ಕಾನೂನಾತ್ಮಕ ವಿಚಾರಗಳ ಕುರಿತಂತೆ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯ ಪತ್ರʼ ಹೇಳುವುದೇನು?

ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಪಕ್ಷಾಂತರಿಗಳ ಅನರ್ಹತೆ, ಶೇ.50 ಮೀಸಲಾತಿ ಮಿತಿ ತೆಗೆದುಹಾಕುವುದು, ಸಲಿಂಗ ಜೋಡಿಯ ಸಿವಿಲ್ ಯೂನಿಯನ್‌ಗೆ ಅವಕಾಶ, ಕೂಡಲೇ ಮಹಿಳಾ ಮೀಸಲಾತಿ ಜಾರಿಯಂತಹ ಗಮನಾರ್ಹ ವಿಚಾರಗಳು ʼನ್ಯಾಯ ಪತ್ರʼದಲ್ಲಿವೆ.
ಕಾನೂನಾತ್ಮಕ ವಿಚಾರಗಳ ಕುರಿತಂತೆ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯ ಪತ್ರʼ ಹೇಳುವುದೇನು?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಒಂದು ರಾಷ್ಟ್ರ ಒಂದು ಚುನಾವಣೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಂತಹ ಕಾನೂನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದರೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಾದ ʼನ್ಯಾಯ ಪತ್ರʼದಲ್ಲಿ ಅನ್ಯಾಯ ಮತ್ತು ದಬ್ಬಾಳಿಕೆಯ ಕಾನೂನುಗಳ ವಿರುದ್ಧ ಹೋರಾಡುವುದಾಗಿ ಘೋಷಿಸಿದೆ.

ಮುಖ್ಯವಾಗಿ , ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸುವುದು, ದೆಹಲಿ ಸರ್ಕಾರದ ಮಂತ್ರಿ ಮಂಡಳದ ಸಹಾಯ ಮತ್ತು ಸಲಹೆ ಮೇರೆಗೆ ಲೆಫ್ಟಿನೆಂಟ್‌ ಗವರ್ನರ್‌ ಕಾರ್ಯ ನಿರ್ವಹಣೆ ಮಾಡುವಂತೆ ಕಾನೂನು ರೂಪಿಸುವುದು, ಅಲ್ಪಸಂಖ್ಯಾತರಿಗೆ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನುಗಳ ಆಯ್ಕೆಯ ಸ್ವಾತಂತ್ರ್ಯನೀಡುವುದು, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್‌ಪಿ ಘೋಷಿಸುವ ಕಾನೂನು ಖಾತರಿ ಪಡಿಸುವುದು, ಮೀಸಲಾತಿಗೆ ಪ್ರಸಕ್ತ ಇರುವ ಶೇ.50 ಮಿತಿಯನ್ನು ತೆಗೆದುಹಾಕುವುದು, ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ತರುವುದು ಹಾಗೂ ಅಂತರ್ಜಾಲ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಂತಹ ವಿಚಾರಗಳನ್ನು ಕಾಂಗ್ರೆಸ್ ತನ್ನ ಘೋಷಣಾ ಪತ್ರದಲ್ಲಿ ಪ್ರಸ್ತಾಪಿಸಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ರಾಜ್ಯದ ಸ್ಥಾನಮಾನವನ್ನು ತೆಗೆದು ಹಾಕಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎನ್ನುವ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತ್ತು. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ತಾನು ಅಧಿಕಾರಕ್ಕೆ ಬಂದ ಕೂಡಲೇ ಮರುಸ್ಥಾಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಅಂತೆಯೇ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಕಾಯಿದೆಗೆ ತಿದ್ದುಪಡಿ ತಂದು ಮೂರು ಮೀಸಲು ವಿಚಾರಗಳನ್ನು ಹೊರತುಪಡಿಸಿ ಸೇವೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ  ಲೆ. ಗವರ್ನರ್‌ ಅವರು  ದೆಹಲಿ ಸರ್ಕಾರದ ಮಂತ್ರಿ ಮಂಡಳದ ಸಹಾಯ ಮತ್ತು ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವಂತೆ ಮಾಡುವುದಾಗಿ ತಿಳಿಸಿದೆ. ಈ ತಿದ್ದುಪಡಿ ಇಲ್ಲದಿರುವುದು ಲೆ. ಗವರ್ನರ್‌ ಮತ್ತು ದೆಹಲಿ ಸರ್ಕಾರದ ಅಧಿಕಾರ ಸಂಘರ್ಷಕ್ಕೆ ಕಾರಣವಾಗಿದೆ. ಭೂಮಿ, ಪೊಲೀಸ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಭಾರತೀಯ ಆಡಳಿತ ಸೇವೆ (ಐಎಎಸ್) ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ಸೇವೆಗಳು ಹಾಗೂ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣ ಇದೆ ಎಂದು ಸುಪ್ರೀಂ ಕೋರ್ಟ್‌ ಕೆಲ ತಿಂಗಳುಗಳ ಹಿಂದೆ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು.

