ಪ. ಬಂಗಾಳ ಎಸ್ಐಆರ್: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನಿಯೋಜನೆಗೆ ಕೋರಿಕೆ, ಇಸಿಐಗೆ ಸುಪ್ರೀಂ ನೋಟಿಸ್

ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
Supreme Court, West Bengal
Supreme Court, West Bengal
Published on

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್‌) ನಿಯೋಜಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ.

ಸ್ಥಳೀಯ ಪೊಲೀಸರನ್ನು ತನ್ನ ನಿಯಂತ್ರಣಕ್ಕೆ ನೀಡದೆ ಹೋದರೆ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಇಸಿಐ ಹೇಳಿದ ಹಿನ್ನೆಲೆಯಲ್ಲಿ ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.

Also Read
ಎಸ್‌ಐಆರ್‌: ಇಡೀ ಪ್ರಕಿಯೆಯನ್ನು ಚುನಾವಣಾ ಆಯೋಗ ಸಮರ್ಥಿಸಬೇಕಿದೆ ಎಂದ ಸುಪ್ರೀಂ ಕೋರ್ಟ್‌

ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಸಿಜೆಐ ಸೂರ್ಯಕಾಂತ್‌ ಹೇಳಿದರು. ರಾಜ್ಯದಲ್ಲಿ ಹಿಂದಿನ ಹಿಂಸಾಚಾರದ ನಿದರ್ಶನಗಳನ್ನು ಎತ್ತಿ ತೋರಿಸುವ ಸನಾತನಿ ಸಂಘವು ಸಲ್ಲಿಸಿದ್ದ ಅರ್ಜಿಯ ಬಗ್ಗೆ  ವಿಚಾರಣೆಯ ಆರಂಭದಲ್ಲಿ ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು. ರಾಜಕೀಯ ವ್ಯಕ್ತಿಗಳು ನ್ಯಾಯಾಲಯವನ್ನು ಪ್ರಚಾರಕ್ಕೆ ವೇದಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ವಿ ಗಿರಿ ಅವರು ಬೂತ್ ಮಟ್ಟದ ಅಧಿಕಾರಿಗಳಿಗೆ ರಕ್ಷಣೆ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಾಗ್ಚಿ ಅವರು, ಅಂತಹ ವಿಚಾರವಾಗಿ ಕೇವಲ ಒಂದು ಪ್ರಕರಣ ಮಾತ್ರ ದಾಖಲಾಗಿದೆ ಎಂದು ಗಮನಸೆಳೆದರು.

" ದಾಖಲೆಯಲ್ಲಿ ಒಂದೇ ಒಂದು ಎಫ್‌ಐಆರ್ ಇದೆ. ಬೇರೇನೂ ಇಲ್ಲ. ಉಳಿದೆಲ್ಲವೂ ಹಿಂದಿನದ್ದರ ಉಲ್ಲೇಖ" ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಸ್ಥಳೀಯ ಪೊಲೀಸರನ್ನು ತಾನು ನಿಯೋಜಿಸಿಕೊಳ್ಳದೆ ಹೋದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಚುನಾವಣಾಧಿಕಾರಿಗಳು ಬೆದರಿಕೆ ಎದುರಿಸುತ್ತಿದ್ದಾರೆ. ಚುನಾವಣಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಘೇರಾವ್ ಹಾಕಲಾಗಿದೆ ಎಂದರು.

ಈ ಹಂತದಲ್ಲಿ ನ್ಯಾಯಮೂರ್ತಿ ಬಾಗ್ಚಿ, ಅಗತ್ಯವಿದ್ದರೆ ರಾಜ್ಯದಿಂದ ಹೆಚ್ಚುವರಿ ಪಡೆಗಳನ್ನು ಕೇಳಿಕೊಳ್ಳಬಹುದು ಎಂದು ಸಲಹೆ ನೀಡಿದರು. ಒಂದೇ ಎಫ್‌ಐಆರ್‌ ಆಧರಿಸಿ ಪೊಲೀಸರನ್ನು ಇಸಿಐ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದರು.

Also Read
ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇಸಿಐ ಮತ್ತು ಕೇಂದ್ರದ ಅಭಿಪ್ರಾಯ ಪಡೆಯುವುದು ಅಗತ್ಯವಿದೆ ಎಂದು ತಿಳಿಸಿ ಸರ್ಕಾರ ಹಾಗೂ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸುವಂತೆ ಆದೇಶಿಸಿದರು.

ಇಸಿಐ ಪರ ವಕೀಲರು “ನಮಗೆ ಅಧಿಕಾರ ಇದೆ, ನಾವು ಕ್ರಮ ಕೈಗೊಳ್ಳುತ್ತೇವೆ” ಎಂದರು. ಆಗ ಸಿಜೆಐ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ ಎಂದರು.

Kannada Bar & Bench
kannada.barandbench.com