ಕಾವೇರಿ ಕಾಲಿಂಗ್‌ಗೆ ಅನುಮೋದನೆ ನೀಡಿಲ್ಲ ಎಂದು ರಾಜ್ಯ ಸರ್ಕಾರ ಏಕೆ ಹೇಳುತ್ತಿಲ್ಲ? ಹೈಕೋರ್ಟ್‌ ಪ್ರಶ್ನೆ

ರಾಜ್ಯ ಸರ್ಕಾರಕ್ಕೆ ಪ್ರಕರಣದಿಂದ ಕಳಂಕರಹಿತವಾಗಿ ಹೊರಬರಲು ಮತ್ತೊಂದು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
Sadhguru Jaggi Vasudev, Cauvery calling, Karnataka High Court
Sadhguru Jaggi Vasudev, Cauvery calling, Karnataka High Court

ಇಶಾ ಫೌಂಡೇಶನ್‌ನ ಕಾವೇರಿ ಕಾಲಿಂಗ್‌ ರಾಜ್ಯ ಸರ್ಕಾರದ ಯೋಜನೆಯೋ ಇಲ್ಲವೋ ಎನ್ನುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಯೋಜನೆಯನ್ನು ರಾಜ್ಯ ಸರ್ಕಾರ ಬೆಂಬಲಿಸಿಲ್ಲ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ಅಧಿಸೂಚನೆ ಹೊರಡಿಸುವ ಇಚ್ಛೆ ಹೊಂದಿದೆಯೇ ಎಂದು ಕಳೆದ ವಾರ ಮೌಖಿಕವಾಗಿ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿತ್ತು.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತು ಬದ್ಧ ಆದೇಶ ಹೊರಡಿಸಿದೆ. ಫೆಬ್ರುವರಿ 2ಕ್ಕೆ ಪ್ರಕರಣ ಮುಂದೂಡಲಾಗಿದೆ.

ಕಾವೇರಿ ಕಾಲಿಂಗ್‌ ಯೋಜನೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸದಂತೆ ಇಶಾ ಫೌಂಡೇಶನ್‌ಗೆ ಮಧ್ಯಂತರ ಆದೇಶ ನೀಡುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಸಂವಿಧಾನದ 12ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಫೌಂಡೇಶನ್‌ ರಾಜ್ಯದ ಅರ್ಥವ್ಯಾಪ್ತಿಗೆ ಒಳಪಡದೇ ಇರುವುದರಿಂದ ಅದು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದಲ್ಲಿ ರಾಜ್ಯ ಸರ್ಕಾರವು ಸಮಂಜಸವಾದ ನಿಲುವು ಕೈಗೊಳ್ಳದೇ ಇರುವುದರಿಂದ ಅಂತಿಮ ವಿಚಾರಣೆಗೆ ಪ್ರಕರಣವನ್ನು ಮುಂದೂಡಲಾಗಿದೆ ಎಂದು ಪೀಠ ಹೇಳಿದೆ.

“ಪ್ರಕರಣದಿಂದ ಕಳಂಕರಹಿತವಾಗಿ ಹೊರಬರುವ ಸಂಬಂಧ ರಾಜ್ಯ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡುವುದಾಗಿ ನ್ಯಾಯಾಲಯ” ಹೇಳಿದ್ದು, ಜನವರಿ 30ರ ಒಳಗೆ ಪ್ರತಿಕ್ರಿಯೆ ದಾಖಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.

ರಾಜ್ಯ ಸರ್ಕಾರದ ಅಲಕ್ಷ್ಯದಿಂದಾಗಿ ನ್ಯಾಯಾಲಯದ ಸಾಕಷ್ಟು ಸಮಯ ವ್ಯಯಿಸಲಾಗಿದೆ. “ಸಣ್ಣ ಪ್ರಕರಣಕ್ಕಾಗಿ ಸಾಕಷ್ಟು ಸಮಯ ವ್ಯಯಿಸಲಾಗಿದೆ… ಯೋಜನೆಗೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದರೆ ನಿಮಗೆ ಕಷ್ಟವೇನು… ರಾಜ್ಯ ಸರ್ಕಾರದ ಹೆಸರಿನಲ್ಲಿ ಸಾರ್ವಜನಿಕರಿಂದ ಅವರು ಹಣ ಸಂಗ್ರಹಿಸದಂತಾಗುತ್ತದೆ ಎಂದೇ?” ಎಂದು ಪೀಠ ಕೇಳಿತು.

ಮುಂದುವರೆದು, “ಕಾವೇರಿ ಕಾಲಿಂಗ್‌ ಯೋಜನೆಯು ರಾಜ್ಯ ಸರ್ಕಾರದ್ದು ಎಂದು ಹೇಳಿಕೊಂಡು ಇಶಾ ಫೌಂಡೇಶನ್‌ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದೆ. ಆ ಮೂಲಕ ಜನರ ದಾರಿ ತಪ್ಪಿಸಲಾಗುತ್ತಿದೆ” ಎಂದು ಪೀಠ ಹೇಳಿತು.

Also Read
ಕಾವೇರಿ ಕಾಲಿಂಗ್‌ ನನ್ನ ಯೋಜನೆಯಲ್ಲ ಎಂದು ಅಧಿಸೂಚನೆ ಪ್ರಕಟಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮೌಖಿಕ ಸೂಚನೆ

ವಿಚಾರಣೆ ಪ್ರಗತಿಕಂಡಂತೆ, ಕಾವೇರಿ ಕಾಲಿಂಗ್‌ ರಾಜ್ಯ ಸರ್ಕಾರ ಯೋಜನೆಯಲ್ಲ ಎಂದು ಸಾರ್ವಜನಿಕರಿಗೆ ತಿಳಿಸುವ ನೋಟಿಸ್‌ ಹೊರಡಿಸುವ ಇರಾದೆಯನ್ನು ಇಶಾ ಫೌಂಡೇಶನ್‌ ಹೊಂದಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಫೌಂಡೇಶನ್‌ನಿಂದ ಮಾಹಿತಿ ಪಡೆಯುವುದಾಗಿ ಹಿರಿಯ ವಕೀಲ ಉದಯ್‌ ಹೊಳ್ಳ ಹೇಳಿದರು.

ಕಾವೇರಿ ಕಾಲಿಂಗ್‌ ಯೋಜನೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸದಂತೆ ಸದ್ಗುರು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಶನ್‌ಗೆ ನಿರ್ದೇಶಿಸುವಂತೆ ಕೋರಿದ್ದ ಮನವಿಯನ್ನು ಸ್ವಯಂಪ್ರೇರಿತ ಮನವಿಯನ್ನಾಗಿ ನ್ಯಾಯಾಲಯ ಈಚೆಗೆ ಪರಿಗಣಿಸಿತ್ತು.

Related Stories

No stories found.
Kannada Bar & Bench
kannada.barandbench.com