Also Read
ಬಿಜೆಪಿ ಪ್ರಣಾಳಿಕೆಯಲ್ಲಿ ಸಿಎಎ, ಏಕರೂಪ ನಾಗರಿಕ ಸಂಹಿತೆ, ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯ ಸಂಕಲ್ಪ

ಇನ್ನು ಪಕ್ಷಾಂತರ ಮಾಡುವ ಶಾಸಕರು ಇಲ್ಲವೇ ಸಂಸದರನ್ನು ಸ್ವಯಂ ಚಾಲಿತವಾಗಿ ಅನರ್ಹಗೊಳಿಸಲು ಅನುವಾಗುವಂತೆ ಸಂವಿಧಾನದ ಹತ್ತನೇ ಪರಿಚ್ಛೇದಕ್ಕೆ ತಿದ್ದಪಡಿ ಮಾಡುವುದಾಗಿ ಕಾಂಗ್ರೆಸ್‌ ತಿಳಿಸಿದೆ. ಇದೇ ವೇಳೆ 'ಒಂದು ರಾಷ್ಟ್ರ ಒಂದು ಚುನಾವಣೆ' ಕಲ್ಪನೆಯನ್ನು ವಿರೋಧಿಸುವುದಾಗಿ ಅದು ಹೇಳಿದೆ.

ಅಗ್ನಿಪಥ ಯೋಜನೆ ರದ್ದತಿ ಮಾಡುವುದು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಮೀಸಲಾತಿಗೆ ಪ್ರಸಕ್ತ ಇರುವ ಶೇಕಡಾ 50 ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ ತರುವುದನ್ನು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಪ್ರಸ್ತಾಪಿಸಿದೆ.

ವಿವಿಪ್ಯಾಟ್‌ಗಳನ್ನು ಇವಿಎಂ ಮತಗಳೊಂದಿಗೆ ತಾಳೆ ಹಾಕಬೇಕು ಎಂದು ಕೋರಿ ಸಲ್ಲಿಸಿರುವ ವಿವಿಧ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವಂತೆಯೇ ಇವಿಎಂಗಳ ದಕ್ಷತೆ ಮತ್ತು ಮತಪತ್ರದ ಪಾರದರ್ಶಕತೆ ಸಂಯೋಜಿಸಲು ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ಪಕ್ಷ ಘೋಷಿಸಿದೆ. ಇವಿಎಂ ಮತಗಳು- ವಿವಿಪ್ಯಾಟ್‌ ಚೀಟಿಗಳ ತುಲನೆಗೆ ಅದು ಒತ್ತು ನೀಡಿದೆ.

ಪ್ರತಿಯೊಬ್ಬ ನಾಗರಿಕರಂತೆ, ಅಲ್ಪಸಂಖ್ಯಾತರು ಉಡುಗೆ, ಆಹಾರದ ಆಯ್ಕೆ, ಭಾಷೆ ಹಾಗೂ ವೈಯಕ್ತಿಕ ಕಾನೂನಿನ ಸ್ವಾತಂತ್ರ್ಯ ಹೊಂದಿರುವಂತೆ ತಾನು ನೋಡಿಕೊಳ್ಳುವುದಾಗಿ ಕಾಂಗ್ರೆಸ್ ಘೋಷಿಸಿದೆ. ತಾನು ವೈಯಕ್ತಿಕ ಕಾನೂನುಗಳ ಸುಧಾರಣೆಯನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಅಂತಹ ಸುಧಾರಣೆ ಕಾರ್ಯ ಸಂಬಂಧಿತ ಸಮುದಾಯಗಳ ಭಾಗವಹಿಸುವಿಕೆ ಮತ್ತು ಸಮ್ಮತಿ ಮೇರೆಗೆ ನಡೆಯಬೇಕು ಎಂದು ಹೇಳಿದೆ.

