಿಸಲಾದ ಆನ್‌ಲೈನ್‌ ವ್ಯವಸ್ಥೆ ಮೂಲಕ ಸೆಕ್ಷನ್‌ 6 ಬಿ ಅಡಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಇನ್ನೂ ಎದುರು ನೋಡುತ್ತಿದ್ದಾರೆ ಎಂದು ಮನವಿ ಹೇಳಿದೆ.

ಇವರಲ್ಲಿ ಬಹುತೇಕರು ಅನೇಕ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದು, 2025ರ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳು ಸೇರಿವೆ. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ ವೇಳೆ ತಾತ್ಕಾಲಿಕವಾಗಿ ಮತದಾರರಾಗಿ ದಾಖಲಿಸಿಕೊಳ್ಳಲು ಅನುವು ಮಾಡಿಕೊಡುವಂತಹ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Also Read
ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ವಾದವನ್ನು ಸಂಕ್ಷಿಪ್ತವಾಗಿ ಆಲಿಸಿತು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಕರುಣಾ ನಂದಿ “ನಾನು ಮುಖ್ಯವಾಗಿ ಬಾಂಗ್ಲಾದೇಶದಿಂದ ಬಂದ ಹಿಂದೂಗಳ ಪರವಾಗಿ, ಹಾಗೆಯೇ ಬೌದ್ಧರು, ಕ್ರೈಸ್ತರು ಮುಂತಾದವರ ಪರವಾಗಿ ಹಾಜರಾಗಿದ್ದೇನೆ. 2014ಕ್ಕಿಂತ ಬಹಳ ಮೊದಲೇ ಭಾರತಕ್ಕೆ ಬಂದಿದ್ದರೂ, ನಮ್ಮ ಕಕ್ಷಿದಾರರಿಗೆ ಸಿಎಎ ಅಡಿಯಲ್ಲಿ ಯಾವುದೇ ರಕ್ಷಣೆ ಇಲ್ಲ. ಬಸುದೇವ ಪ್ರಕರಣದಲ್ಲಿ ನೀಡಿದ ತೀರ್ಪನ್ನೇ ನಾನು ಇಲ್ಲಿ ಕೋರುತ್ತಿದ್ದೇನೆ. ಎಸ್‌ಐಆರ್‌ ವೇಳೆ ಅರ್ಜಿದಾರರನ್ನು ತಾತ್ಕಾಲಿಕವಾಗಿ ಸೇರ್ಪಡೆ ಮಾಡಬೇಕು” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಅವರು ಜೈನ, ಬೌದ್ಧ (CAA ಅಡಿ ಹಿಂಸೆಗೆ ಒಳಗಾದ ಅಲ್ಪಸಂಖ್ಯಾತರು) ಎಂಬ ಆಧಾರದ ಮೇಲೆ ನ್ಯಾಯಾಲಯ ಭೇದ ಮಾಡಲು ಆಗದು. ಪರಿಭಾವಿತ ಪೌರತ್ವ ಎಂಬ ಪರಿಕಲ್ಪನೆಯ ಬಗ್ಗೆ ಪರಿಶೀಲಿಸಬೇಕಿದೆ. ಹಕ್ಕು ಇದ್ದರೂ ಪ್ರತಿಯೊಬ್ಬರ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಲೇಬೇಕು ಎಂದರು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 9ರಂದು ನಡೆಯಲಿದೆ.

Kannada Bar & Bench
kannada.barandbench.com