ಇದೇನಿದು ಮಕ್ಕಳಾಟ; ಕೆಲ ಅಧಿಕಾರಿಗಳನ್ನು ಬಂಧಿಸದ ಹೊರತು ಏನೂ ಆಗುವುದಿಲ್ಲ: ಅಧಿಕಾರಿಗಳ ನಡೆಗೆ ಹೈಕೋರ್ಟ್‌ ಕಿಡಿ

“ಅಧಿಕಾರಿಗಳಿಗೆ ಸೂಕ್ಷ್ಮತೆ ಇಲ್ಲವಾಗಿದೆ. ನಮ್ಮ ಆದೇಶಗಳನ್ನು ಅವರು ಗೌರವಿಸದಿದ್ದರೆ ಅದನ್ನು ಹೇಗೆ ಗೌರವಿಸಬೇಕು ಎಂದು ಮಾಡುವುದು ನಮಗೆ ಗೊತ್ತಿದೆ. ನ್ಯಾಯಾಂಗ ನಿಂದನೆಯನ್ನು ನೀವು ಸರಳವಾಗಿ ತೆಗೆದುಕೊಂಡಿದ್ದೀರಿ” ಎಂದು ಕಿಡಿಕಾರಿದ ನ್ಯಾಯಾಲಯ.
Karnataka High Court
Karnataka High Court

ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ಅಧಿಕಾರಿಗಳನ್ನು ಬಂಧಿಸದ ಹೊರತು ಏನೂ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಎಂ ಎಸ್‌ ಶಶಿಧರ್‌ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಗುಂಡ್ಲುಪೇಟೆ ತಾಲ್ಲೂಕಿನ ಸೋಮಹಳ್ಳಿಯ ಶ್ರೀ ಗಂಗಾಧರ ವಿದ್ಯಾ ಸಂಸ್ಥೆಗೆ ಸೇರಿದ ಕೊತ್ತಲವಾಡಿಯಲ್ಲಿರುವ ಗಂಗಾಧರೇಶ್ವರ ಪ್ರೌಢಶಾಲೆಯ ಕಲಾ ಶಿಕ್ಷಕರನ್ನಾಗಿ ನೇಮಿಸುವ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ 2022ರ ಆಗಸ್ಟ್‌ 3ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪಾಲಿಸದ್ದನ್ನು ಪ್ರಶ್ನಿಸಿ ಶಶಿಧರ್‌ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯ ವೇಳೆ ನ್ಯಾ. ದೀಕ್ಷಿತ್‌ ಅವರು “ಏಕಸದಸ್ಯ ಪೀಠವು ಸರ್ಕಾರಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ನೀವು (ಸರ್ಕಾರ) ನ್ಯಾಯಾಲಯಕ್ಕಿಂತ ಬುದ್ದಿವಂತರು ಎಂದು ತೋರಿಸುತ್ತಿದ್ದೀರಾ? ಎಲ್ಲರ ವಾದ ಆಲಿಸಿದ ಬಳಿಕ ಏಕಸದಸ್ಯ ಪೀಠ ಮೂರು ತಿಂಗಳ ಕಾಲಾವಕಾಶ ನೀಡಿದೆ. ನೀವು ಕಾಲಾವಕಾಶ ಕೋರಿಲ್ಲ. ಈಗ ನೀವು ಈ ರೀತಿ ವಾದಿಸುತ್ತಿದ್ದೀರಿ” ಎಂದು ಕಿಡಿಕಾರಿತು.

“2022ರ ಆಗಸ್ಟ್‌ 3ರಲ್ಲಿ ಏಕಸದಸ್ಯ ಪೀಠ ಆದೇಶ ಮಾಡಿದೆ. (ಶ್ರೀ ಗಂಗಾಧರ ವಿದ್ಯಾ ಸಂಸ್ಥೆಗೆ) ವೇತನ ಅನುದಾನ ತಡೆ ಹಿಡಿಯಿರಿ. ನಿಮ್ಮ ಅಧಿಕಾರಿಗಳಿಗೆ ಏನು ಮಾಡಬೇಕು ಎಂದು ಗೊತ್ತಿಲ್ಲವೇ? (ಶಿಕ್ಷಣ ಸಂಸ್ಥೆಯ) ಒಂದು ತಿಂಗಳು ವೇತನ ಅನುದಾನ ತಡೆಹಿಡಿಯಿರಿ ಅವರು ನಿಮ್ಮ ಕಚೇರಿಗೆ ಬರುತ್ತಾರೆ” ಎಂದು ಪೀಠ ಮೌಖಿಕವಾಗಿ ಹೇಳಿತು.