ವೈಯಕ್ತಿಕ ಆಯ್ಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿರುವ ಕಾಂಗ್ರೆಸ್‌  ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಜನರ ಆಹಾರ, ಉಡುಗೆ, ಪ್ರೀತಿ- ಪ್ರೇಮ, ವಿವಾಹ ಪ್ರಯಾಣದ ವಿಚಾರಗಳ್ಲಲಿ ಮಧ್ಯಪ್ರವೇಶಿಸುವುದಿಲ್ಲ, ವೈಯಕ್ತಿಕ ಸ್ವಾತಂತ್ರ್ಯದಲ್ಲಿ ವಿನಾಕಾರಣ ಹಸ್ತಕ್ಷೇಪ ಮಾಡುವುದನ್ನು ತಡೆಯಲಾಗುವುದು ಎಂದಿದೆ. 

“ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಈಗಿರುವ ಕಾನೂನು ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ  ನಕಾರ ವ್ಯಕ್ತಪಡಿಸಿ ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್‌ ಘೋಷಿಸಿತ್ತು. ವ್ಯಾಪಕ ಸಮಾಲೋಚನೆಯ ನಂತರ LGBTQIA+ ಜೋಡಿಗಳ ಸಿವಿಲ್‌ ಯೂನಿಯನ್‌ಗೆ ಮಾನ್ಯತೆ ಒದಗಿಸಿಕೊಡಲು ಕಾನೂನು ತರುವುದಾಗಿ ಕಾಂಗ್ರೆಸ್‌ ಚುನಾವಣಾ ಪತ್ರದಲ್ಲಿ ಘೋಷಿಸಿದೆ.

ಬಿಜೆಪಿಯದ್ದು ರೈತ ವಿರೋಧಿ ನೀತಿ ಎಂದಿರುವ ಕಾಂಗ್ರೆಸ್‌ ಪ್ರಣಾಳಿಕೆ, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್‌ಪಿ ಘೋಷಿಸುವ ಕಾನೂನು ಖಾತರಿಯನ್ನು ಒದಗಿಸುವುದಾಗಿ ತಿಳಿಸಿದೆ.

ಮಾನಹಾನಿ ವಿಚಾರಗಳನ್ನು ನಿರಪರಾಧೀಕರಣಗೊಳಿಸುವುದಾಗಿ ತಿಳಿಸಿರುವ ಅದು ಕಾನೂನಿನ ಮೂಲಕ ನಾಗರಿಕ ರೀತಿಯಲ್ಲಿ ತ್ವರಿತ ಪರಿಹಾರ ಒದಗಿಸುವುದಾಗಿ ತಿಳಿಸಿದೆ.

ತಾನು ಅಧಿಕಾರದ ಚುಕ್ಕಾಣಿ ಹಿಡಿದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸರ್ವೋಚ್ಚ ನ್ಯಾಯಾಲಯವನ್ನು ಸಾಂವಿಧಾನಿಕ ನ್ಯಾಯಾಲಯ ಹಾಗೂ ಮೇಲ್ಮನವಿ ನ್ಯಾಯಾಲಯವಾಗಿ ವಿಭಾಗಿಸುವುದಾಗಿ ಕಾಂಗ್ರೆಸ್‌ ಪ್ರಕಟಿಸಿದೆ. ಏಳು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಾಂವಿಧಾನಿಕ ನ್ಯಾಯಾಲಯ ಸಂವಿಧಾನದ ವ್ಯಾಖ್ಯಾನವನ್ನು ಒಳಗೊಂಡಿರುವ ಪ್ರಕರಣಗಳು, ಕಾನೂನು ಪ್ರಾಮುಖ್ಯತೆ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಲಿದೆ. ಮೇಲ್ಮನವಿ ನ್ಯಾಯಾಲಯ ಮೇಲ್ಮನವಿಗಳಿಗೆ ಸಂಬಂಧಿಸಿದ ಅಂತಿಮ ನ್ಯಾಯಾಲಯವಾಗಲಿದ್ದು ತಲಾ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಈ ಪೀಠಗಳು ಹೈಕೋರ್ಟ್‌ಗಳು ಮತ್ತು ರಾಷ್ಟ್ರೀಯ ನ್ಯಾಯಮಂಡಳಿ ಪ್ರಕರಣಗಳ ಮೇಲ್ಮನವಿಯನ್ನು ಆಲಿಸಲಿವೆ ಎಂದು ಪಕ್ಷ ತಿಳಿಸಿದೆ. ಜೊತೆಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ರಾಷ್ಟ್ರೀಯ ನ್ಯಾಯಾಂಗ ಸಮಿತಿ ರಚಿಸಲಾಗುವುದು ಎಂದು ಅದು ಆಶ್ವಾಸನೆ ನೀಡಿದೆ.

