"ಅವಿವಾಹಿತ ಹಲವರೊಂದಿಗೆ ಸಂಬಂಧ ಹೊಂದಿದ್ದರೆ ತಪ್ಪೇನು?" ಶಾಸಕ ಮಮ್ಕೂಟತ್ತಿಲ್ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಪ್ರಶ್ನೆ

ಮತ್ತೊಂದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಇಂದು (ಬುಧವಾರ) ಬೆಳಿಗ್ಗೆ ಮಮ್ಕೂಟತ್ತಿಲ್ ಅವರಿಗೆ ಜಾಮೀನು ನೀಡಿತ್ತು.
Rahul Mamkootathil with Kerala High Court
Rahul Mamkootathil with Kerala High Courtfacebook
Published on

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಾಹುಲ್ ಮಮ್ಕೂಟತ್ತಿಲ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ವಿವಿಧ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಯೆಂಬ ಆರೋಪವನ್ನಷ್ಟೇ ಆಧಾರವಾಗಿರಿಸಿಕೊಂಡು ಜಾಮೀನು ತಿರಸ್ಕರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ವಿವಾಹವಾಗದ ವ್ಯಕ್ತಿಯೊಬ್ಬ ಅನೇಕರೊಂದಿಗೆ ಸಮ್ಮತಿಯ ಲೈಂಗಿಕ ಸಂಬಂಧ ಹೊಂದುವುದರಲ್ಲಿ ಕಾನೂನು ಪ್ರಕಾರ ತಪ್ಪೇನಿದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ವಿಚಾರಣೆ ವೇಳೆ ಕೇಳಿದರು.

ಪ್ರಸಕ್ತ ಪ್ರಕರಣವು 2025ರ ನವೆಂಬರ್ 27ರಂದು ಸಂತ್ರಸ್ತೆ ಎಂದು ಹೇಳಿಕೊಂಡ ಮಹಿಳೆ ಹಾಗೂ ಅವರ ಕುಟುಂಬದವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿದ ದೂರನ್ನು ಆಧರಿಸಿದೆ. ದೂರಿನಲ್ಲಿ ಶಾಸಕ ಮಮ್ಕೂಟತ್ತಿಲ್‌ ಅವರು ಅತ್ಯಾಚಾರ ಎಸಗಿದ್ದಾರೆ, ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಹಾಗೂ ಒಪ್ಪಿಗೆಯಿಲ್ಲದೆ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು.

ಪ್ರಸ್ತುತ ಮಮ್ಕೂಟತ್ತಿಲ್‌ ಅವರ ವಿರುದ್ಧ ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ಜಾಮೀನು ದೊರೆತಿದೆ, ಮೂರನೇ ಪ್ರಕರಣದಲ್ಲಿ ಅವರ ಬಂಧನಕ್ಕೆ ಹೈಕೋರ್ಟ್ ತಡೆ ನೀಡಿತ್ತು.

Also Read
ಮೂರನೇ ಅತ್ಯಾಚಾರ ಪ್ರಕರಣ: ಕೇರಳ ಶಾಸಕ ರಾಹುಲ್‌ ಮಮ್ಕೂಟತ್ತಿಲ್‌ಗೆ ಜಾಮೀನು ನಿರಾಕರಣೆ

ವಿಚಾರಣೆಯಲ್ಲಿ, ಆರೋಪಿತ ಮತ್ತು ದೂರುದಾರರ ನಡುವೆ ಘಟನೆಗೂ ಮುನ್ನ ಸಮ್ಮತಿಯ ಸಂಬಂಧ ಇತ್ತು ಎಂಬುದನ್ನು ನ್ಯಾಯಾಲಯ ಗಮನಿಸಿತು. ದೂರುದಾರೆಯೇ ಘಟನೆಯ ನಂತರ ಮಮ್ಕೂಟತ್ತಿಲ್‌ ಅವರೊಂದಿಗೆ ಎರಡು ದಿನಗಳ ಕಾಲ ಉಳಿದು ಒಪ್ಪಿಗೆಯ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಅಂಶವನ್ನು ಪ್ರಸ್ತಾಪಿಸಿದ ಅದು ವಿವಾದಿತ ಘಟನೆ ಒಪ್ಪಿಗೆಯ ಲೈಂಗಿಕ ಸಂಬಂಧವೇ ಅಥವಾ ಬಲವಂತದ ಕ್ರಿಯೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿತು. ನಗ್ನ ವಿಡಿಯೋ  ಚಿತ್ರೀಕರಣ ಪ್ರತ್ಯೇಕ ಅಪರಾಧವಾಗಿದ್ದು, ಅದನ್ನು ಬೇರೆ ರೀತಿಯಲ್ಲಿ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿತು.

ಇಂದಿನ ವಾದಗಳನ್ನು ಆಲಿಸಿದ ಬಳಿಕ, ಹೈಕೋರ್ಟ್ ಮಮ್ಕೂಟತ್ತಿಲ್‌ ಅವರ ಜಾಮೀನು ಅರ್ಜಿ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದೆ. ಇತ್ತ, ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ಆಗಸ್ಟ್‌ನಲ್ಲಿ ಅವರನ್ನು ಪಕ್ಷದ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು. ಬಳಿಕ  ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೂ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರಾಹುಲ್‌ ಮುಂದುವರೆದಿದ್ದು, ಇಂದು ಬೆಳಿಗ್ಗೆ ಮೂರನೇ ಪ್ರಕರಣದಲ್ಲಿಯೂ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.

Kannada Bar & Bench
kannada.barandbench.com