ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳದ ಉದ್ದೇಶ, ಕಾರಣಗಳ ಬಗ್ಗೆ ವಿಧೇಯಕದಲ್ಲಿ ಹೇಳಿದ್ದೇನು?

ಬೆಂಗಳೂರಿನ ಎನ್‌ಎಲ್‌ಎಸ್‌ಯುಐ ತನ್ನ ಅಧ್ಯಯನ ವರದಿಯಲ್ಲಿ ಶೇ. 74ರಷ್ಟು ಬುಡಕಟ್ಟು ಸಮುದಾಯ ಅಗೋಚರವಾಗಿದ್ದು, ಅವರ ಸಾಕ್ಷರತೆ ಪ್ರಮಾಣವು ಶೇ. 3ಕ್ಕಿಂತಲೂ ಕಡಿಮೆ ಇದೆ ಎಂದು ಹೇಳಿರುವುದನ್ನು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
Suvarna Soudha, Belagavi
Suvarna Soudha, Belagavi

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ಕರ್ನಾಟಕ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾಯಿ ಅಥವಾ ಹುದ್ದೆಗಳಲ್ಲಿನ ಮೀಸಲಾತಿ) ವಿಧೇಯಕವನ್ನು ಡಿಸೆಂಬರ್‌ 26ರಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮೀಸಲಾತಿಯನ್ನು ಹೆಚ್ಚಿಸಲು ಕಾರಣವಾದ ಉದ್ದೇಶಗಳು ಮತ್ತು ಕಾರಣಗಳ ಬಗ್ಗೆ ವಿಧೇಯಕದಲ್ಲಿ ವಿವರಿಸಲಾಗಿದ್ದು, ಆ ಅಂಶಗಳನ್ನು ಸಂಗ್ರಹವಾಗಿ ಇಲ್ಲಿ ನೀಡಲಾಗಿದೆ.

ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲ ಎಂದು ಸಮುದಾಯದ ಸದಸ್ಯರ ನಿಂತರ ಬೇಡಿಕೆ ಮತ್ತು ಮನವಿ ಹಾಗೂ ನಾಯಕ ವಿದ್ಯಾರ್ಥಿ ಸಂಘವು ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿತ್ತು.

ಮೀಸಲಾತಿ ಹೆಚ್ಚಳ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮನವಿಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಪ್ರಾಯೋಗಿಕ ಜನ್ಯ ದತ್ತಾಂಶ (ಎಂಫಿರಿಕಲ್‌ ಡೇಟಾ) ಸಂಗ್ರಹಿಸಲು ಆಯೋಗ ರಚಿಸಿತ್ತು. ಈ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗವು 2020ರ ಜುಲೈ 2ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಅವುಗಳು ಇಂತಿವೆ:

  • ಮಲ ಸಾಗಿಸುವ ಜಾಡಮಾಲಿಗಳು, ಸಫಾಯಿ ಕರ್ಮಚಾರಿಗಳು, ದೇವದಾಸಿಯರು, ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳನ್ನು ವಿಶೇಷ ದುರ್ಬಲ ಬುಡಕಟ್ಟು ಸಮುದಾಯಗಳನ್ನು ಒಳಗೊಂಡ ಅನುಸೂಚಿತ ಜಾತಿ ಮತ್ತು ಪಂಗಡಗಳಲ್ಲಿನ ಅನೇಕ ಜಾತಿ ಮತ್ತು ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಗೆ ಸಾಕ್ಷ್ಯ ದೊರೆತಿದೆ.

  • ಪಶ್ಚಿಮ ಘಟ್ಟ, ಒಣಭೂಮಿ ಭಾಗ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಹರಡಿರುವ ಪ್ರದೇಶಗಳಲ್ಲಿ ವಾಸಿಸುವ ದಕ್ಕಲಿಗರು, ಧೋಲಿಬಿಲ್‌, ಮಲೇರು, ಸೋಲಿಗರು ಮುಂತಾದ ಕೆಲವು ಸಮುದಾಯಗಳಲ್ಲಿ ಅಂಥ ಹಿಂದುಳಿದಿರುವಿಕೆಯು ನಿಜವಾಗಿಯೂ ಹೆಚ್ಚಾಗಿದೆ. ಈ ಸಮುದಾಯಗಳ ಪ್ರಯೋಜನ ಸಾಕಷ್ಟು ದೊರೆತಿಲ್ಲ.

  • ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಇರುವ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಉದ್ಯೋಗದಲ್ಲಿ ಅವರಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದ್ದು, ಹಿಂದುಳಿದಿರುವಿಕೆಯಿಂದ ಹೊರಬರಲು ಈ ಸಮುದಾಯದ ಜನರು ಕಷ್ಟಕರ ಪ್ರಯತ್ನ ನಡೆಸುತ್ತಿದ್ದಾರೆ.

  • ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಹೋಲಿಕೆ ಮಾಡಿದಲ್ಲಿ ಅವರ ಭೂ ಹಿಡುವಳಿಗಳು ಸಮ ಪ್ರಮಾಣದಲ್ಲಿ ಇಲ್ಲ. ಬದಲಿಗೆ ಅತ್ಯಂತ ಕಡಿಮೆ ಇವೆ. ಇದು ಆ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ದ್ಯೋತಕವಾಗಿದೆ.

  • ವಿಸ್ತೃತ ಅಧ್ಯಯನ ಮತ್ತು ವಿಶ್ಲೇಷಣೆಯ ಆಧಾರದಲ್ಲಿ ಅನುಸೂಚಿತ ಜಾತಿಗಳಿಗೆ ಶೇ. 17 ಮತ್ತು ಅನುಸೂಚಿತ ಪಂಗಡಗಳಿಗೆ ಶೇ. 7ರಷ್ಟು ಮೀಸಲಾತಿಯು ಅನುಕ್ರಮವಾಗಿ ಹೆಚ್ಚಳವಾಗಲಿದೆ ಎಂದು ವಿವರಿಸಲಾಗಿದೆ.

  • ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಆಯೋಗದ ವರದಿ ಅನುಷ್ಠಾನ ಅವಲೋಕಿಸಲು ನ್ಯಾ. ಸುಭಾಷ್‌ ಅಡಿ ಮತ್ತು ಇತರರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ಸರ್ಕಾರ ನೇಮಿಸಿದ್ದು, ಈ ಸಮಿತಿಯು 2022ರ ಅಕ್ಟೋಬರ್‌ 7ರಂದು ವರದಿ ಸಲ್ಲಿಸಿತ್ತು.

  • ಬೆಂಗಳೂರಿನ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯವು ತನ್ನ ಅಧ್ಯಯನ ವರದಿಯಲ್ಲಿ ಶೇ. 74ರಷ್ಟು ಬುಡಕಟ್ಟು ಸಮುದಾಯ ಅಗೋಚರವಾಗಿದ್ದು, ಅವರ ಸಾಕ್ಷರತೆ ಪ್ರಮಾಣವು ಶೇ. 3ಕ್ಕಿಂತಲೂ ಕಡಿಮೆ ಇದೆ ಎಂದು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಬೇರೆ ರಾಜ್ಯಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳಲ್ಲಿ ಬರುವ ಜಾತಿಗಳ ಸಂಖ್ಯೆಯನ್ನು ಕಡಿಮೆ ಮಟ್ಟದಲ್ಲಿ ಅಧಿಸೂಚನೆ ಮಾಡಿದ್ದರೂ ಅವುಗಳ ಮೀಸಲಾತಿ ಪ್ರಮಾಣವು ಕರ್ನಾಟಕಕ್ಕಿಂತ ಹೆಚ್ಚಿದೆ. ಇದಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನು ಉದಾಹರಣೆಯನ್ನಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಅನುಸೂಚಿತ ಜಾತಿ ಮತ್ತು ಪಂಗಡಗಳ ಪೈಕಿ ಅತ್ಯಂತ ವಂಚಿತ ವರ್ಗಗಳಿಗೆ ಮೀಸಲಾತಿ ಅಗತ್ಯವಿದ್ದು, ರಾಜ್ಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಮತ್ತು ಸಂಘಟಿತರಾಗಲು ಕಷ್ಟಕರವಾಗಿರುವ ಅಂಥ ಜನಸಂಖ್ಯೆಯ ಭಾಗವು ಶೇ. 74ರಷ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್‌ ಅನ್ನು ಕ್ಲಿಕ್ಕಿಸಿ.

Attachment
PDF
SC ST Reservation Bill.pdf
Preview

Related Stories

No stories found.
Kannada Bar & Bench
kannada.barandbench.com