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಅಸಾಧಾರಣ ಸಂದರ್ಭದಲ್ಲಷ್ಟೇ ಜೈಲಿಗೆ ಕಳಿಸುವಂತಹ ಕಾನೂನು ರೂಪಿಸಲಾಗುವುದು ಎಂದಿರುವ ಪಕ್ಷ ಪೊಲೀಸರು, ತನಿಖಾ ಸಂಸ್ಥೆಗಳು, ಗೂಢಚರ್ಯ ಸಂಸ್ಥೆಗಳು ಸ್ವಾಯತ್ತ ಹಾಗೂ ಕಾನೂನು ಪ್ರಕಾರ ಕೆಲಸ ಮಾಡುವಂತಹ ಭರವಸೆ ನೀಡುವುದಾಗಿ ಹೇಳಿದೆ.

ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT), ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (GSTAT) ಮತ್ತು ಕಸ್ಟಮ್ಸ್ ಮೇಲ್ಮನವಿ ನ್ಯಾಯಮಂಡಳಿಗಳು (CESTAT) ಯಾವುದೇ ಹಸ್ತಕ್ಷೇಪವಿಲ್ಲದ ಸ್ವಾಯತ್ತ ನ್ಯಾಯಾಂಗ ಸಂಸ್ಥೆಗಳನ್ನಾಗಿ ರೂಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ತಾನು ಈ ಹಿಂದೆ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯಿದೆಗೆ (ಆರ್‌ಟಿಇ) ತಿದ್ದುಪಡಿ ತಂದು ಒಂದರಿಂದ ಹನ್ನೆರಡನೇ ತರಗತಿಯವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವುದಾಗಿ ಪಕ್ಷ ಘೋಷಿಸಿದೆ. ವಿರೋಧ ವ್ಯಕ್ತವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳೊಂದಿಗೆ ಸಮಾಲೋಚಿಸಿ ಮರುಪರಿಶೀಲಿಸಲಾಗುವುದು ಎಂದು ಸಹ ಹೇಳಿದೆ.  

ಇದೇ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 15(5) ನೇ ವಿಧಿಗೆ ತಿದ್ದುಪಡಿ ತರುವುದಾಗಿ ಅದು ಘೋಷಿಸಿದೆ.

ಬಿಜೆಪಿ ಜಾರಿಗೆ ತಂದಿರುವ ಸಂವಿಧಾನದ (106ನೇ) ತಿದ್ದುಪಡಿ ಕಾಯಿದೆ ಮಹಿಳೆಯರಿಗೆ ಮಾಡಿದ ಮಹಾಮೋಸ ಎಂದಿರುವ ಕಾಂಗ್ರೆಸ್‌ ತಾನು ಅಧಿಕಾರಕ್ಕೆ ಬಂದರೆ 2029ರ ಬದಲಿಗೆ ಕೂಡಲೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ತರುವುದಾಗಿ ಆಶ್ವಾಸನೆ ನೀಡಿದೆ. ಜೊತೆಗೆ 2029 ರಲ್ಲಿ ಚುನಾಯಿತರಾಗುವ ಲೋಕಸಭೆಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯೂ ಅನ್ವಯವಾಗಲಿದೆ ಎಂದು ಅದು ಹೇಳಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯಿದೆ ಮತ್ತು ಕೌಟುಂಬಿಕ ಹಿಂಸಾಚಾರ ಕಾಯಿದೆ, 2005ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಅದು ಹೇಳಿದೆ.

ದೂರಸಂಪರ್ಕ ಕಾಯಿದೆ, 2023ನ್ನು ಪರಿಶೀಲಿಸುವುದಾಗಿ ತಿಳಿಸಿರುವ ಪಕ್ಷವು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ನಿಬಂಧನೆಗಳನ್ನು ತೆಗೆದುಹಾಕುವುದಾಗಿ ಪ್ರಕಟಿಸಿದೆ.

ಮಾಧ್ಯಮಗಳ ಸ್ವ ನಿಯಂತ್ರಣ, ಪತ್ರಿಕಾ ಸ್ವಾತಂತ್ರ್ಯ ರಕ್ಷಣೆ ಹಾಗೂ ಸಂಪಾದಕೀಯ ಸ್ವಾತಂತ್ರ್ಯ ಎತ್ತಿ ಹಿಡಿಯಲು ಮತ್ತು ಸರ್ಕಾರದ ಮಧ್ಯಪ್ರವೇಶ ತಡೆಯುವುದಕ್ಕಾಗಿ ತಾನು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕಾಯಿದೆ- 1978ಕ್ಕೆ ತಿದ್ದುಪಡಿ ತರುವುದಾಗಿ ಹೇಳಿದೆ. ಜೊತೆಗೆ ಇದೇ ಕಾಯಿದೆಗೆ ಮತ್ತೊಂದು ತಿದ್ದುಪಡಿ ಮಾಡಿ ಸುಳ್ಳು ಸುದ್ದಿ ಮತ್ತು ಪಾವತಿ ಸುದ್ದಿಯನ್ನು ನಿಗ್ರಹಿಸುವುದಾಗಿ ಅದು ತಿಳಿಸಿದೆ.

