
ಕೆಲ ತಿಂಗಳುಗಳ ಹಿಂದೆ ನಿಧನರಾದ ಉದ್ಯಮ ಲೋಕದ ದಂತಕತೆ ರತನ್ ಟಾಟಾ ಅವರು ತಮ್ಮ ಉಯಿಲಿನಲ್ಲಿ ನಿರ್ದಿಷ್ಟವಾಗಿ ವಿತರಿಸದೆ ಇರುವ ಅವರ ಒಡೆತನದಲ್ಲಿರುವ ಪಟ್ಟಿ ಮಾಡಿದ ಹಾಗೂ ಪಟ್ಟಿ ಮಾಡದೇ ಇರುವ ಎರಡೂ ಬಗೆಯ ಷೇರುಗಳನ್ನು ರತನ್ ಟಾಟಾ ದತ್ತಿ ಪ್ರತಿಷ್ಠಾನ ಮತ್ತು ರತನ್ ಟಾಟಾ ದತ್ತಿ ಟ್ರಸ್ಟ್ ಸಮಾನವಾಗಿ ಪಡೆಯಬೇಕು ಎಂದು ಬಾಂಬೆ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಶಿರೀನ್ ಜಮ್‌ಶೇಟ್‌ಜೀ ಜೀಜೀಭಾಯ್ ಮತ್ತಿತರರು ಹಾಗೂ ಜಮಶೇಟ್ ಮೆಹ್ಲೀ ಪೊಂಚಾ ಇನ್ನಿತರರ ನಡುವಣ ಪ್ರಕರಣ].
ದಿವಂಗತ ರತನ್ ಅವರ ಉಯಿಲಿನ ಮತ್ತು ಅವುಗಳ ಕೋಡಿಸಿಲ್‌ಗಳ (ವಿಲ್‌ಗೆ ಮಾರ್ಪಡಿಸುವ ಅಥವಾ ಪೂರಕಗೊಳಿಸುವ ಅನುಬಂಧಗಳು) ಕಾನೂನು ಸಿಂಧುತ್ವವನ್ನು ನಿರ್ಧರಿಸಲು ನಡೆದ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ.
ವಿಲ್‌ನ ನಿರ್ವಾಹಕರು ಸಲ್ಲಿಸಿದ್ದ ಪ್ರೊಬೇಟ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಮನೀಶ್ ಪಿತಾಳೆ ಈ ತೀರ್ಪು ನೀಡಿದರು. ವಿಲ್‌ನಲ್ಲಿ ನಿರ್ದಿಷ್ಟವಾಗಿ ಹೆಸರಿಸದೆ ಇರುವ ಷೇರುಗಳು ವಿಲ್‌ನಿಂದ ಹೊರತಾದ ಆಸ್ತಿಯ ಆಂಶಿಕ ಭಾಗವಾಗಿದ್ದು, ಟಾಟಾ ಅವರು ಸ್ಥಾಪಿಸಿದ ಎರಡು ದತ್ತಿ ಸಂಸ್ಥೆಗಳ ನಡುವೆ ಸಮಾನವಾಗಿ ವಿಂಗಡಿಸಬೇಕೆಂದು ನ್ಯಾಯಾಲಯ ಹೇಳಿದೆ.
ಫೆಬ್ರವರಿ 23, 2022 ರಂದು ಟಾಟಾ ಅವರ ವಿಲ್‌ನ ಕೆಲವು ನಿಬಂಧನೆಗಳನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುದರ ಕುರಿತು ವಿಲ್‌ನ ನಿರ್ವಾಹಕರು ನ್ಯಾಯಾಲಯದ ನಿರ್ದೇಶನವನ್ನು ಕೋರಿದ ನಂತರ ವಿಚಾರಣೆ ಪ್ರಾರಂಭವಾಗಿತ್ತು. ನಂತರ ಇದನ್ನು ನಾಲ್ಕು ಕೋಡಿಸಿಲ್‌ಗಳೆಂದು ತಿದ್ದುಪಡಿ ಮಾಡಲಾಯಿತು.
ಮೂಲ ವಿಲ್‌ನಲ್ಲಿ ಹೆಸರಿಸದ ಆದರೆ ನಂತರ ಡಿಸೆಂಬರ್ 22, 2023 ರಂದು ಮಾಡಿದ ತಿದ್ದುಪಡಿಯಲ್ಲಿ ಸೇರಿಸಲಾದ ಷೇರುಗಳನ್ನು ಯಾರಿಗೆ ನೀಡಬೇಕು ಎಂಬುದು ನ್ಯಾಯಾಲಯದ ಮುಂದಿದ್ದ ಮುಖ್ಯ ಪ್ರಶ್ನೆಯಾಗಿತ್ತು.