ನ್ಯಾ. ದೀಕ್ಷಿತ್‌ ಅವರು “ಕೆಲವು ಅಧಿಕಾರಿಗಳನ್ನು ಬಂಧಿಸದ ಹೊರತು ಏನೂ ಆಗುವುದಿಲ್ಲ. ಅವರನ್ನು ಬಂಧಿಸಬೇಕು. ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಲು ಅದೊಂದೇ ದಾರಿ ಇರುವುದು. ಇಲ್ಲವಾದರೆ ಹಲವು ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗಲಿವೆ. ಇದು ಅತಿಯಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

“ಸರ್ಕಾರಿ ಅಧಿಕಾರಿಗಳ ಬಂಧನ ಮತ್ತು ವಶಕ್ಕೆ ಪಡೆಯುವುದು ಆಗಲೇಬೇಕು. ಅದೊಂದೇ ದಾರಿ ಇರುವುದು. ಅಧಿಕಾರಿಗಳಿಗೆ ಸೂಕ್ಷ್ಮತೆ ಇಲ್ಲವಾಗಿದೆ. ನಮ್ಮ ಆದೇಶಗಳನ್ನು ಅವರು ಗೌರವಿಸದಿದ್ದರೆ ಅದನ್ನು ಹೇಗೆ ಗೌರವಿಸಬೇಕು ಎಂದು ಮಾಡುವುದು ನಮಗೆ ಗೊತ್ತಿದೆ. ನ್ಯಾಯಾಂಗ ನಿಂದನೆಯನ್ನು ನೀವು ಸರಳವಾಗಿ ತೆಗೆದುಕೊಂಡಿದ್ದೀರಿ. ನ್ಯಾಯಾಲಯದ ಆದೇಶಗಳನ್ನು ಏಕೆ ಜಾರಿ ಮಾಡುತ್ತಿಲ್ಲ? ನಿಮಗೆ ಸಮಾಧಾನ ಇಲ್ಲದಿದ್ದರೆ ಅವುಗಳನ್ನು (ನ್ಯಾಯಾಲಯದ ಆದೇಶ) ಪ್ರಶ್ನಿಸಿ. ಒಮ್ಮೆ ಆದೇಶ ಮಾಡಿದರೆ ನ್ಯಾಯಾಂಗ ನಿಂದನೆಗೆ ಅವಕಾಶ ಇರಬಾರದು. ನ್ಯಾಯಾಲಯದ ಆದೇಶವನ್ನು ಪಾಲಿಸಿ, ಅನುಪಾಲನಾ ವರದಿ ಹಾಕಬೇಕು. ಇದೇನಿದು ಮಕ್ಕಳಾಟ? ಪ್ರತಿದಿನ 20 ನ್ಯಾಯಾಂಗ ನಿಂದನೆ ಪ್ರಕರಣ. ಇದಕ್ಕಾಗಿ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಇದಕ್ಕಾಗಿ ಕೆಲವರ ಬಂಧನ, ವಶಕ್ಕೆ ಆದೇಶ ಮಾಡಬೇಕಿದೆ. ಇದಕ್ಕೆ ಮಿತಿ ಇರಬೇಕು” ಎಂದು ಕಿಡಿಕಾರಿತು.
“ವೇತನ ಇಲ್ಲದೇ ಜನರು ಏನು ಮಾಡಬೇಕು? ನೀವೇಕೆ ಆ ಸಂಸ್ಥೆಗೆ ಅನುದಾನ ಬಿಡುಗಡೆಗೆ ನಿರ್ಬಂಧ ವಿಧಿಸಿಲ್ಲ. ಇದರರ್ಥ ನೀವು ಅವರ ಜೊತೆ ಕೈಜೋಡಿಸಿದ್ದೀರಿ. ಅಂದು ನಾವು ಆ ಅಧಿಕಾರಿಗಳಿಗೆ ಏನು ಮಾಡುತ್ತೀವೋ ಗೊತ್ತಿಲ್ಲ” ಎಂದು ಎಚ್ಚರಿಸಿದರು.

ಅಂತಿಮವಾಗಿ ಪೀಠವು “ಪ್ರಸ್ತಾವವು ಸರ್ಕಾರದ ಮುಂದೆ ಬಾಕಿ ಇದೆ. ಮ್ಯಾನೇಜ್‌ಮೆಂಟ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲ. ಏಕಸದಸ್ಯ ಪೀಠದ ಆದೇಶ ಪಾಲನೆಯಾಗಿಲ್ಲ. 2022ರ ಆಗಸ್ಟ್‌ 3ರಂದು ಏಕಸದಸ್ಯ ಪೀಠವು ಮೂರು ತಿಂಗಳಲ್ಲಿ ಆದೇಶ ಪಾಲಿಸಬೇಕು ಎಂದಿದೆ. ಆದೇಶ ಪಾಲಿಸದಿರುವುದಕ್ಕೆ ಸೂಕ್ತ ಕಾರಣ ನೀಡಲಾಗಿಲ್ಲ. ನ್ಯಾಯಾಂಗ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ಸಹ ಜಾರಿ ಮಾಡಲಾಗಿದೆ. ಪ್ರತಿವಾದಿಗಳು ಆದೇಶ ಪಾಲನೆಯ ವಿಚಾರದಲ್ಲಿ ತಾತ್ಸಾರ ಭಾವ ಹೊಂದಿದ್ದಾರೆ. ಏಕೆ ಎಂಬುದಕ್ಕೆ ಕಾರಣ ಅವರಿಗೆ ಮಾತ್ರ ಗೊತ್ತು. ನ್ಯಾಯಾಲಯದ ಆದೇಶ ಉಲ್ಲಂಘಿಸುವ ದಾರ್ಷ್ಟ್ಯ ತೋರಿದ್ದಾರೆ. ಎಲ್ಲಾ ಪ್ರತಿವಾದಿಗಳು ಡಿಸೆಂಬರ್‌ 20ರಂದು ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ನಿರ್ದೇಶಿಸಿದೆ. 

Related Stories

No stories found.
Kannada Bar & Bench
kannada.barandbench.com