ಪ್ರಸಾರ ಸೇವೆ ನಿಯಂತ್ರಣ ಮಸೂದೆ 2023, ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ ಕಾಯಿದೆ, 2023, ಪತ್ರಿಕೆ ಮತ್ತು ನಿಯತಕಾಲಿಕಗಳು ನೋಂದಣಿ ಕಾಯಿದೆ 2023ರ ಮೂಲಕ ಸರ್ಕಾರಕ್ಕೆ ನೀಡಿರುವ ಹೆಚ್ಚಿನ ಸೆನ್ಸಾರ್‌ಶಿಪ್‌ ಅಧಿಕಾರವನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದೆ.

ಶೌಚಗುಂಡಿ ಹಾಗೂ ಒಳಚರಂಡಿ ಸ್ವಚ್ಚತೆಗೆ ಮಾನವ ಬಳಕೆಯನ್ನು ತಡೆಯುವ ಸಲುವಾಗಿ ಮಲ ಹೊರುವ ಉದ್ಯೋಗ ನಿಷೇಧ ಮತ್ತು ಮಲ ಹೊರುವವರ ಪುನರ್‌ವಸತಿ ಕಾಯಿದೆ- 2013ನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಪ್ರಣಾಳಿಕೆ ತಿಳಿಸಿದೆ.

ಅಂಗವೈಕಲ್ಯ, ಬಲಹೀನತೆ ಹಾಗೂ ಲೈಂಗಿಕ ದೃಷ್ಟಿಕೋನದ ಆಧಾರದಲ್ಲಿ ನಡೆಯುವ ತಾರತಮ್ಯ ನಿಷೇಧಿಸುವುದಕ್ಕಾಗಿ ಸಂವಿಧಾನದ 15 ಮತ್ತು 16ನೇ ವಿಧಿಗಳನ್ನು ಹಿಗ್ಗಿಸುವುದಾಗಿ ಭರವಸೆ ನೀಡಿದೆ.

ಅಂತರ್ಜಾಲವನ್ನು ಪ್ರಭುತ್ವವು ಮನಸೋ ಇಚ್ಛೆಯಿಂದ ಮತ್ತು ಆಗಿಂದಾಗ್ಗೆ ತಡೆ ಹಿಡಿಯುವುದನ್ನು ನಿಗ್ರಹಿಸುವುದಕ್ಕಾಗಿ‌ ಮತ್ತು ಅಂತರ್ಜಾಲ ಸ್ವಾತಂತ್ರ್ಯ ರಕ್ಷಣೆಗಾಗಿ ಕಾಯಿದೆ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ ಪರಿಶೀಲನೆ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ವಿವಿಧ ಭಾಷೆಗಳನ್ನು ಸೇರ್ಪಡೆ ಮಾಡಬೇಕೆಂಬ ಬಹು ಹಿಂದಿನ ಬೇಡಿಕೆಯ ಈಡೇರಿಕೆ, ಭೂ ಸೀಲಿಂಗ್ ಕಾಯಿದೆಯಡಿ ಬಡವರಿಗೆ ಸರ್ಕಾರಿ ಭೂಮಿ ಮತ್ತು ಹೆಚ್ಚುವರಿ ಭೂಮಿ ವಿತರಿಸುವ ಬಗ್ಗೆ ನಿಗಾ ವಹಿಸಲು ಪ್ರಾಧಿಕಾರ ರಚನೆ, ನ್ಯಾ. ಲೋಧಾ ಸಮಿತಿ ಶಿಫಾರಸಿನ ಅನುಗುಣವಾಗಿ ಕ್ರೀಡಾ ಸಂಸ್ಥೆಗಳ ರಚನೆಯಂತಹ ವಿಚಾರಗಳನ್ನು ಕಾಂಗ್ರೆಸ್‌ ಪ್ರಸ್ತಾಪಿಸಿದೆ.

Related Stories

No stories found.
Kannada Bar & Bench
kannada.barandbench.com